ಕಳ್ಳತನ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

4-Arrest

ಬೆಂಗಳೂರು, ಸೆ.24-ಹಗಲು ಮತ್ತು ರಾತ್ರಿ ವೇಳೆ ಬೀಗ ಹಾಕಿರುವ ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಅವುಗಳನ್ನು ಗಿರವಿ ಅಂಗಡಿಯಲ್ಲಿಟ್ಟು ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ನಾಲ್ಕು ಮಂದಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಪಾಂಡಿರಾಜ್(21), ಮಂಜುನಾಥ್(22), ಪ್ರವೀಣ್(23), ನವೀನ್‍ಕುಮಾರ್(21) ಬಂಧಿತ ಆರೋಪಿಗಳಾಗಿದ್ದು, ಇವರಿಂದ 50 ಲಕ್ಷ ರೂ. ಬೆಲೆ ಬಾಳುವ 1ಕೆಜಿ 271 ಗ್ರಾಂ ತೂಕದ ಚಿನ್ನಾಭರಣ ಮತ್ತು ಮೂರು ಕೆಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ನಾಲ್ವರು ನಗರದ ವಿವಿಧ ಸ್ಥಳಗಳಲ್ಲಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಬೀಗ ಹಾಕಿರುವ ಮನೆಗಳಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದರಲ್ಲದೆ, ಸಾರ್ವಜನಿಕರ ಗಮನ ಸೆಳೆದು ವಂಚಿಸಿ ಹಾಗೂ ಬಸ್‍ಗಳಲ್ಲಿ ಪ್ರಯಾಣಿಕರ ಲಗೇಜ್ ಬ್ಯಾಗ್ ಮತ್ತು ಪರ್ಸ್‍ಗಳನ್ನು ಕಳ್ಳತನ ಮಾಡುತ್ತಿದ್ದರು.

ಕಳ್ಳತನ ಮಾಡಿದ ಆಭರಣಗಳನ್ನು ಮಣಪುರಂ, ಮುತ್ತೂಟ್ ಫೈನಾನ್ಸ್‍ಗಳಲ್ಲಿ ಗಿರವಿ ಇಟ್ಟು ಹಣ ಪಡೆಯುತ್ತಿದ್ದರಲ್ಲದೆ, ಒಡವೆ ಅಂಗಡಿಗಳಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಜೂಜಿಗಾಗಿ, ಮೋಜಿಗಾಗಿ ಬಳಕೆ ಮಾಡುತ್ತಿದ್ದದು ವಿಚಾರಣೆಯಿಂದ ತಿಳಿದುಬಂದಿದೆ. ಇವರ ಬಂಧನದಿಂದ ಕಲಾಸಿಪಾಳ್ಯ, ಕೆಂಗೇರಿ, ಉಪ್ಪಾರಪೇಟೆ, ಕಾಟನ್‍ಪೇಟೆ, ಮಾರ್ಕೆಟ್, ವಿದ್ಯಾರಣ್ಯಪುರ, ಬ್ಯಾಟರಾಯನಪುರ, ಚಿಕ್ಕಪೇಟೆ, ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 20 ಪ್ರಕರಣಗಳು ಪತ್ತೆಯಾದಂತಾಗಿದೆ. ಚಿಕ್ಕಪೇಟೆ ಉಪವಿಭಾಗದ ಎಸಿಪಿ ನಿರಂಜನ್‍ರಾಜ್ ಅರಸ್, ಕಲಾಸಿಪಾಳ್ಯ ಇನ್‍ಸ್ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin