ಕಾಂಗ್ರೆಸ್-ಬಿಜೆಪಿಗೆ ನಮ್ಮ ಪಕ್ಷ ಅನಿವಾರ್ಯ : ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

HDK--01

ಮೈಸೂರು, ಆ.16-ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಮ್ಮ ಪಕ್ಷ ಅನಿವಾರ್ಯವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿಯವರ ಆಶೀರ್ವಚನ ಪಡೆದು ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭವಿಷ್ಯದಲ್ಲಿ ಜೆಡಿಎಸ್ ನೆರವಿನಿಂದ ಅಧಿಕಾರಕ್ಕೆ ಬರಬಹುದೆಂದು ಎರಡೂ ರಾಷ್ಟ್ರೀಯ ಪಕ್ಷಗಳು ಭಾವಿಸಿವೆ ಎಂದು ಮಾರ್ಮಿಕವಾಗಿ ಹೇಳಿದರು. ಭಗವಂತ ನಿಮಗೆ ಬೇಕಾದಷ್ಟು ಕೊಟಿದ್ದಾನೆ. ಸರ್ಕಾರದ ಹೆಸರಲ್ಲಿ ದುಡ್ಡು ಹೊಡೆಯುವುದನ್ನು ನಿಲ್ಲಿಸಿ ಎಂದು ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕುಮಾರಸ್ವಾಮಿ ಹೇಳಿದರು.

ಐದು ತಲೆಮಾರು ಕುಳಿತು ತಿಂದರೂ ಮುಗಿಯದಷ್ಟು ಐಶ್ವರ್ಯ ಇದೆ. ಆದರೂ ನಿಮ್ಮ ಧನದಾಹ ಮುಗಿದಿಲ್ಲ. ರಾಜಕಾಲುವೆ ಸೇರಿದಂತೆ ಸರ್ಕಾರಿ ಕಾಮಗಾರಿಗಳಲ್ಲಿ ದುಡ್ಡು ಹೊಡೆಯುತ್ತಿದ್ದೀರಿ, ಇದನ್ನ ಮೊದಲು ನಿಲ್ಲಿಸಿ ಎಂದರು. ಜಾಸ್ತಿ ಮಳೆ ಬಂದರೆ ಬಿಬಿಎಂಪಿ ಏನು ಮಾಡುತ್ತೆ ಎಂದು ಹೇಳುವುದಾದರೆ ನೀವು ಏಕೆ ಇದ್ದೀರಾ. ನಿಮ್ಮ ಸರ್ಕಾರ ಏನು ಮಾಡುತ್ತಿದೆ ಎಂದು ಎಚ್‍ಡಿಕೆ ಪ್ರಶ್ನಿಸಿದರು.

ಬೆಂಗಳೂರು ಅಭಿವೃದ್ಧಿಗೆ ಪ್ರತಿವರ್ಷ 67ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಫುಲ್‍ಪೇಜ್ ಜಾಹೀರಾತು ಹಾಕಿಸುತ್ತಾರೆ. ಜಾಹೀರಾತಿಗೆ ವೆಚ್ಚ ಮಾಡುವ ಹಣವನ್ನು ಬೆಂಗಳೂರಿಗೆ ಖರ್ಚು ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು. ಎರಡು ದಿನ ಸುರಿದ ಮಳೆಯಿಂದ ಬೆಂಗಳೂರಿನ ದುಸ್ಥಿತಿಗೆ ಈ ಹಿಂದಿನ ಸರ್ಕಾರಗಳು ಕಾರಣ ಎಂದು ಬೆಂಗಳೂರಿನ ಮೇಯರ್ ಜಿ.ಪದ್ಮಾವತಿ ಅವರು ಮಾಡಿದ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಯಿತು. ಆಗಿನಿಂದ ಏನು ಮಾಡಿತು ಎಂದು ಪ್ರಶ್ನಿಸಿದರು.ಬೆಂಗಳೂರಿನ ಜನತೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ಹಾಕುವುದನ್ನು ನಿಲ್ಲಿಸಬೇಕು. 20 ತಿಂಗಳು ಉತ್ತಮ ಆಡಳಿತ ನೀಡಿರುವ ಜೆಡಿಎಸ್‍ಗೆ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬೆಂಗಳೂರಿನ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.

ಆರೋಗ್ಯ ಚೆನ್ನಾಗಿದೆ:

ನನ್ನ ಆರೋಗ್ಯ ಚೆನ್ನಾಗಿದೆ. ಗಂಟಲು ನೋವಿನ ಸಮಸ್ಯೆಯಿಂದಾಗಿ ಸಿಂಗಾಪುರಕ್ಕೆ ಹೋಗಿದ್ದೆ. ಆತಂಕಪಡುವಂತಹ ಯಾವುದೇ ರೋಗ ನನಗಿಲ್ಲ. ಇತರೆ ರಾಜಕಾರಣ ರೀತಿ ಕಾರ್ಯಕರ್ತರು ಕೈಮುಟ್ಟಿದ ತಕ್ಷಣ ಡೆಟಾಲ್ ಹಾಕಿ ಕೈ ತೊಳೆದುಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.
ಸಿಂಗಾಪುರದಿಂದ ನೇರವಾಗಿ ಬಂದು ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದೇನೆ. ನಾನೀಗ ಆರಾಮಾಗಿದ್ದೇನೆ ಎಂದು ತಿಳಿಸಿದರು.

Facebook Comments

Sri Raghav

Admin