ಕಳಪೆ ಕಟ್ಟಡಕ್ಕೆ ಗುಣಮಟ್ಟದ ಪ್ರಮಾಣ ಪತ್ರ ದೊರೆತದ್ದು ಹೇಗೆ…?

ಈ ಸುದ್ದಿಯನ್ನು ಶೇರ್ ಮಾಡಿ

Building Collapse

ಬೆಂಗಳೂರು, ಅ.6- ಬೆಳ್ಳಂದೂರು ಗೇಟ್ ಸಮೀಪ ಮೂವರು ಅಮಾಯಕ ಕೂಲಿಗಳ ದಾರುಣ ಸಾವಿಗೆ ಕಾರಣವಾಸದ ನೆಲಸಮಗೊಂಡ ಐದು ಅಂತಸ್ತಿನ ವಸತಿಗೃಹ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳೇ ಗುಣಮಟ್ಟದ ಪ್ರಮಾಣಪತ್ರ ನೀಡಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಆಂಧ್ರ ಮೂಲದ ವ್ಯಕ್ತಿಯೊಬ್ಬರು ವಸತಿಗೃಹ ನಿರ್ಮಿಸಲು ಬಿಬಿಎಂಪಿಯಿಂದ ಮೂರು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ಪಡೆದಿದ್ದಾರೆ. ಆದರೂ ಕಾನೂನು ಉಲ್ಲಂಘಿಸಿ ಐದು ಅಂತಸ್ತಿನ ಕಟ್ಟಡ ನಿರ್ಮಿಸಲು ಮುಂದಾಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿಕುಳಿತಿದ್ದು ಇದೀಗ ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಿಯಲ್‍ಎಸ್ಟೇಟ್ ಉದ್ಯಮ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಅನ್ಯರಾಜ್ಯಗಳ ಬಿಲ್ಡರ್‍ಗಳು ನಗರದಲ್ಲಿ ಕಳಪೆ ಕಾಮಗಾರಿ ನಡೆಸಿ ಸದೃಢವಲ್ಲದ ವಸತಿಗೃಹಗಳನ್ನು ನಿರ್ಮಿಸಿ ಕಡಿಮೆ ಬೆಲೆಗೆ ಅಮಾಯಕರಿಗೆ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಸಮಾಜ ವಿದ್ರೋಹಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಸಾಥ್ ನೀಡುತ್ತಿರುವುದು ಬೆಳ್ಳಂದೂರು ಕಟ್ಟಡ ಕುಸಿತ ಘಟನೆ ನಂತರ ಬಹಿರಂಗಗೊಂಡಿದೆ.

ಕೇವಲ ಮೂರು ಅಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದು ಕಾನೂನು ಬಾಹಿರವಾಗಿ ಐದು ಮಹಡಿಗಳ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ಕಳಪೆ ವಸ್ತುಗಳನ್ನು ಉಪಯೋಗಿಸುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಗುಣಮಟ್ಟದ ಪ್ರಮಾಣಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಬಿಬಿಎಂಪಿಯಲ್ಲಿ ತಲ್ಲಣ ಸೃಷ್ಟಿಸಿದ್ದು, ನಗರದ ಹೊರವಲಯಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ನೂರಾರು ವಸತಿ ಸಮುಚ್ಚಯಗಳ ಸದೃಢತೆ ಬಗ್ಗೆ ಹಲವಾರು ಅನುಮಾನಗಳನ್ನು ಮೂಡಿಸುತ್ತಿದೆ. ಬೆಳ್ಳಂದೂರು ಸಮೀಪದ ಕಟ್ಟಡಕ್ಕೆ ಗುಣಮಟ್ಟದ ಪ್ರಮಾಣಪತ್ರ ನೀಡಿರುವ ಪ್ರಕರಣವನ್ನು ಬಿಬಿಎಂಪಿ ಆಯುಕ್ತರು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಆಯುಕ್ತ ಮನೋಜ್‍ಕುಮಾರ್ ಕಟ್ಟಡಕ್ಕೆ ಗುಣಮಟ್ಟದ ಪ್ರಮಾಣಪತ್ರ ನೀಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗುಡುಗಿದ್ದಾರೆ.

ಕಟ್ಟಡಗಳ ಗುಣಮಟ್ಟ ಮರುಪರಿಶೀಲನೆ ಅಗತ್ಯ:

ಬೆಳ್ಳಂದೂರು ದುರಂತ ಪ್ರಕರಣದ ನಂತರ ಹೊಸ ಅಪಾರ್ಟ್‍ಮೆಂಟ್‍ಗಳಲ್ಲಿ ನೆಲೆಸಿರುವ ನಾಗರಿಕರಲ್ಲಿ ಕಟ್ಟಡ ಭದ್ರತೆ ಬಗ್ಗೆ ಆತಂಕ ಮನೆ ಮಾಡಿದೆ.
ಬಿಬಿಎಂಪಿ ನೀಡಿರುವ ಗುಣಮಟ್ಟದ ಪ್ರಮಾಣಪತ್ರದ ಆಧಾರದ ಮೇಲೆ ನಾವು ಪ್ಲಾಟ್ ಕೊಂಡುಕೊಂಡಿದ್ದೇವೆ. ಆದರೆ, ಬಿಬಿಎಂಪಿ ಅಧಿಕಾರಿಗಳು ನೀಡಿರುವ ಪ್ರಮಾಣಪತ್ರವೇ ಹುಸಿಯಾಗಿರುವುದರಿಂದ ನಾವು ವಾಸಿಸುತ್ತಿರುವ ಪ್ಲಾಟ್‍ಗಳ ಗುಣಮಟ್ಟದ ಬಗ್ಗೆಯೂ ಅನುಮಾನ ಮೂಡಿಸುತ್ತಿದೆ. ಬಿಬಿಎಂಪಿಯಾಗಲಿ, ಸರ್ಕಾರವಾಗಲಿ ಹೊಸದಾಗಿ ನಿರ್ಮಿಸುತ್ತಿರುವ ವಸತಿಸಮುಚ್ಚಯಗಳ ಗುಣಮಟ್ಟವನ್ನು ಮರುಪರಿಶೀಲನೆ ಮಾಡುವ ಅಗತ್ಯವಿದೆ ಎನ್ನುತ್ತಾರೆ ಅಪಾರ್ಟ್‍ಮೆಂಟ್‍ನ ನಿವಾಸಿಯಾಗಿರುವ ಸುಬ್ರಹ್ಮಣ್ಯ ಅವರು.

ಪ್ರಕರಣ ದಾಖಲು:

ಆಂಧ್ರ ಮೂಲದ 6 ಮಂದಿ ಪಾಲುದಾರರನ್ನೊಳಗೊಂಡ ಆರ್‍ಕೆ ಅಸೋಸಿಯೇಟ್ಸ್ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಪೆÇಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಎಚ್‍ಎಸ್‍ಆರ್ ಬಡಾವಣೆ ಪೆÇಲೀಸರು ಪ್ರಕರಣದ ಬೆನ್ನತ್ತಿದ್ದಾರೆ.

ಮುಂದುವರೆದ ಕಾರ್ಯಾಚರಣೆ:

ಕುಸಿದು ಬಿದ್ದಿರುವ ಕಟ್ಟಡದ ಅವಶೇಷ ತೆರವು ಕಾರ್ಯಾಚರಣೆ ಇಂದೂ ಕೂಡ ಮುಂದುವರೆದಿದ್ದು, ಸಂಪೂರ್ಣ ಅವಶೇಷ ತೆರವುಗೊಳಿಸಲು ಇನ್ನೂ ಎರಡು ದಿನಗಳ ಕಾರ್ಯಾಚರಣೆ ನಡೆಯಲಿದೆ. 120ಕ್ಕೂ ಹೆಚ್ಚು ಸಿಬ್ಬಂದಿಗಳು ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಜೆಸಿಬಿ ಯಂತ್ರಗಳನ್ನು ಬಳಸಿ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ.
ತೆರವು ಕಾರ್ಯಾಚರಣೆಯಲ್ಲಿ ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ಕುಸಿದ ಕಟ್ಟಡದ ಅವಶೇಷದಡಿ ಸಿಲುಕಿದ್ದ 6 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದುವರೆಗೂ ಮೂರು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin