ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳುತ್ತಿದೆ : ಯೋಗಿ ಆದಿತ್ಯನಾಥ್

ಈ ಸುದ್ದಿಯನ್ನು ಶೇರ್ ಮಾಡಿ

Yogi-Aditya--02

ಬೆಂಗಳೂರು, ಜ.7-ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಎಟಿಎಂ ತರ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಿರಿ ಎಂದು ರಾಜ್ಯದ ಜನತೆಗೆ ಕರೆ ನೀಡಿದರು. ತಮ್ಮ 20 ನಿಮಿಷಗಳ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಇಲ್ಲಿನ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಅಭಿವೃದ್ದಿಗಾಗಿ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲೇಬೇಕು, ಮುಖ್ಯಮಂತ್ರಿ ಸಿದ್ದರಾಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬುಡಸಮೇತ ಕಿತ್ತು ಹಾಕಿ ಎಂದು ಮನವಿ ಮಾಡಿದರು. ವಿಜಯನಗರದ ಬಿಜಿಎಸ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿವರ್ತನಾ ಯಾತ್ರೆಯಲ್ಲಿ ನನ್ನ ಸಹೋದರ, ಸಹೋದರಿಯರೇ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಧೋರಣೆಯನ್ನು ಕಟುವಾಗಿ ಟೀಕಿಸಿದರು.

ಗುಜರಾತ್‍ನಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದ್ದಂತೆ ರಾಹುಲ್ ಗಾಂಧಿ ಮಠಮಂದಿರಗಳಿಗೆ ಭೇಟಿ ನೀಡಲು ಮುಂದಾದರು. ಇದೇ ರೀತಿ ಕರ್ನಾಟಕದಲ್ಲೂ ಸಿದ್ದರಾಮಯ್ಯ ನಾನು ಕೂಡ ಹಿಂದೂ ಎಂದು ಹೇಳುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂ ಧರ್ಮ ನೆನಪಾಗಿದೆಯೇ ಎಂದು ವ್ಯಂಗ್ಯವಾಡಿದರು.  ಹಿಂದೂ ಎನ್ನುವುದು ಧರ್ಮವಲ್ಲ. ಅದು ನಮ್ಮ ಜೀವನಶೈಲಿ. ಬಿಜೆಪಿ ಸರ್ಕಾರವಿದ್ದಾಗ ಗೋಹತ್ಯೆ ನಿಷೇಧ ಮಾಡಲು ಮುಂದಾಗಿತ್ತು. ಅಲ್ಲಿನ ರಾಜ್ಯಪಾಲರ ಮೂಲಕ ಈ ಕಾಯ್ದೆ ಅಂಗೀಕಾರವಾಗಲು ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನೀವು ಅದನ್ನು ವಾಪಸ್ ಪಡೆದ್ದಿದೀರಿ. ಯಾವುದೇ ಒಬ್ಬ ನಿಜವಾದ ಹಿಂದು ಗೋಹತ್ಯೆಯನ್ನು ಸಹಿಸುತ್ತಾನೆಯೇ ಎಂದು ಪ್ರಶ್ನಿಸಿದರು.

ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಕೇಂದ್ರ ಮತ್ತು ರಾಜ್ಯದಲ್ಲಿ ಸಮಾನ ವಿಚಾರಧಾರೆಯ ಒಂದೇ ಪಕ್ಷ ಅಧಿಕಾರದಲ್ಲಿರಬೇಕು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಕರ್ನಾಟಕಕ್ಕೆ ಮೆಟ್ರೋ ರೈಲನ್ನು ಮಂಜೂರು ಮಾಡಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದರು.
ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಮಂಜೂರು ಮಾಡಿದ್ದಾರೆ. ಕರ್ನಾಟಕದ ಇನ್ನಷ್ಟು ಅಭಿವೃದ್ದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

ದೇಶದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‍ನ್ನು ತೊಲಗಿಸಲಾಗಿದೆ. ಇತ್ತೀಚೆಗೆ ನಡೆದ ಗುಜರಾತ್, ಹಿಮಾಚಲಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್ ಮೂಲೆಗುಂಪಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ತೊಲಗುವವರೆಗೂ ಅಭಿವೃದ್ದಿ ಸಾಧ್ಯವಿಲ್ಲ ಎಂದರು.  ಕರ್ನಾಟಕದಲ್ಲಿ ಕಾಡಿನ ನ್ಯಾಯವಿದೆ. ಹನುಮಾನ್ ಜಯಂತಿಗೆ ಅವಕಾಶ ನಿರಾಕರಿಸಲಾಗುತ್ತದೆ. ಭಜರಂಗಬಲಿ ಹನುಮಾನ್‍ನ ಜನ್ಮಭೂಮಿ ಕರ್ನಾಟಕ. ರಾಮ ಸೀತೆಯನ್ನು ಹುಡುಕಿತರಲು ಹನುಮಾನ್ ದಾರಿ ತೋರಿಸಿದರು. ಅಂತಹ ನಾಡಿನಲ್ಲಿ ಹನುಮಾನ್ ಜಯಂತಿಗೆ ಅವಕಾಶ ಸಿಗುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ತನ್ನ ಭ್ರಷ್ಟಾಚಾರ ನೀತಿಗಳು ಮತ್ತು ಸಮಾಜವನ್ನು ಒಡೆದಾಳುವ ನೀತಿಯಿಂದ ಅವನತ್ತಿಯತ್ತ ಸಾಗುತ್ತಿದೆ. ಪ್ರಧಾನಿ ಮೋದಿ ಅವರು ಅಭಿವೃದ್ದಿ ಮಂತ್ರದಿಂದ ದೇಶ ವಿಕಾಸ ಕಾಣುತ್ತಿದ್ದರೆ ಕರ್ನಾಟಕ ಹಿಂದುಳಿಯುತ್ತಿದೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಎಸ್‍ಪಿ, ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದ ವೇಳೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ರಕ್ಷಣೆ, ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆಯಂತಹ ಪ್ರಕರಣಗಳನ್ನು ನಿಯಂತ್ರಿಸಲಾಗಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಉತ್ತರಪ್ರದೇಶದ ಗೋರಕ್‍ಪುರದಲ್ಲಿರುವ ಭಗವಾನ್‍ನೇ ಧರ್ಮಸ್ಥಳದಲ್ಲಿರುವ ಮಂಜುನಾಥ್‍ನ ರೂಪದಲ್ಲಿ ಗೋವುಗಳನ್ನು ರಕ್ಷಣೆ ಮಾಡುತ್ತಿದ್ದಾನೆ. ಆದಿಚುಂಚನಗಿರಿ ಪೀಠದ ಬಾಲಗಂಗಾಧರನಾಥ ಸ್ವಾಮೀಜಿಗಳು ನಮ್ಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಇಂತಹ ಪುಣ್ಯ ನಾಡಿನಲ್ಲಿ ಭ್ರಷ್ಟ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಪಿಯೂಶ್ ಗೋಯಲ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ವಿ.ಸೋಮಣ್ಣ ಸೇರಿದಂತೆ ಹಲವಾರು ಮುಖಂಡರು ಇದ್ದರು

Facebook Comments

Sri Raghav

Admin