ಕಾಂಗ್ರೆಸ್‍ನ ಹಿರಿಯ ನಾಯಕರ ಅಸಮಾಧಾನ ತಣಿಸಲು ತಿಂಗಳಾಂತ್ಯಕ್ಕೆ ಸಮನ್ವಯ ಸಮಿತಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

vishwa
ಬೆಂಗಳೂರು, ಫೆ.17- ಕಾಂಗ್ರೆಸ್‍ನ ಹಿರಿಯ ನಾಯಕರ ಅಸಮಾಧಾನ ತಣಿಸಲು ತಿಂಗಳಾಂತ್ಯದಲ್ಲಿ ಸಮನ್ವಯ ಸಮಿತಿ ಸಭೆ ನಡೆಸಲು ಹೈಕಮಾಂಡ್ ಸೂಚಿಸಿದೆ.  ಹದಿನೆಂಟು ಜನ ಸದಸ್ಯರಿರುವ ಸದನ ಸಮಿತಿ ಸಭೆ ಬಹಳ ತಿಂಗಳಿನಿಂದ ನಡೆದಿಲ್ಲ. ಹೀಗಾಗಿ ಪಕ್ಷದಲ್ಲಿನ ಗೊಂದಲ ಬಗೆಹರಿಯದೆ ಹಿರಿಯ ನಾಯಕರು ಅಸಮಾಧಾನಗೊಳ್ಳಲು ಕಾರಣವಾಗಿದೆ ಎಂಬ ಆಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಹೈಕಮಾಂಡ್ ಸಭೆ ನಡೆಸಲು ಸೂಚನೆ ನೀಡಿದೆ.  ಕಾಂಗ್ರೆಸ್‍ನಲ್ಲಿ ದಿನೇ ದಿನೇ ಹಿರಿಯ ನಾಯಕರ ಅಸಮಾಧಾನ ಬಹಿರಂಗಗೊಳ್ಳುತ್ತಿದ್ದು, ಪಕ್ಷಕ್ಕೆ ತೀವ್ರ ಹಾನಿಯಾಗುತ್ತಿದೆ. ಇದನ್ನು ಸರಿಪಡಿಸಲು ಕೂಡಲೇ ಸಮನ್ವಯ ಸಮಿತಿ ಸಭೆ ನಡೆಸುವಂತೆ ಪ್ರಮುಖ ಶಾಸಕರು ರಾಜ್ಯ ಮುಖಂಡರನ್ನು ಒತ್ತಾಯಿಸಿದ್ದರು.  ಈಗಾಗಲೇ ಎಸ್.ಎಂ.ಕೃಷ್ಣ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಶ್ರೀನಿವಾಸ್‍ಪ್ರಸಾದ್ ಮುಖ್ಯ ಮಂತ್ರಿ ಧೋರಣೆ ವಿರೋಸಿ ಪಕ್ಷ ಬಿಟ್ಟಿದ್ದಾಗಿದೆ.

ಎಚ್.ವಿಶ್ವನಾಥ್, ಜಾಫರ್ ಶರೀಫ್, ಜನಾರ್ಧನ ಪೂಜಾರಿ ಯಂತಹ ನಾಯಕರು ಸರ್ಕಾರದ ಹುಳುಕನ್ನು ಬಹಿರಂಗವಾಗಿ ಪ್ರಸ್ತಾಪಿಸುತ್ತಿದ್ದಾರೆ. ಈ ಹಿರಿಯ ನಾಯಕರು ಪಕ್ಷದಲ್ಲಿ ಸೂಕ್ತ ವೇದಿಕೆ ಸಿಗದ ಹಿನ್ನೆಲೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಸಮನ್ವಯ ಸಮಿತಿ ಸಭೆ ಕರೆದು ಮನವೊಲಿಸಲು ಈ ತಿಂಗಳಾಂತ್ಯದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ.  ಇತ್ತೀಚಿಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರು ಬಹಿರಂಗ ಹೇಳಿಕೆ ನೀಡುತ್ತಿರುವ ನಾಯಕರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದರು.

ವಿಶ್ವನಾಥ್‍ಗೆ ನೋಟಿಸ್:

ಶಾಸಕರ ಆಗ್ರಹದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಮಾಜಿ ಸಚಿವ ಎಚ್.ವಿಶ್ವನಾಥ್ ಮತ್ತು ಜನಾರ್ದನ್‍ಪೂಜಾರಿ ಅವರಿಗೆ ನೋಟಿಸ್ ಜಾರಿ ಮಾಡಲು ಪಕ್ಷ ಮುಂದಾಗಿದೆ.  ಜಾಫರ್‍ಶರೀಫ್ ಅವರು ನಾಯಕತ್ವ ವಿರುದ್ಧ ಮಾತನಾಡುತ್ತಿಲ್ಲ. ಬದಲಾಗಿ ಸರ್ಕಾರದ ಲೋಪದೋಷಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸುವ ಬಗ್ಗೆ ಚರ್ಚೆಗಳು ನಡೆದಿವೆ. ಈ ನಡುವೆ ಪ್ರಮುಖ ನಾಯಕರಾದ ಅಂಬರೀಶ್, ಕುಮಾರ್ ಬಂಗಾರಪ್ಪ ಅಸಮಾಧಾನಗೊಂಡು ಕಾಂಗ್ರೆಸ್‍ನಿಂದ ಹೊರ ಹೋಗುವ ತಯಾರಿ ನಡೆಸಿದ್ದಾರೆ.  ಎಸ್.ಎಂ.ಕೃಷ್ಣ ಅವರ ಅನುಪಸ್ಥಿತಿಯಲ್ಲಿ ಹಳೇ ಮೈಸೂರು ಭಾಗದ ಒಕ್ಕಲಿಗರ ಸಮು ದಾಯದ ನಾಯಕತ್ವ ವಹಿಸಬೇಕಾದ ಅಂಬರೀಶ್ ಅಸಮಾಧಾನ ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿದೆ. ಅವರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಇಂಧನ ಸಚಿವ ಡಿ.ಕೆ.ಶಿವಕುಮಾರ್‍ಗೆ ಜವಾಬ್ದಾರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ರಾಜಕಾರಣ ದಿಂದ ಬೇಸತ್ತು ಕುಮಾರ್ ಬಂಗಾರಪ್ಪ ಈಗಾಗಲೇ ಬಿಜೆಪಿ ಸಂಪರ್ಕದಲ್ಲಿರುವುದರಿಂದ ಪಕ್ಷದಲ್ಲಿ ಅಸಹನೆ ಹೆಚ್ಚಾಗಿದೆ.

ದಿನೇ ದಿನೇ ಪ್ರಮುಖ ನಾಯಕರು ಅಸಮಾಧಾನಗೊಂಡು ಹೊರ ಹೋಗುತ್ತಿರು ವುದು ಹೆಚ್ಚಾಗುತ್ತಿದೆ. ಇದೇ ಪರಿಸ್ಥಿತಿ ಮುಂದು ವರೆದರೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷ ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಆತಂಕ ಎದುರಾಗಿದೆ.  ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಳೆದ ವಾರವೇ ಸಮನ್ವಯ ಸಮಿತಿ ಸಭೆ ನಡೆಸಲು ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ, ವಿಧಾನಮಂಡಲ ಅವೇಶನದಿಂದಾಗಿ ಸಭೆಯನ್ನು ಮುಂದೂಡಲಾಗಿತ್ತು. ಹಾಗಾಗಿ ಈ ತಿಂಗಳ ಅಂತ್ಯದಲ್ಲಿ ಸಭೆ ನಡೆಸುವ ಚಿಂತನೆ ಇದೆ.  ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ಸಭೆಯ ನೇತೃತ್ವ ವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ 18 ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin