ಕಾಂಗ್ರೆಸ್ ನ ಹಲವು ಪ್ರಮುಖ ನಾಯಕರಿಗೆ ಜೆಡಿಎಸ್ ಗಾಳ

ಈ ಸುದ್ದಿಯನ್ನು ಶೇರ್ ಮಾಡಿ

JDS-sfasdfgvADSG

ಬೆಂಗಳೂರು, ಆ.24- ಮುಂಬರುವ ವಿಧಾನಸಭಾ ಚುನಾವಣೆ ನಂತರ ರಾಜ್ಯದ ಅತ್ಯಂತ ದೊಡ್ಡ ಶಕ್ತಿಯಾಗಿ ಮೇಲೆದ್ದು ನಿಲ್ಲಲು ಹವಣಿಸುತ್ತಿರುವ ಜೆಡಿಎಸ್ ಇದೀಗ ಕೈ ಪಾಳೆಯದ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ, ಸತೀಶ್ ಜರಕಿಹೊಳಿ,ಶ್ರೀನಿವಾಸ ಪ್ರಸಾದ್,ಅಂಬರೀಷ್ ಸೇರಿದಂತೆ ಹಲ ಪ್ರಮುಖರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದೆ.  ಉನ್ನತ ಮೂಲಗಳು ಈ ವಿಷಯ ಖಚಿತಪಡಿಸಿದ್ದು, ಈಗಾಗಲೇ ಈ ನಾಯಕರ ಜತೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಜೆಡಿಎಸ್ ರಾಜಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚರ್ಚೆ ಆರಂಭಿಸಿದ್ದಾರೆ ಎಂದಿವೆ.  ಅಲ್ಪಸಂಖ್ಯಾತ,ದಲಿತ,ಒಕ್ಕಲಿಗ,ಲಿಂಗಾಯತ ಹಾಗೂ ಹಿಂದುಳಿದ ಸಮುದಾಯಗಳ ಮತಗಳನ್ನು ಕ್ರೋಢೀಕರಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಹಲ ಪ್ರಮುಖರನ್ನು ಸೆಳೆದುಕೊಳ್ಳಲು ಮುಂದಾಗಿದ್ದಾರೆ.

ಕಾಂಗ್ರೆಸ್ ಪಕ್ಷ ದುರ್ಬಲವಾಗತೊಡಗಿದ್ದು, ಆಂತರಿಕ ಸಂಘರ್ಷದಿಂದ ತಲ್ಲಣಗೊಂಡಿರುವ ಅದಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಶಕ್ತಿ ಇಲ್ಲದಂತೆ ಮಾಡಿದೆ. ದಲಿತ ಸಿಎಂ ವಿವಾದದಿಂದ ಹಿಡಿದು ಮೂಲ ಕಾಂಗ್ರೆಸ್ ನಾಯಕರ ಅಸಮಾಧಾನದವರೆಗೆ ಹಲವು ವಿಷಯಗಳಲ್ಲಿ ಕೈ ಪಾಳೆಯದ ಬೆರಳುಗಳು ಮುರಿದು  ಹೋಗಿದ್ದು,ಇನ್ನು ತನ್ನ ಕೈ ಬಲದ ಮೇಲೆ ಅಧಿಕಾರ ಸೂತ್ರ ಹಿಡಿದುಕೊಳ್ಳಲು ಅದಕ್ಕೆ ಸಾಧ್ಯವಿಲ್ಲ.  ಈ ಮಧ್ಯೆ ಬಿಜೆಪಿಯಲ್ಲಿ ಆಂತರಿಕ ಸಂಘರ್ಷವಿದ್ದರೂ ಪ್ರಬಲ ಹೈಕಮಾಂಡ್ ಇರುವ ಹಿನ್ನೆಲೆಯಲ್ಲಿ ಕಮಲ ಪಾಳೆಯದಲ್ಲಿರುವ ಬಿಕ್ಕಟ್ಟು ತಹಬಂದಿಗೆ ಬರಬಹುದು.ಆದರೆ, ಅದು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದು ಈ ನಾಯಕರಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

ಒಂದು ವೇಳೆ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬಂದರೆ ಬಿಜೆಪಿಯೇತರ ಶಕ್ತಿಗಳು ಮೂಲೆಗುಂಪಾಗುವ ಅಪಾಯವಿದೆ. ಇಂತಹ ಅಪಾಯದಿಂದ ತಪ್ಪಿಸಿಕೊಳ್ಳಬೇಕು ಎಂದರೆ  ಬಿಜೆಪಿಯೇತರ ಶಕ್ತಿಗಳು ಒಂದು ಗೂಡಲೇಬೇಕು.ಆದರೆ, ಬಿಜೆಪಿಯೇತರ ಶಕ್ತಿಗಳನ್ನು ಒಂದುಗೂಡಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿಲ್ಲ. ಹೀಗಾಗಿ ಈ ಹಿಂದೆ ಜನತಾ ಪರಿವಾರ ಒಗ್ಗೂಡಿ ಜನರ  ಮುಂದೆ ಹೋಗುತ್ತಿದ್ದ ಮಾದರಿಯಲ್ಲೇ ನಾವೆಲ್ಲ ಒಗ್ಗೂಡಿ ಮತದಾರರ ಮುಂದೆ ಹೋಗಬೇಕು.ಈ ರೀತಿ ಎಲ್ಲ ಸಮುದಾಯಗಳ ನಾಯಕರು ಒಗ್ಗೂಡಿ ಮತದಾರರ ಮುಂದೆ ಹೋದರೆ ರಾಜ್ಯದ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಜೆಡಿಎಸ್ ಗೆ ಸಾಧ್ಯ.ಇದಕ್ಕೆ ನಿಮ್ಮ ಬೆಂಬಲ ಬೇಕು ಎಂದು ವಿವಿಧ ನಾಯಕರನ್ನು ಈ ಇಬ್ಬರು ನಾಯಕರು ಕೋರಿದ್ದಾರೆ. ಮೂಲಗಳ ಪ್ರಕಾರ,ಬಹುತೇಕ ನಾಯಕರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು ಸ್ವಲ್ಪ ಕಾಲ ಕಳೆದ ನಂತರ ಜೆಡಿಎಸ್ ಗೆ ಬರುವುದಾಗಿ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin