ಕಾಂಗ್ರೆಸ್ ಶಾಸಕರು, ಸಚಿವರ ನಿವಾಸಗಳ ಮೇಲೆ ಸದ್ಯದಲ್ಲೇ ಮತ್ತೊಮ್ಮೆ ಐಟಿ ದಾಳಿ ಸಾಧ್ಯತೆ..!

ಈ ಸುದ್ದಿಯನ್ನು ಶೇರ್ ಮಾಡಿ

Income-Tax

ಬೆಂಗಳೂರು, ಅ.23-ರಾಜ್ಯದಲ್ಲಿ ಮತ್ತೊಂದು ಭಾರೀ ಪ್ರಮಾಣದ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ. ಡಿಸೆಂಬರ್‍ನಲ್ಲಿ ನಡೆಯಲಿರುವ ಹಿಮಾಚಲ, ಗುಜರಾತ್ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗುತ್ತಿದೆ ಎಂಬ ಸುಳಿವರಿತ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು, ಹಲವು ಕಾಂಗ್ರೆಸ್ ಶಾಸಕರು, ಸಚಿವರ ನಿವಾಸಗಳ ಮೇಲೆ ದಾಳಿ ನಡೆಸುವ ಮುನ್ಸೂಚನೆ ದೊರೆತಿದೆ. ಇದಲ್ಲದೆ, ಮುಖ್ಯಮಂತ್ರಿ ಹಾಗೂ ಸಚಿವರ ಆಪ್ತರಾದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ಮೇಲೆ ಐಟಿ, ಇಡಿ ದಾಳಿ ನಡೆಯುವ ಸಾಧ್ಯತೆ ಇದೆ. ಉತ್ತರಪ್ರದೇಶ ಚುನಾವಣಾ ಸಂದರ್ಭದಲ್ಲೂ ಕರ್ನಾಟಕದ ಹಲವು ಪ್ರಭಾವಿ ಅಧಿಕಾರಿಗಳ ಮೇಲೆ ಐಟಿ ದಾಳಿ ನಡೆದು ಆ ಚುನಾವಣೆಗೆ ಸಂಪನ್ಮೂಲ ಇಲ್ಲಿಂದ ಸರಬರಾಜಾಗುವುದನ್ನು ತಡೆಹಿಡಿಯಲಾಗಿತ್ತು. ಅದೇ ಕಾರ್ಯತಂತ್ರವನ್ನು ಅನುಸರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗೆ ರಾಜ್ಯದಿಂದ ಕಾಂಗ್ರೆಸ್‍ಗೆ ಯಾವುದೇ ಆರ್ಥಿಕ ಸಂಪನ್ಮೂಲ ರವಾನೆಯಾಗದಂತೆ ನೋಡಿಕೊಳ್ಳಲು ಐಟಿ ಇಲಾಖೆಯನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ಕೆಲವು ಪ್ರಭಾವಿ ಸಚಿವರು ಹಾಗೂ ಅವರ ಆಪ್ತರು ಮತ್ತು ಹಲವು ಐಎಎಸ್, ಐಪಿಎಸ್ ಅಧಿಕಾರಿಗಳ ಮೇಲೆ ಐಟಿ ಬ್ರಹ್ಮಾಸ್ತ್ರ ಬಿಟ್ಟು ಕಟ್ಟಿ ಹಾಕುವ ಕಾರ್ಯತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ.  ದೇಶದಲ್ಲಿ ಕರ್ನಾಟಕವೊಂದರಲ್ಲೇ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಅಧಿಕಾರದಲ್ಲಿರುವುದು. ಹೈಕಮಾಂಡ್ ಸೇರಿದಂತೆ ಬೇರೆ ರಾಜ್ಯಗಳ ಆಗುಹೋಗುಗಳಿಗೆ ಸ್ಪಂದಿಸಬೇಕಾಗಿರುವುದು ಕರ್ನಾಟಕ ಕಾಂಗ್ರೆಸ್.
ಡಿಸೆಂಬರ್‍ನಲ್ಲಿ ನಡೆಯಲಿರುವ ಎರಡೂ ರಾಜ್ಯಗಳ ಚುನಾವಣೆಗೆ ಇಲ್ಲಿಂದ ಆರ್ಥಿಕ ಸಂಪನ್ಮೂಲ ರವಾನೆಯಾಗುವ ಸಾಧ್ಯತೆ ಇದೆ. ಹಾಗಾಗಿ ಇದಕ್ಕೆ ಆರಂಭದಲ್ಲೇ ಬ್ರೇಕ್ ಹಾಕಲು ಕಾರ್ಯತಂತ್ರ ಹೆಣೆಯಲಾಗಿದೆ.

ಸದ್ಯದಲ್ಲೇ ಹಲವು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಮೇಲೆ ಐಟಿ ದಾಳಿ ನಡೆಯಲಿದ್ದು, 2018ರ ವಿಧಾನಸಭೆ ಚುನಾವಣೆ ಗುಂಗಿನಲ್ಲಿರುವ ಜನಪ್ರತಿನಿಧಿಗಳಿಗೆ ಈ ವಿಷಯ ಆತಂಕ ತಂದೊಡ್ಡಿದೆ. ಈ ಐಟಿ ದಾಳಿ ಗುಜರಾತ್, ಹಿಮಾಚಲ ಚುನಾವಣೆಗಷ್ಟೆ ತೊಂದರೆ ಕೊಡುವುದಿಲ್ಲ. ಮುಂಬರುವ ರಾಜ್ಯದ ವಿಧಾನಸಭಾ ಕ್ಷೇತ್ರಗಳಿಗೂ ತೊಂದರೆಯಾಗಲಿದೆ ಎಂಬ ಭೀತಿ ಹಲವು ಜನಪ್ರತಿನಿಧಿಗಳಲ್ಲಿ ಕಾಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ಐಟಿ ದಾಳಿ ನಡೆದರೆ ಅದು ರಾಜಕೀಯ ತಿರುವು ಪಡೆದುಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಕಳೆದ ಎರಡು ತಿಂಗಳ ಹಿಂದೆ ರಾಜ್ಯಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಆಪರೇಷನ್ ಕಮಲ ತಪ್ಪಿಸಲು ಕಾಂಗ್ರೆಸ್ ಅಭ್ಯರ್ಥಿ ಅಹಮ್ಮದ್ ಪಟೇಲ್ ಪರವಿದ್ದ 40 ಶಾಸಕರನ್ನು ಕರ್ನಾಟಕದ ಬಿಡದಿ ಬಳಿಯ ರೆಸಾರ್ಟ್‍ಗೆ ಕರೆತಂದು ಆತಿಥ್ಯ ನೀಡಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೂ ಐಟಿ ದಾಳಿ ನಡೆದಿದ್ದು, ಇದು ದೇಶಾದ್ಯಂತ ಚರ್ಚೆಯಾಗಿತ್ತು.

ನಂತರ ಹಲವು ಪ್ರಭಾವಿ ಸಚಿವರು ಅಧಿಕಾರಿಗಳ ನಿವಾಸದ ಮೇಲೆ ಐಟಿ ದಾಳಿ ನಡೆಯುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈವರೆಗೂ ಅಂತಹ ಯಾವುದೇ ದಾಳಿ ನಡೆದಿಲ್ಲ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಗೆ ಸಂಪನ್ಮೂಲ ಸರಬರಾಜಾಗುವುದಕ್ಕೆ ಬ್ರೇಕ್ ಹಾಕಲು ಪ್ರಭಾವಿಗಳ ಮೇಲೆ ಐಟಿ ದಾಳಿ ನಡೆದರೆ ಆಶ್ಚರ್ಯವಿಲ್ಲ.

Facebook Comments

Sri Raghav

Admin