ಕಳಚಿ ಬೀಳುತ್ತಿರುವ ಅಂಗನವಾಡಿ ಮೇಲ್ಛಾವಣಿ, ಆತಂಕದಲ್ಲಿ ಮಕ್ಕಳು

ಈ ಸುದ್ದಿಯನ್ನು ಶೇರ್ ಮಾಡಿ

huliyar

ಹುಳಿಯಾರು, ಮಾ.20- ಹಂದನಕೆರೆ ಹೋಬಳಿಯ ನಡುವನಹಳ್ಳಿಯ ಅಂಗನವಾಡಿ ಕಟ್ಟಡ ತುಂಬಾ ಶಿಥಿಲಗೊಂಡಿದೆ. ಒಳಭಾಗದ ಗೋಡೆ ಮತ್ತು ಛಾವಣಿ ಸೀಳು ಬಿಟ್ಟಿದ್ದು, ಕಟ್ಟಡ ಯಾವಾಗ ಬೇಕಾದರೂ ಕುಸಿಯಬಹುದು ಎಂಬ ಆತಂಕ ಪೋಷಕರು ಮತ್ತು ಮಕ್ಕಳನ್ನು ಕಾಡುತ್ತಿದೆ.ಮಳೆಗಾಲದಲ್ಲಂತೂ ಇಲ್ಲಿ ಇರಲಾಗುವುದಿಲ್ಲ. ಕಟ್ಟಡದ ಮಾಳಿಗೆಯಿಂದ ಸೋರುವ ಮಳೆ ನೀರಿನಿಂದ ಇಲ್ಲಿ ಇರಲು ಕಷ್ಟವಾಗುತ್ತದೆ. ಇಲ್ಲಿ ಪ್ರತಿ ದಿನ 22 ಮಕ್ಕಳು ಬರುತ್ತಾರೆ. ಮಕ್ಕಳು ಅಂಗನವಾಡಿಯಿಂದ ವಾಪಸ್ ಮನೆಗೆ ಬರುವವರೆಗೆ ಪೋಷಕರಿಗೆ ನೆಮ್ಮದಿ ಇರಲು ಸಾಧ್ಯವಿಲ್ಲವೆನ್ನುವಂತಾಗಿದೆ.ಕಟ್ಟಡ ದುರಸ್ತಿಗೆ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಗೋಡೆ ಕುಸಿಯುವ ಆತಂಕದಿಂದ ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಕಟ್ಟಡದ ಹೊರಗಿನ ತೆಂಗಿನ ಮರದ ಕೆಳಗೆ ಅಂಗನವಾಡಿ ನಡೆಸುವಂತಾಗಿದೆ. ಇನ್ನು ಸಹಾಯಕಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ಕಟ್ಟಡದ ಒಳಗೆ ಅಡುಗೆ ಮಾಡುವಂತಹ ಅನಿವಾರ್ಯತೆ ಸೃಷ್ಟಿಯಾಗಿದೆ.

huliyar2
ಒಂದೊಮ್ಮೆ ಗೋಡೆ, ಛಾವಣಿ ಕುಸಿದು ಅನಾಹುತ ಸಂಭವಿಸಿದ ನಂತರ ಪರಿಹಾರ ಕ್ರಮ ಕೈಗೊಳ್ಳುವ ಬದಲು ಈಗಲೇ ಮುಂಜಗ್ರತೆ ವಹಿಸುವುದು ಅಗತ್ಯ. ಶಿಥಿಲ ಕಟ್ಟಡವನ್ನು ಕೆಡವಿ, ಹೊಸ ಕಟ್ಟಡ ನಿರ್ಮಿಸಬೇಕು. ಈ ಬಗ್ಗೆ ಹಲವು ಬಾರಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ದಿನಕ್ಕೊಂದು ಅಗ್ಗದ ಯೋಜನೆ ಪ್ರಕಟಿಸುತ್ತಲೇ ಇರುವ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಸುಸಜ್ಜಿತ ಸ್ವಂತ ಕಟ್ಟಡ ಸೌಲಭ್ಯ ಕಲ್ಪಿಸಲು ಮುಂದಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.ಅಧಿಕಾರಿಗಳು ಇನ್ನಾದರೂ ಈ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಿ. ಕಟ್ಟಡ ದುರಸ್ತಿ ಮಾಡುವ ಅಥವಾ ಹೊಸ ಕಟ್ಟಡ ನಿರ್ಮಿಸುವವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗುವರೇ?

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin