ಕಾಂಗ್ರೆಸ್ ಸೇರಲಿದ್ದಾರೆಯೇ ಮಾಜಿ ಸಚಿವ, ಬಿಜೆಪಿ ಮುಖಂಡ ವಿ.ಸೋಮಣ್ಣ..!?

ಈ ಸುದ್ದಿಯನ್ನು ಶೇರ್ ಮಾಡಿ

V.Somanna-Somanna

ಬೆಂಗಳೂರು, ಜ.19- ಮಾಜಿ ಸಚಿವ ಬಿಜೆಪಿ ಮುಖಂಡ ವಿ.ಸೋಮಣ್ಣ ಅವರು ಕಾಂಗ್ರೆಸ್ ಸೇರಲಿದ್ದಾರೆಯೇ…. ಅಂತಹ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಲಿಂಗಾಯತ ಸಮುದಾಯ ಪ್ರಭಾವಿ ಮುಖಂಡರಾದ ಸೋಮಣ್ಣ ಅವರನ್ನು ಕಾಂಗ್ರೆಸ್‍ನತ್ತ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ. ಮುಂಬರುವ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸೋಮಣ್ಣ ಅವರು ಕಾಂಗ್ರೆಸ್‍ಗೆ ಸೇರಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಈ ಸ್ಕೆಚ್ ಹಾಕಲಾಗಿದೆ. ಈ ಸಂಬಂಧ ಸೋಮಣ್ಣ ಅವರೊಂದಿಗೆ ಮಾತುಕತೆಯನ್ನೂ ಕೂಡ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ಲಿಂಗಾಯತ ನಾಯಕತ್ವದ ಕೊರತೆ ಇದೆ. ಎಚ್.ಎಸ್.ಮಹದೇವಪ್ರಸಾದ್ ಅವರಿಂದ ತೆರವಾದ ಸಚಿವ ಸ್ಥಾನವನ್ನು ಸೋಮಣ್ಣ ಅವರಿಗೆ ನೀಡುವ ಮೂಲಕ ಲಿಂಗಾಯತರನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆಯನ್ನೂ ಕೂಡ ರೂಪಿಸಿದ್ದಾರೆ ಎನ್ನಲಾಗಿದೆ. ಮೊದಲೇ ಪ್ರಭಾವಿ ಜನಾಂಗ ಲಿಂಗಾಯತ ಸಮುದಾಯ ಕಾಂಗ್ರೆಸ್‍ನಿಂದ ವಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಪಕ್ಷದ ಪ್ರಭಾವಿ ಮುಖಂಡರನ್ನು ಸೆಳೆದು ಅವರಿಗೆ ಉನ್ನತ ಸ್ಥಾನಗಳನ್ನು ನೀಡಿ ಸಮುದಾಯವನ್ನು ತೆಕ್ಕೆ ತೆಗೆದುಕೊಳ್ಳುವ ಯೋಜನೆ ರೂಪಿಸಿದ್ದಾರೆ.
ಇದರ ಮೊದಲ ಹಂತವಾಗಿ ಸೋಮಣ್ಣ ಅವರೊಂದಿಗೆ ನಡೆಸಿರುವ ಮಾತುಕತೆ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

ಚಾಮರಾಜನಗರ ಜಿಲ್ಲೆ ಉಸ್ತುವಾರಿಯನ್ನು ಸೋಮಣ್ಣ ಅವರಿಗೆ ವಹಿಸುವುದು ಸಚಿವರ ಸ್ಥಾನವನ್ನು ನೀಡುವುದು ಪಕ್ಷದಲ್ಲಿ ಉನ್ನತ ಸ್ಥಾನವನ್ನು ಕೊಡುವುದು, ಸಿದ್ದರಾಮಯ್ಯನವರ ಉದ್ದೇಶವಾಗಿದೆ. ಆದರೆ ಸೋಮಣ್ಣ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಪಕ್ಷ ಸೇರ್ಪಡೆ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರಷ್ಟೆ. ಯಾವುದೇ ರೀತಿಯ ಭರವಸೆಯನ್ನು ಮುಖ್ಯಮಂತ್ರಿಗಳಿಗಾಗಲಿ, ಕಾಂಗ್ರೆಸ್ ಪಕ್ಷದ ಮುಖಂಡರಿಗಾಗಲಿ ನೀಡಿಲ್ಲ ಎಂದು ತಿಳಿದುಬಂದಿದೆ. ಸದ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಸಂಬಂಧ ಹಳಸಿದೆ. ಇನ್ನೇನು ನಮ್ಮದೇ ಅಧಿಕಾರ ಎಂದು ಬೀಗುತ್ತಿದ್ದ ಬಿಜೆಪಿಯಲ್ಲಿ ಬಿಕ್ಕಟ್ಟು ಎದುರಾಗಿದೆ.

ಈಶ್ವರಪ್ಪ ಹಾಗೂ ಯಡಿಯೂರಪ್ಪನವರ ನಡುವಿನ ಭಿನ್ನಾಭಿಪ್ರಾಯ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಈ ನಡುವೆ ಸೋಮಣ್ಣ ಅವರನ್ನು ಕಾಂಗ್ರೆಸ್‍ಗೆ ಸೆಳೆಯಲು ನಡೆಸಿರುವ ಪ್ರಯತ್ನ ತೀವ್ರ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin