ಕಾಂಗ್ರೆಸ್‍ಗೆ ಗುಡ್ ಬೈ ಹೇಳಲು ಮುಂದಾದ ಡಿ.ಎಂ.ಸಾಲಿ, ಬಿಜೆಪಿಯತ್ತ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

DM-Sali

ಬೆಂಗಳೂರು, ಏ.8- ಆಡಳಿತಾರೂಢ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶ್ರೀನಿವಾಸ್ ಪ್ರಸಾದ್, ಕುಮಾರ್ ಬಂಗಾರಪ್ಪ, ಎಸ್.ಎಂ.ಕೃಷ್ಣ ಬಳಿಕ ಇದೀಗ ಡಿ.ಎಂ.ಸಾಲಿ ಕಾಂಗ್ರೆಸ್‍ಗೆ ಗುಡ್ ಬೈ ಹೇಳಿ ಕಮಲ ಮುಡಿಯಲು ಮುಂದಾಗಿದ್ದಾರೆ. ಹೌದು, ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಉಳಿದಿರುವಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ. ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ಕಾರಣಕ್ಕೆ ಬಹುತೇಕರು ಬಿಜೆಪಿಯತ್ತಲೇ ವಲಸೆ ಬರಲು ಆರಂಭಿಸಿದ್ದಾರೆ.

ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್‍ರಿಂದ ಆರಂಭಗೊಂಡಿರುವ ಪಕ್ಷಾಂತರ ಪರ್ವ ನಂತರ ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ, ಮುಖ್ಯಮಂತ್ರಿ, ರಾಜ್ಯಪಾಲ,ಕೇಂದ್ರ ಸಚಿವರಾಗಿ ಅನುಭವವಿರುವ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಕಮಲ ಮುಡಿದಿದ್ದು, ಜೆಡಿಎಸ್‍ನ ಪರಿಮಳಾ ನಾಗಪ್ಪ ಕೂಡ ಬಿಜೆಪಿ ಹೊಸ್ತಿಲ ಮೇಲೆ ನಿಂತಿದ್ದಾರೆ.  ಇದೀಗ ವಿಧಾನ ಪರಿಷತ್ ಮಾಜಿ ಸದಸ್ಯ ಸಚೇತಕ ಡಿ.ಎಂ. ಸಾಲಿಯವರ ಸರದಿಯಾಗಿದೆ. ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ಬಿಜೆಪಿ ಸೇರುತ್ತಿದ್ದಂತೆ ಸಾಲಿ ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಕೃಷ್ಣ ಅವದಿಯಲ್ಲಿ ಮುಖ್ಯ ಸಚೇತಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಧಾನಗೊಂಡು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.

ಮೂಲತಃ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನವರಾದ ಡಿ.ಎಂ. ಸಾಲಿ ನಾಯಕ ಜನಾಂಗಕ್ಕೆ ಸೇರಿದವರಾಗಿದ್ದಾರೆ. ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಸದ ಶ್ರೀರಾಮುಲು ಹೊರತುಪಡಿಸಿದರೆ ವಾಲ್ಮೀಕಿ ಜನಾಂಗದಲ್ಲಿ ಡಿ.ಎಂ.ಸಾಲಿ ಬಹಳಷ್ಟು ಪ್ರಭಾವ ಹೊಂದಿರುವ ರಾಜಕಾರಣಿಯಾಗಿದ್ದಾರೆ. ಸಾಲಿ ಬಿಜೆಪಿ ಸೇರ್ಪಡೆಯಿಂದ ನಾಯಕ ಸಮುದಾಯ ಹೆಚ್ಚಿರುವ ಭಾಗದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬರಲಿದ್ದು, ಕಾಂಗ್ರೆಸ್‍ಗೆ ಆ ಭಾಗದಲ್ಲಿ ಮುಂಬರುವ ಚುನಾವಣೆಯಲ್ಲಿ ದೊಡ್ಡ ಪೆಟ್ಟು ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗಾಗಲೇ ತೆರೆಮರೆಯಲ್ಲಿ ಡಿ.ಎಂ. ಸಾಲಿ ಅವರನ್ನು ಭೇಟಿ ಮಾಡಿರುವ ಬಿಜೆಪಿ ನಾಯಕರು ಪಕ್ಷಕ್ಕೆ ಅಧಿಕೃತವಾಗಿ ಆಹ್ವಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಉಪಚುನಾವಣೆ ಮುಗಿಯುತ್ತಿದ್ದಂತೆ ಸಾಲಿ ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧಗೊಳ್ಳಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin