ಕಳಸಾ ಬಂಡೂರಿ ಹೋರಾಟಗಾರರ ಕೇಸ್ ವಾಪಸ್ ಗೆ 27ರಂದು ರೈಲು ತಡೆ

ಈ ಸುದ್ದಿಯನ್ನು ಶೇರ್ ಮಾಡಿ

Rail-Rokho

ಹುಬ್ಬಳ್ಳಿ,ಆ22- ಮಹದಾಯಿ ನದಿ ತಿರುವು ಹಾಗೂ ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನ ಹಾಗೂ ಹೋರಾಟಗಾರರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಇದೇ 27ರಂದು ರಾಜ್ಯಾದ್ಯಂತ ರೈಲು ತಡೆ ಹಾಗೂ ಪ್ರತಿಭಟನೆ ನಡೆಸಲು ಇಂದಿಲ್ಲಿ ಸೇರಿದ್ದ ರೈತ ಮುಖಂಡರು ಕಾರ್ಮಿಕರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು.    ಕಳೆದ ಒಂದು ವರ್ಷದಿಂದ ನೀರಿನ ಹಕ್ಕಿಗಾಗಿ ಹೋರಾಟ ಮಾಡುತ್ತಾ ಬಂದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ರೈತರ ಸಹನೆ ಪರೀಕ್ಷಿಸದೆ ಶೀಘ್ರ ಅನುಷ್ಟಾನಕ್ಕೆ ಮುಂದಾಗ ಬೇಕು ಇಲ್ಲವಾದರೆ ನರಗುಂದ ಮಾದರಿಯ ಇನ್ನೊಂದು ಬಂಡಾಯಕ್ಕೆ ನಾಂದಿ ಹಾಡಬೇಕಾದೀತು ಎಂದು ಸಭೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ಸಂಸದ ಪ್ರಹ್ಲಾದ್ ಜೋಷಿ ಅವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ರೈತರ ಸಮಸ್ಯೆ ಹಾಗೂ ಕಳಸಾ-ಬಂಡೂರಿ ಅನುಷ್ಟಾನಕ್ಕೆ ಪ್ರಧಾನಿ ಅವರಲ್ಲಿ ಒತ್ತಡ ತರಬೇಕೆಂದು ಸಭೆ ಆಗ್ರಹಿಸಿತಲ್ಲದೆ ಈ ವಿಷಯದಲ್ಲಿ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದೆಂದು ಮುಖಂಡರುಗಳು ಎಚ್ಚರಿಕೆ ನೀಡಿದರು.   ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಇನ್ನೊಂದು ಬಾರಿ ರೈತ ಮುಖಂಡರು ಸೇರಿದಂತೆ ಸರ್ವ ಪಕ್ಷಗಳ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ದು ಪ್ರಧಾನಿಗೆ ಒತ್ತಡ ಹೇರಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.

ನೀರಿನ ವಿಷಯದಲ್ಲಿ ರಾಜಕೀಯ ಮಾಡದೇ ಎಲ್ಲಾ ರಾಜಕೀಯ ಮುಖಂಡರು ಬದ್ಧತೆ ತೋರಿಸಬೇಕು ಎಂದು ಸಭೆ ಅಭಿಪ್ರಾಯ ಪಟ್ಟಿತು. ಯುಮನೂರಿನಲ್ಲಿ ಮಹಿಳೆಯರು ಹಾಗೂ ಅಮಾಯಕರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಬಗ್ಗೆ ಖಂಡಿಸಲಾಯಿತು.   ದಲಿತ ಮುಖಂಡ ಪೀತಾಂಬರಪ್ಪ ಬೀಳಾರ, ಜಾಗೀರ್ಧಾರ್, ಸಾಯಿಕುಮಾರ್, ಬಸೀರ್ ಮುಧೋಳ, ಪುಷ್ಪ ಹಿರೇಮಠ, ರಮೇಶ್ ಭೋಸಲೆ, ಸಿದ್ದು ತೇಜಿ, ಬಾಬಾ ಜಾನ್ ಮುಧೋಳ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.   ಕರ್ನಾಟಕ ರಾಜ್ಯ ರೈತ ಸಂಘ, ಎಸ್ಡಿಪಿಐ, ದಲಿತ ಸಂಘಟನೆಗಳು, ಎಐಟಿಯುಸಿ, ಸಿಐಟಿಯು, ಆಟೋ ಚಾಲಕರ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.

► Follow us on –  Facebook / Twitter  / Google+

Facebook Comments

Sri Raghav

Admin