ಕಾಂಗ್ರೆಸ್, ಜೆಡಿಎಸ್ ನಂತೆ ಜಿಜೆಪಿ ಕುಟುಂಬ ಮಾಲೀಕತ್ವದ ಪಕ್ಷ ಅಲ್ಲ : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

CT-Ravi--01

ಪಾಂಡವಪುರ, ಜು.14- ಕಾಂಗ್ರೆಸ್, ಸಮಾಜವಾದಿ, ಜೆಡಿಎಸ್, ಡಿಎಂಕೆ ಹಾಗೂ ಆರ್‍ಜೆಡಿ ಪಕ್ಷಗಳು ಕುಟುಂಬ ಮಾಲೀಕತ್ವದ ಹಾಗೂ ಜಾತಿ ಆಧಾರಿತ ಪಕ್ಷಗಳು. ಆದರೆ, ಬಿಜೆಪಿ ಕಾರ್ಯಕರ್ತರ ಮಾಲೀಕತ್ವದ ಪಕ್ಷ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.  ತಾಲೂಕಿನ ಹೊಸ ಕನ್ನಂಬಾಡಿ ಗ್ರಾಮದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯ ಅವರ ಜನ್ಮ ಶತಾಬ್ಧಿಯ ವಿಸ್ತರಕ್ ಯೋಜನೆಯ ಬಿಜೆಪಿ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್‍ನಲ್ಲಿ ನೆಹರು ರವರಿಂದ ಹಿಡಿದು ರಾಹುಲ್‍ಗಾಂಧಿ ತನಕ ಕುಟುಂಬ ಮಾಲೀಕತ್ವವನ್ನು ಪಕ್ಷ ಹೊಂದಿದೆ. ಹಾಗೆಯೇ ಜೆಡಿಎಸ್‍ನಲ್ಲಿ ಎಚ್.ಡಿ.ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಪಕ್ಷದ ಮಾಲೀಕತ್ವ ವಹಿಸುತ್ತಿದ್ದಾರೆ ಎಂದು ಜರಿದರು. ಬಿಜೆಪಿ ಜಾತಿವಾದಿ ಪಕ್ಷವಲ್ಲ, ರಾಷ್ಟ್ರವಾದಿ ಪಕ್ಷ. ಸಾಮಾನ್ಯ ಕಾರ್ಯಕರ್ತರನ್ನು ಬೆಳೆಸುವ ವ್ಯವಸ್ಥೆ ಈ ಪಕ್ಷದಲ್ಲಿದೆ. ಆ ಕಾರಣಕ್ಕೆ ಮೋದಿ ಈ ದೇಶದ ಪ್ರಧಾನಿಯಾದರು. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‍ಶೆಟ್ಟರು ಮುಖ್ಯಮಂತ್ರಿಯಾದರು. ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಶಾಸಕ, ಮಂತ್ರಿಯಾದೆ. ಹೀಗಾಗಿ ಕಾರ್ಯಕರ್ತರೇ ಮಾಲೀಕರಾಗಿರುವ ಪಕ್ಷ ನಮ್ಮದು ಎಂದರು.

ದೇಶದಲ್ಲಿ ಮೊಟ್ಟ ಮೊದಲಿಗೆ ಕೇವಲ 10 ತಿಂಗಳಲ್ಲಿ 28 ಕೋಟಿ ಬಡ ಕುಟುಂಬಗಳಿಗೆ ಜನ್-ಧನ್ ಮೂಲಕ ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆ ತೆರೆದ ಕೀರ್ತಿ ಬಿಜೆಪಿ ಪಕ್ಷದ್ದು. ಬಡವರನ್ನು ಸಾಮಾಜಿಕ ಸುರಕ್ಷಾ ವಲಯ ವ್ಯಾಪ್ತಿಗೆ ತರುವ ಉದ್ದೇಶದಿಂದ 12ರೂ. ವಿಮೆ ಜಾರಿಗೆ ತರಲಾಯಿತು. ಉಜ್ವಲ ಯೋಜನೆ ಮೂಲಕ ಗ್ಯಾಸ್ ವಿತರಣೆ, ಸೂರಿಲ್ಲದವರಿಗೆ ಮನೆ, ಜತೆಗೆ ಮುದ್ರಾ ಯೋಜನೆಯಡಿ 5 ಸಾವಿರದಿಂದ 50ಲಕ್ಷದವರೆಗೆ ಯಾವುದೇ ಭದ್ರತೆ ಇಲ್ಲದೆ ಸಾಲ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಬಿಜೆಪಿ ಸಾಧನೆಯನ್ನು ಮನೆ ಮನೆಗೆ ತಲುಪಿಸಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಬೇಕು ಎಂದು ಕರೆ ನೀಡಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ಮಾಜಿ ಅಧ್ಯಕ್ಷ ಜಿ.ಎಂ.ರವೀಂದ್ರ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಪ.ಮ.ರಮೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಳಾ ನವೀನ್‍ಕುಮಾರ್, ಪ್ರಧಾನ ಕಾರ್ಯದರ್ಶಿ ರೇಖಾ ಬನ್ನಂಗಾಡಿ, ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಮಹೇಶ್, ಸುರೇಶ್ ಇತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin