ಕಾಂಗ್ರೆಸ್‍ಗೆ ಕೈ ಕೊಟ್ಟು ಬಿಜೆಪಿ ಸೇರುವರೇ ಕುಮಾರ್ ಬಂಗಾರಪ್ಪ .. .?

ಈ ಸುದ್ದಿಯನ್ನು ಶೇರ್ ಮಾಡಿ

Kumar-Bangarapp

ಬೆಂಗಳೂರು, ನ.6- ವರ್ಣ ರಂಜಿತ ರಾಜಕಾರಣಿ ಎಂದೇ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಸುಪುತ್ರ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಲಿದ್ದಾರೆಯೇ..? ಏಕೆಂದರೆ, ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅವಲೋಕಿಸಿದರೆ ಕುಮಾರ್ ಬಂಗಾರಪ್ಪ ಸದ್ಯದಲ್ಲೇ ಕಾಂಗ್ರೆಸ್‍ಗೆ ಕೈ ಕೊಟ್ಟು ಕಮಲ ಮುಡಿಗೇರಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಶತಾಯ-ಗತಾಯ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಹಪಹಪಿಸುತ್ತಿರುವ ಬಿಜೆಪಿ ಸಾಧ್ಯವಾದಷ್ಟು ತನ್ನ ಪಕ್ಷಕ್ಕೆ ಬರುವ ನಾಯಕರನ್ನು ಸೆಳೆಯಲು ಕಸರತ್ತು ನಡೆಸುತ್ತಿದೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಕುಮಾರ್ ಬಂಗಾರಪ್ಪ, ಸದ್ಯದಲ್ಲೇ ಕಾರ್ಯಕರ್ತರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಜೀವನದುದ್ದಕ್ಕೂ ಸಮಾಜವಾದಿ ಸಿದ್ಧಾಂತವನ್ನೇ ಮೈಗೂಡಿಸಿಕೊಂಡು ಕೋಮುವಾದಿ ಶಕ್ತಿಗಳನ್ನು ವಿರೋಧಿಸುತ್ತಿದ್ದ ಬಂಗಾರಪ್ಪ ಕೊನೆ ಕ್ಷಣದಲ್ಲಿ ಬಿಜೆಪಿ ಸೇರಿಕೊಂಡಿದ್ದು ಆಶ್ಚರ್ಯವೇನಲ್ಲ.  ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಂಗಾರಪ್ಪ ಅಂದು ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು ಪರಾಭವಗೊಳಿಸಿದ್ದರು. ಬಳಿಕ ಬಿಜೆಪಿಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳಿಂದ ಬೇಸತ್ತು ಹೊರಹೋಗಿದ್ದರು.

ಇದೀಗ ಬಿಜೆಪಿ ತಂದೆಯನ್ನು ಬುಟ್ಟಿಗೆ ಹಾಕಿಕೊಂಡ ಮಾದರಿಯಲ್ಲೇ ಹಿರಿಯ ಪುತ್ರ ಕುಮಾರ್ ಬಂಗಾರಪ್ಪನನ್ನು ಕರೆತರಲು ಮುಂದಾಗಿದೆ. ಸದ್ಯಕ್ಕೆ ಕಾಂಗ್ರೆಸ್‍ನಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಸ್ಥಿತಿ ಅವರದ್ದಾಗಿದೆ. ತಂದೆಯ ನಾಮಬಲದಿಂದ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು.  ತದನಂತರ ತಂದೆ ಮತ್ತು ಕಿರಿಯ ಸಹೋದರ ಹಾಲಿ ಸೊರಬ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಜತೆ ಉಂಟಾದ ಮನಸ್ತಾಪದಿಂದ ಕುಮಾರ್ ಬಂಗಾರಪ್ಪನವರ ರಾಜಕೀಯ ಜೀವನ ಗರ ಬಡಿದಂತಾಯಿತು.

2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕುಮಾರ್ ಬಂಗಾರಪ್ಪ ಅಂದು ಬಿಜೆಪಿ ಅಭ್ಯರ್ಥಿ ಹರತಾಳ ಹಾಲಪ್ಪ ಎದುರು ಪರಾಭವಗೊಂಡಿದ್ದರು.
ಅಷ್ಟೇ ಅಲ್ಲದೆ ಅಂದು ಶಿಕಾರಿಪುರದಲ್ಲಿ ಯಡಿಯೂರಪ್ಪನ ಎದುರು ಬಂಗಾರಪ್ಪ, ಸೊರಬದಲ್ಲಿ ಹಾಲಪ್ಪ ಎದುರು ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಸೋಲು ಕಂಡಿದ್ದರು.
2013ರ ಚುನಾವಣೆಯಲ್ಲೂ ಕುಮಾರ್ ಬಂಗಾರಪ್ಪಗೆ ಅದೃಷ್ಟ ಖುಲಾಯಿಸಲಿಲ್ಲ. ಅಂದು ತಂದೆ ಸಾವಿನ ಅನುಕಂಪ ಪಡೆದ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕುಮಾರ್ ಬಂಗಾರಪ್ಪ ಕಾಂಗ್ರೆಸ್‍ನಲ್ಲಿದ್ದರೂ ಅಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಸ್ಥಾನಮಾನ ಸಿಗುತ್ತಿಲ್ಲ. ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಸದ್ಯಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತೇ ಅಂತಿಮ ಎನ್ನುವಂತಾಗಿದೆ. ಇದರಿಂದ ಬೇಸತ್ತಿರುವ ಕುಮಾರ್ ಬಂಗಾರಪ್ಪ ತಮ್ಮ ರಾಜಕೀಯ ವಿಷಯಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದರೆ ಅವರು ಸೊರಬ ಇಲ್ಲ ಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin