ಕಾಂಗ್ರೆಸ್‍ನ ಸಚಿವರು, ಶಾಸಕರಿಂದ ಸ್ವಚ್ಛ ಭಾರತ ಅಭಿಯಾನದ 109 ಕೋಟಿ ರೂ. ದುರ್ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar--02

ಬೆಂಗಳೂರು, ಡಿ.30- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನದ 109 ಕೋಟಿ ರೂ. ಅನುದಾನವನ್ನು ಕಾಂಗ್ರೆಸ್‍ನ ಕೆಲ ಸಚಿವರು ಮತ್ತು ಶಾಸಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಜನಪ್ರತಿನಿಧಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿಬಿಐ, ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಅನುದಾನವನ್ನು ಶೌಚಾಲಯಗಳ ನಿರ್ಮಾಣ, ಜೈವಿಕ ಅನಿಲ ಘಟಕಗಳ ನಿರ್ವಹಣೆ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳ ಸುತ್ತಮುತ್ತಲ ಮೂಲಭೂತ ಸೌಲಭ್ಯ ಯೋಜನೆಗಳಿಗೆ ಮಾತ್ರ ಬಳಸಿಕೊಳ್ಳಬಹುದಾಗಿದೆ.

ಆದರೆ, ಕೆಲ ಪ್ರಭಾವಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಮಣಿದಿರುವ ಪಾಲಿಕೆ ಅಧಿಕಾರಿಗಳು ಸ್ವಚ್ಛ ಭಾರತ ಅಭಿಯಾನದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಎನ್.ಆರ್.ರಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು.  ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಚಿವರಾದ ಕೃಷ್ಣಭೈರೇಗೌಡ, ಶಾಸಕರಾದ ಹ್ಯಾರಿಸ್, ಎಸ್.ಟಿ.ಸೋಮಶೇಖರ್, ದಿನೇಶ್ ಗುಂಡೂರಾವ್, ಭೈರತಿ ಬಸವರಾಜ್, ಜಮೀರ್ ಅಹಮ್ಮದ್‍ಖಾನ್ ಮತ್ತು ಪಾಲಿಕೆ ಆರೋಗ್ಯ ವಿಭಾಗದ ಜಂಟಿ ಆಯುಕ್ತರು, ಎಸ್‍ಡಬ್ಲ್ಯೂಎಂ ಮುಖ್ಯ ಅಭಿಯಂತರರು, ಘನತ್ಯಾಜ್ಯ ವಿಲೇವಾರಿ ಇಲಾಖೆಯ ಅಧಿಕಾರಿಗಳು ಮತ್ತಿತರರ ವಿರುದ್ಧ ಸಿಬಿಐ, ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇನೆ ಎಂದರು.
2016-17 ಮತ್ತು 2017-18ನೆ ಸಾಲಿನಲ್ಲಿ ಸ್ವಚ್ಛ ಭಾರತ ಅಭಿಯಾನ ಅನುದಾನದಡಿ ಪಾಲಿಕೆಗೆ ಸುಮಾರು 109 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.

ಆದರೆ, ಈ ಅನುದಾನದಲ್ಲಿ ಶೇ.15ರಷ್ಟು ಹಣವೂ ಸ್ವಚ್ಛಭಾರತ ಅಭಿಯಾನಕ್ಕೆ ಬಳಕೆಯಾಗಿಲ್ಲ ಎಂದು ರಮೇಶ್ ಆರೋಪಿಸಿದರು. ಬಿಡುಗಡೆಯಾದ 109 ಕೋಟಿ ರೂ.ಗಳಲ್ಲಿ ಬಳಕೆಯಾಗಿರುವುದು ಕೇವಲ 16.29 ಕೋಟಿ ರೂ.ಗಳು ಮಾತ್ರ ಎಂದು ಅವರು ಅಂಕಿ-ಅಂಶ ನೀಡಿದರು. ಉಳಿದ 92 ಕೋಟಿ ರೂ.ಗಳನ್ನು ರಸ್ತೆಗಳು, ಪಾದಚಾರಿ ಮಾರ್ಗ, ಚರಂಡಿ ಕಾರ್ಯ, ವ್ಯಾಯಾಮ ಸಲಕರಣೆಗಳ ಅಳವಡಿಕೆ, ಕುಡಿಯುವ ನೀರು ಪೂರೈಕೆ, ವಿದ್ಯುತ್ ದೀಪಗಳ ಅಳವಡಿಕೆ, ಉದ್ಯಾನವನ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ದೂರಿದರು.

ಕೆಆರ್ ಮಾರುಕಟ್ಟೆಯಲ್ಲಿ ಗೋಡೆಗಳಿಗೆ ಬಣ್ಣ ಬಳಿಯುವ ಒಂದೇ ಕಾಮಗಾರಿಗೆ ಏಳಕ್ಕೂ ಹೆಚ್ಚು ಬಾರಿ ಹಣ ಬಿಡುಗಡೆ ಮಾಡಲಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದರು. ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಸ್ವಚ್ಛ ಭಾರತ ಅಭಿಯಾನದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಕೆ ಮಾಡಿಕೊಂಡಿರುವ ವರದಿ ಕೇಂದ್ರ ಸರ್ಕಾರದ ಕೈ ಸೇರಿದ್ದು, ಇನ್ನು ಮುಂದೆ ಬಿಬಿಎಂಪಿ ಶಾಶ್ವತವಾಗಿ ಸ್ವಚ್ಛ ಭಾರತ ಅಭಿಯಾನ ಅನುದಾನದಿಂದ ವಂಚಿತವಾಗುವ ಸಾಧ್ಯತೆ ಇದೆ ಎಂದರು. ಕೇಂದ್ರ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿರುವ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ದಾಖಲೆ ಸಮೇತ ದೂರು ನೀಡಿದ್ದೇನೆ ಎಂದು ಅವರು ವಿವರಿಸಿದರು.

2014-15ರಿಂದ 2017-18ರ ವರೆಗಿನ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆಂದು ಬಿಡುಗಡೆಯಾಗಿರುವ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಅಮೃತ್ ಮತ್ತು 2013-14ನೆ ಹಣಕಾಸು ಆಯೋಗದ ಅನುದಾನಗಳ ಬಳಕೆ ಬಗ್ಗೆ ಹಾಗೂ ರಾಜ್ಯ ಸರ್ಕಾರದ ನಗರೋತ್ಥಾನ, ರಾಜ್ಯ ಹಣಕಾಸು ಆಯೋಗ ಮತ್ತು 110 ಹಳ್ಳಿಗಳ ಅಭಿವೃದ್ಧಿ ಅನುದಾನಗಳ ಹಂಚಿಕೆ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಮೇಶ್ ಆಗ್ರಹಿಸಿದರು.

ಕೋಟ್ಯಂತರ ರೂಪಾಯಿ ಅವ್ಯವಹಾರದಲ್ಲಿ ಭಾಗಿಯಾದ ಜನಪ್ರತಿನಿಧಿಗಳು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು. ಹಗರಣದ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ತೀರ್ಮಾನಿಸಿದೆ ಎಂದು ಹೇಳಿದರು.

Facebook Comments

Sri Raghav

Admin