ಕಾಂಗ್ರೆಸ್ ದಿಲ್‍ವಾಲಿ ಪಕ್ಷವಲ್ಲ, ಡೀಲ್‍ವಾಲಿ ಪಕ್ಷ : ಚಿನ್ನದ ನಾಡಿನಲ್ಲಿ ಮೋದಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Kolar

ಬೆಂಗಳೂರು, ಮೇ 9-ಕಾಂಗ್ರೆಸ್ ಯಾವತ್ತು ದಿಲ್‍ವಾಲಿ ಪಕ್ಷವಾಗಿರಲಿಲ್ಲ. ಅದು ಡೀಲ್‍ವಾಲಿ(ವ್ಯವಹಾರ) ಪಕ್ಷ ಎಂಬುದನ್ನು ಟಿಕೆಟ್ ಹಂಚಿಕೆ ವೇಳೆಯೇ ಸಾಬೀತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ಮುಂದುವರೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಲೋಕೋಪಯೋಗಿ ಸಚಿವರು ಮತ್ತು ಗುತ್ತಿಗೆದಾರರೇ ಟಿಕೆಟ್ ಹಂಚಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದರು. ಒಳಗಡೆ ಡೀಲ್ ಆಯಿತೋ ಮೊಯ್ಲಿ ಬಾಯಿಗೆ ಬೀಗ ಬಿತ್ತು ಎಂದು ವ್ಯಂಗ್ಯವಾಡಿದರು.

ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಇಂದು ಪಕ್ಷದ ಪರ ಪ್ರಚಾರ ನಡೆಸಿದ ಮೋದಿ ಇಂದು ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿದರು. ಚಿನ್ನದ ನಾಡಿನ ನನ್ನ ಜನತೆಗೆ ನಮಸ್ಕಾರಗಳು ಎನ್ನುತ್ತಾ ಮಾತು ಆರಂಭಿಸಿದ ಅವರು, ಮೊದಲು ಕೈವಾರ ತಾತಯ್ಯ, ಕುರುಡು ಮಲೇಶ್ವರ, ಮುಳಬಾಗಿಲು ಆಂಜನೇಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಿ.ವಿ.ಗುಂಡಪ್ಪ , ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತೆ ಶ್ರೇಷ್ಠರನ್ನು ಸ್ಮರಿಸಿದರು.

ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ಅವರ ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣ, ಅಹಂಕಾರ ಸೇರಿದಂತೆ ಹಲವು ವಿಷಯಗಳನ್ನು ಜನತೆಯ ಮುಂದಿಟ್ಟರು. ಕಾಂಗ್ರೆಸ್ ತನ್ನನ್ನು ದಲಿತರ ಪರ ಎಂದು ಹೇಳಿಕೊಳ್ಳುತ್ತದೆ. ಅವರದ್ದು ಡೀಲ್ ಪಕ್ಷ ಎಂಬುದನ್ನೇ ಮೊಯ್ಲಿ ಅವರೇ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್‍ನ ಹಿರಿಯ ನಾಯಕರಾದ ಇವರು ಸಾಮಾನ್ಯ ನಾಯಕರಲ್ಲ. ದೆಹಲಿ ದರ್ಬಾರ್‍ನ್ನು ತುಂಬ ಹತ್ತಿರದಿಂದ ಬಲ್ಲವರು. ಅವರ ಬಾಯಿ ಮುಚ್ಚಿಸಿ ಮಹಾಕಾವ್ಯ ರಚಿಸಲು ಸೂಚಿಸಿದ್ದಾರೆ ಎಂದು ಕುಹುಕವಾಡಿದರು.  ಕಾಂಗ್ರೆಸ್ ಪಕ್ಷಕ್ಕೆ ಆರು ರೋಗಗಳು ಅಂಟಿಕೊಂಡಿವೆ. ಇದರ ವೈರಸ್ ಎಲ್ಲೆಡೆ ಹಬ್ಬುತ್ತಿರುವುದರಿಂದ ಆ ಪಕ್ಷ ಎಲ್ಲ ಕಡೆ ಸೋತು ಸುಣ್ಣವಾಗಿದೆ. ಕಾಂಗ್ರೆಸ್ ಸಂಸ್ಕøತಿ, ಅಪರಾಧ, ಮೂಲಭೂತವಾದ, ಜಾತಿವಾದ, ಭ್ರಷ್ಟಾಚಾರ ಹಾಗೂ ಕಾಂಟ್ರಾಕ್ಟ್ ಇದು ಆ ಪಕ್ಷದ ರೋಗ ಎಂದು ಟೀಕಿಸಿದರು.

ನನಗೆ ಜನರೇ ಹೈಕಮಾಂಡ್:
ಕೆಲವರು ನನ್ನನ್ನು ದುರಾಹಂಕಾರಿ ಎಂದು ಮಾತನಾಡುತ್ತಾರೆ. 10 ವರ್ಷ ದೇಶದಲ್ಲಿ ಆಡಳಿತ ನಡೆಸಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಜನ್‍ಪತ್-10(ಸೋನಿಯಾ ಗಾಂಧಿ ಅವರ ನಿವಾಸ) ಹೈಕಮಾಂಡ್ ಆಗಿತ್ತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಾನು ಕೂಡ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ನನಗೆ ಜನರೇ ಹೈಕಮಾಂಡ್. ಭಾರತದ 125 ಕೋಟಿ ಜನರೇ ನನ್ನ ರಿಮೋಟ್ ಕಂಟ್ರೋಲ್. ಎಡಕ್ಕೆ ತಿರುಗಿ ಎಂದರೆ ಎಡಕ್ಕೆ ತಿರುಗುತ್ತೇನೆ, ಬಲಕ್ಕೆ ಎಂದರೆ ಬಲಕ್ಕೆ ತಿರುಗುತ್ತೇನೆ. ನನ್ನ ಹೈಕಮಾಂಡ್ ಜನರೇ ಆಗಿರುವುದರಿಂದ ಜನರು ಹೇಳಿದಂತೆ ಕೇಳುತ್ತೇನೆ ಎಂದು ಕಾಂಗ್ರೆಸ್‍ಗೆ ಚುಚ್ಚಿದರು.

ರಾಹುಲ್ ವಿರುದ್ಧ ವಾಗ್ದಾಳಿ:
ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಕೆಲವರು ಮಹಾಮೈತ್ರಿ ಕೂಟ ರಚಿಸಲು ಮುಂದಾಗಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೂ ಇದು ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. ಜನತೆ ಆಶೀರ್ವಾದ ಇರುವವರೆಗೂ ಯಾರೂ ಏನೂ ಮಾಡಲಾರರು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 2019ರಲ್ಲಿ ನಾನೇ ಪ್ರಧಾನಿ ಎಂದು ರಾಹುಲ್ ಹೇಳುತ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾಡಿದ ಅಪಮಾನವಲ್ಲವೇ ಎಂದು ಟೀಕಿಸಿದರು.

ನೋಟು ಅಮಾನೀಕರಣ ಮಾಡಿದಾಗ ಕೆಲವರು ದೇಶವೇ ಬಿದ್ದು ಹೋಯ್ತು ಎಂದು ಬೊಬ್ಬೆ ಹೊಡೆದರು. ಈಗ ಕಾಂಗ್ರೆಸ್ ನಾಯಕರ ಮನೆ, ಹಾಸಿಗೆ, ಸ್ನಾನದ ಕೋಣೆಯಲ್ಲೂ ಹಣ ಸಿಗುತ್ತದೆ. ಇದಕ್ಕೆ ಏನು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಲೋಕಸಭೆಯಲ್ಲಿ ನಾವು ಜನಾದೇಶ ಪಡೆದು ಅಧಿಕಾರ ನಡೆಸುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಸಂವಿಧಾನ ಬದಲಾವಣೆ ಮಾಡುತ್ತಿದ್ದೇವೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ನಾವು ಎಂದಿಗೂ ಮೀಸಲಾತಿ ಬದಲಾಯಿಸುವುದಿಲ್ಲ. ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಪ್ರಬಲಗೊಳಿಸಿದ್ದೇವೆ. ಕಾಂಗ್ರೆಸಿಗರಿಗೆ ಸುಳ್ಳು ಹೇಳುವುದು ಕಾಯಕವಾಗಿದೆ ಎಂದು ಮೋದಿ ವ್ಯಂಗ್ಯವಾಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹಂತ ಹಂತವಾಗಿ ಅವಮಾನಿಸಿದೆ. ದಲಿತರನ್ನು ನೆನೆಸಿಕೊಂಡು ಮೊಸಳೆ ಕಣ್ಣೀರು ಹಾಕುವ ಕಾಂಗ್ರೆಸಿಗರನ್ನು ನಂಬಬೇಡಿ. 12ರಂದು ನಡೆಯುವ ಮತದಾನದ ವೇಳೆ ಬಿಜೆಪಿಯನ್ನು ಬೆಂಬಲಿಸಿ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin