ಕಸ ವಿಲೇವಾರಿಯ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆಯಾಗಲಿ

ಈ ಸುದ್ದಿಯನ್ನು ಶೇರ್ ಮಾಡಿ

Padmanabhareddy--02

ಬೆಂಗಳೂರು, ನ.15- ನಗರದ ಸಮರ್ಪಕ ಕಸ ವಿಲೇವಾರಿಗಾಗಿ 500 ಕೋಟಿ ಖರ್ಚು ಮಾಡಿ ಸಂಸ್ಕರಣಾ ಘಕಟಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಪಾಲಿಕೆ ಆಡಳಿತ ವೈಫಲ್ಯದಿಂದ ಕಸ ವಿಲೇವಾರಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿರುವುದು ಲೆಕ್ಕಪತ್ರ ಪರಿಶೋಧನೆಯಲ್ಲಿ ಬಹಿರಂಗಗೊಂಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ತನಿಖೆಗೆ ಆದೇಶಿಸಬೇಕೆಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಇಂದಿಲ್ಲಿ ಆಗ್ರಹಿಸಿದರು.

ಇಷ್ಟೆಲ್ಲಾ ಅವ್ಯವಹಾರಗಳಿಗೆ ಬಿಬಿಎಂಪಿ ಆರೋಗ್ಯ ವಿಭಾಗದ ಜಂಟಿ ಆಯುಕ್ತರೇ ನೇರ ಹೊಣೆ. ಅವ್ಯವಹಾರ ನಡೆಯುತ್ತಿದ್ದರೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಆಗಲಿ ಅಥವಾ ಸಂಬಂಧಪಟ್ಟವರಾಗಲಿ ಬಾಯಿ ಬಿಡದೆ ಇರುವುದು ಕಾಂಗ್ರೆಸ್ ಆಡಳಿತದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸೂಕ್ತ ನಿದರ್ಶನ ಎಂದು ಆರೋಪಿಸಿದ ಅವರು ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು. ಕಸ ಸಂಸ್ಕರಣೆಗಾಗಿ ನಗರದಲ್ಲಿ 7 ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಘಟಕಗಳಿಂದ ಪ್ರತಿನಿತ್ಯ 2700 ಮೆಟ್ರಿಕ್ ಟನ್ ಕಸ ನಿರ್ವಹಣೆ ಮಾಡಲು ಯೋಜನೆ ರೂಪಿಸಲಾಗಿದೆ. ಆದರೆ, ಈ ಘಟಕಗಳಲ್ಲಿ ಕೇವಲ 300 ರಿಂದ 400 ಮೆಟ್ರಿಕ್ ಟನ್ ಕಸವನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಅಂಕಿ-ಅಂಶ ಸಹಿತ ಆರೋಪಿಸಿದರು.

ಅಧಿಕಾರಿಗಳು ಹಣ ಮಾಡುವ ಉದ್ದೇಶದಿಂದ ಬೇಕಾದವರಿಗೆ ಟೆಂಡರ್ ಕರೆದು ಗುತ್ತಿಗೆ ನೀಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಹಣ ಬಿಡುಗಡೆ ಮಾಡುತ್ತಿದ್ದಾರೆ. ಸಂಸ್ಕರಣೆಯಾಗದೆ ಉಳಿಯುವ ಕಸವನ್ನು ಬೇಕಾಬಿಟ್ಟಿ ಬೆಳ್ಳಳ್ಳಿ, ಮಿಟಗಾನಹಳ್ಳಿಯಲ್ಲಿರುವ ಕ್ವಾರಿಗಳಿಗೆ ತಂದು ಸುರಿಯುತ್ತಿದ್ದಾರೆ ಎಂದು ದೂರಿದರು.
ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ತೆರಿಗೆದಾರರ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಘಟಕಗಳಲ್ಲಿನ ಯಂತ್ರಗಳು ತುಕ್ಕು ಹಿಡಿದಿವೆ. ಕಸ ಸಂಸ್ಕರಣೆಗೆ ಟೆಂಡರ್ ಪಡೆದವರು ಒಂದು ಟನ್‍ಗೆ 65 ರಿಂದ 810ರೂ. ಸೇವಾ ಶುಲ್ಕ ವಿಧಿಸಿದ್ದರು. ಇದರಿಂದ ಲಾಭವಿಲ್ಲವೆಂದು ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿ ಅವರನ್ನು ಓಡಿಸಿ ಮನಸೋ ಇಚ್ಛೆ ದುಂದು ವೆಚ್ಚ ಮಾಡಿದ್ದಾರೆ. ಅಧಿಕಾರಿಗಳ ಅವ್ಯವಹಾರ ಲೆಕ್ಕಪತ್ರ ಪರಿಶೋಧನೆಯಲ್ಲಿ ಪತ್ತೆಯಾಗಿದೆ.

ಇದಕ್ಕೆ ಉದಾಹರಣೆ ದೊಡ್ಡಬಿದರಕಲ್ಲಿನ ಘಟಕದಲ್ಲಿ ಒಂದು ಮೆಟ್ರಿಕ್ ಟನ್ ಕಾಂಪೋಸ್ಟ್ ಮಾಡಲು 3667ರೂ. ಖರ್ಚಾಗುತ್ತದೆ. ಆದರೆ, ಟೆಂಡರ್‍ದಾರರನ್ನು ಓಡಿಸಿ ಪಾಲಿಕೆಯವರೇ ಕಾಂಪೋಸ್ಟ್ ಮಾಡುತ್ತಿದ್ದಾರೆ. ಪಾಲಿಕೆಯವರಿಗೆ ಒಂದು ಮೆಟ್ರಿಕ್ ಟನ್ ಕಾಂಪೋಸ್ಟ್ ಮಾಡಲು 19,330ರೂ. ವೆಚ್ಚವಾಗುತ್ತಿದೆ.  ಹೀಗೆ ಉಳಿದ ಏಳು ಘಟಕಗಳಲ್ಲೂ ಅವ್ಯವಹಾರ ಮಾಡಿ ಕೋಟ್ಯಂತರ ರೂ. ಹಣ ಹೊಡೆಯುತ್ತಿದ್ದಾರೆ. ಕ್ವಾರಿಗಳಲ್ಲಿ ವಾಸನೆ ಬರದಂತೆ ಔಷಧಿ ಸಿಂಪಡಿಸಲು ಹಾಗೂ ಸುತ್ತಮುತ್ತಲಿನ ಸ್ಥಳ ಅಭಿವೃದ್ಧಿಪಡಿಸುವ ಹೆಸರಿನಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.

ಕಸ ಸಂಸ್ಕರಣಾ ಘಟಕಗಳ 20 ಕಿಲೋ ಮೀಟರ್ ದೂರದ ಹಳ್ಳಿಗಳನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿ ಹಣ ದರೋಡೆ ಮಾಡಲಾಗುತ್ತಿದೆ. ಇದೆಲ್ಲ ಲೆಕ್ಕ ಪರಿಶೋಧನಾ ವರದಿಯಲ್ಲಿ ಸಾಬೀತಾಗಿರುವುದರಿಂದ ಪಾರದರ್ಶಕ ಆಡಳಿತ ನೀಡುವುದಾಗಿ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಎಲ್ಲ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಆರೋಪಕ್ಕೆ ಗುರಿಯಾಗಿರುವ ಜಂಟಿ ಆಯುಕ್ತರು ಹಾಗೂ ಮತ್ತಿತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪದ್ಮನಾಭರೆಡ್ಡಿ ಒತ್ತಾಯಿಸಿದರು.

Facebook Comments

Sri Raghav

Admin