ಕಾಂಗ್ರೆಸ್-ಜೆಡಿಎಸ್’ನ 8 ಪರಿಷತ್ ಸದಸ್ಯರಿಂದ ಸರ್ಕಾರಕ್ಕೆ 33 ಲಕ್ಷ ರೂ. ದೋಖಾ…!

ಈ ಸುದ್ದಿಯನ್ನು ಶೇರ್ ಮಾಡಿ

Padmanabhareddy--01

ಬೆಂಗಳೂರು, ಮೇ 3– ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ಉದ್ದೇಶಕ್ಕೋಸ್ಕರ ಬೆಂಗಳೂರಿಗೆ ವಿಳಾಸ ಬದಲಾಯಿಸಿಕೊಂಡ 8 ವಿಧಾನ ಪರಿಷತ್ ಸದಸ್ಯರು ಸಚಿವಾಲಯಕ್ಕೆ ತಪ್ಪು ಮಾಹಿತಿ ನೀಡಿ ಸುಮಾರು 33 ಲಕ್ಷ ರೂ.ಗಳಷ್ಟು ಸರ್ಕಾರಕ್ಕೆ ದೋಖಾ ಮಾಡಿರುವ ದಾಖಲೆಗಳನ್ನು ಬಿಡುಗಡೆ ಮಾಡಿದ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸದಸ್ಯರನ್ನು ಅನರ್ಹಗೊಳಿಸಬೇಕು ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿಂದು ದಾಖಲೆಗಳನ್ನು ಬಿಡುಗಡೆ ಮಾಡಿದ ಪದ್ಮನಾಭರೆಡ್ಡಿ, 2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಪವಿತ್ರ ಮೈತ್ರಿ ಸಾಧಿಸಿದ ಕಾಂಗ್ರೆಸ್-ಜೆಡಿಎಸ್ ಅಧಿಕಾರ ಹಿಡಿಯಲು ಸಾಧ್ಯವಿಲ್ಲದಿದ್ದರೂ ವಿಧಾನ ಪರಿಷತ್ ಸದಸ್ಯರ ವಿಳಾಸವನ್ನು ಬೆಂಗಳೂರಿಗೆ ಬದಲಾಯಿಸಿ ವಾಮಮಾರ್ಗದ ಮೂಲಕ ಅಧಿಕಾರದ ಗದ್ದುಗೆಗೆ ಏರಿತು.ಬೆಂಗಳೂರಿಗೆ ವಿಳಾಸ ಬದಲಾಯಿಸಿದ ಸುಮಾರು 8 ವಿಧಾನ ಪರಿಷತ್ ಸದಸ್ಯರು 2015ರಿಂದ ಇಂದಿನವರೆಗೆ ತಮ್ಮ ಸ್ವಕ್ಷೇತ್ರದ ವಿಳಾಸದ ಮಾಹಿತಿಯನ್ನೇ ಸರ್ಕಾರಕ್ಕೆ ನೀಡಿ ಸಾರಿಗೆ ಹಾಗೂ ಇನ್ನಿತರ ಭತ್ಯೆಗಳನ್ನು ಪಡೆದು ವಂಚಿಸಿದ್ದಾರೆಂದು ಆರೋಪಿಸಿದರು.   ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ್, ರಘು ಆಚಾರ್, ಬೋಸರಾಜ್, ಎಸ್.ರವಿ, ಸಿ.ಆರ್.ಮನೋಹರ್, ಅಪ್ಪಾಜಿಗೌಡ, ಎಂ.ಡಿ.ಲಕ್ಷ್ಮಿನಾರಾಯಣ್ ಅವರು ಕೇವಲ ಸಾರಿಗೆ ಭತ್ಯೆಗೋಸ್ಕರ ಸಚಿವಾಲಯಕ್ಕೆ ತಪ್ಪು ಮಾಹಿತಿ ನೀಡಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ.

ಇವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಮತ್ತು ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಹಾಗೂ ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ದೂರು ನೀಡುವುದಾಗಿ ಪದ್ಮನಾಭರೆಡ್ಡಿ ತಿಳಿಸಿದ್ದಾರೆ.  ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ಈ ವಂಚನೆಯಲ್ಲಿ ಪಾಲ್ಗೊಂಡಿದ್ದು, ಜನಪ್ರತಿನಿಧಿ ಕಾಯ್ದೆಗೆ ವಿರುದ್ಧ ವರ್ತಿಸಿರುವ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.  2015ರಲ್ಲಿ ಬಿಬಿಎಂಪಿ ಚುನಾವಣೆ ನಡೆದಾಗ ಬಿಜೆಪಿ 101 ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ 76, ಜೆಡಿಎಸ್ 14, ಪಕ್ಷೇತರರು 7 ಸ್ಥಾನಗಳನ್ನು ಪಡೆದಿದ್ದರು.  ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸೇರಿದರೂ 97ರಷ್ಟಾಗಿತ್ತು. ಅಧಿಕಾರ ರಚಿಸಲು ಸಾಧ್ಯವಿರಲಿಲ್ಲ. ಉಳಿದ ಸ್ಥಾನಗಳಿಗೆ 8 ಪರಿಷತ್ ಸದಸ್ಯರನ್ನು ಬಿಬಿಎಂಪಿ ಮತದಾರರ ಪಟ್ಟಿಗೆ ಸೇರಿಸಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದರು.

ಆದರೆ, ಇವರ ಈ ಅಕ್ರಮ ಇಷ್ಟಕ್ಕೇ ನಿಲ್ಲಲಿಲ್ಲ. ವಿಳಾಸ ಬದಲಾವಣೆ ಮಾಡಿಕೊಂಡರು. ಸಾರಿಗೆ ಭತ್ಯೆಯನ್ನು ತಮ್ಮ ಹಳೆಯ ವಿಳಾಸಕ್ಕೆ ಪಡೆಯುವುದನ್ನು ಮುಂದುವರಿಸಿದರು. 2015ರಲ್ಲಿ ಅಲ್ಲಂ ವೀರಭದ್ರಪ್ಪ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಮತದಾನ ಮಾಡಿದ್ದಾರೆ. ಅದೇ ಸೆಪ್ಟೆಂಬರ್‍ನಲ್ಲಿ ಬೆಂಗಳೂರು ಮೇಯರ್ ಚುನಾವಣೆಗೆ ಮತದಾನ ಮಾಡಿದ್ದಾರೆ. 2017ರಲ್ಲಿ ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ವೋಟ್ ಮಾಡಿದ್ದಾರೆ. ಇದೇ ರೀತಿ ಹಲವು ಅಕ್ರಮಗಳು ನಡೆದಿವೆ.  ಅಲ್ಲಂ ವೀರಭದ್ರಪ್ಪ ಅವರು ಬೆಂಗಳೂರಿನ ವಿಳಾಸವಿದ್ದರೂ ಬಳ್ಳಾರಿ ವಿಳಾಸ ತೋರಿಸಿ 3.2 ಲಕ್ಷ ಭತ್ಯೆ ಪಡೆದಿದ್ದಾರೆ. ಅದೇ ರೀತಿ ಆರ್.ಬಿ.ತಿಮ್ಮಾಪುರ್ ಅವರು 580 ಕಿಲೋ ಮೀಟರ್ ದೂರದ ಮುಧೋಳ ಕ್ಷೇತ್ರದ ವಿಳಾಸ ನೀಡಿ 5.5 ಲಕ್ಷ ಪ್ರವಾಸ ಭತ್ಯೆ ಪಡೆದಿದ್ದಾರೆ.ರಘು ಆಚಾರ್ ಚಿತ್ರದುರ್ಗದ ವಿಳಾಸ ನೀಡಿ 3.4 ಲಕ್ಷ ಪಡೆದರೆ ಸಿ.ಆರ್.ಮನೋಹರ್ ಅವರು ಕೋಲಾರ ವಿಳಾಸಕ್ಕೆ 1.31 ಲಕ್ಷ, ಅಪ್ಪಾಜಿಗೌಡ ಮಂಡ್ಯ ವಿಳಾಸಕ್ಕೆ 2.91 ಲಕ್ಷ, ಬೋಸರಾಜ್ ಅವರು ರಾಯಚೂರು ವಿಳಾಸ ನೀಡಿ 5.7 ಲಕ್ಷ, ಎಸ್.ರವಿ ಅವರು 2.36 ಲಕ್ಷ ಭತ್ಯೆ ಪಡೆದಿರುವ ಸಂಪೂರ್ಣ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿಂದು ಬಿಡುಗಡೆ ಮಾಡಿದರು. ಬೆಂಗಳೂರು ವಿಳಾಸದಲ್ಲೇ ಮತ ಚಲಾವಣೆ ಮಾಡಿರುವ ವಿ.ಎಸ್.ಉಗ್ರಪ್ಪ ಹಾಗೂ ಗೃಹ ಸಚಿವರಾದ ಪರಮೇಶ್ವರ್ ಅವರು ಯಾವುದೇ ಭತ್ಯೆ ಪಡೆದಿಲ್ಲ. ಹಾಗಾಗಿ ನಾನು ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ ಎಂದು ಪದ್ಮನಾಭರೆಡ್ಡಿ ಹೇಳಿದರು.

2006ರಲ್ಲಿ ದೇಶಾದ್ಯಂತ ಭಾರೀ ಸುದ್ದಿ ಮಾಡಿದ್ದ ಪ್ರಶ್ನೆಗಾಗಿ ಕಾಸು ಪ್ರಕರಣ ಸಂಬಂಧ ಖಾಸಗಿ ವಾಹಿನಿಯೊಂದು ಸ್ಟ್ರಿಂಗ್ ಆಪರೇಷನ್ ಮಾಡಿತ್ತು. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಲ್ಲಿ ಲೋಕಸಭೆ ಸ್ಪೀಕರ್ ಆಗಿದ್ದ ಸೋಮನಾಥ ಚಟರ್ಜಿ ಅವರು 10 ಸಂಸದರನ್ನು ವಜಾ ಮಾಡಿದ್ದರು. ಇದನ್ನು ವಿರೋಧಿಸಿ ಸಂಸದರಾದ ರಾಜ್ ರಾಮ್ ಪಾಲ್ ಮತ್ತಿತರರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿತ್ತು.  ಅದೇ ರೀತಿ ನಮ್ಮ ಜನಪ್ರತಿನಿಧಿಗಳು ಮಾಡಿರುವ ಮೋಸದ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳಬೇಕು ಎಂದು ಪದ್ಮನಾಭರೆಡ್ಡಿ ಆಗ್ರಹಿಸಿದರು.

Facebook Comments

Sri Raghav

Admin