ಕಾಡಾನೆಗಳ ದಾಳಿ : ಬಾಳೆ, ಅಡಿಕೆ, ತೆಂಗು,ತರಕಾರಿ ಬೆಳೆ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

dabaspete

ದಾಬಸ್‍ಪೇಟೆ, ಮಾ.30-ಕಾಡಾನೆಗಳ ಉಪಟಳ ಮುಂದುವರೆದಿದೆ. ಅಪಾರ ಪ್ರಮಾಣದ ಬೆಳೆಗಳನ್ನು ತಿಂದು ನಾಶಪಡಿಸಿದ್ದು , ಅನ್ನದಾತರು ಕಂಗಾಲಾಗಿದ್ದಾರೆ. ಮೇಲಿಂದ ಮೇಲೆ ಕಾಡಾನೆಗಳು ನೆಲಮಂಗಲ ತಾಲ್ಲೂಕಿನ ಸೀಗೇಪಾಳ್ಯ, ಗೊಲ್ಲರಹಟ್ಟಿ , ಶಿವಗಂಗೆ ಸುತ್ತಮುತ್ತ ಕಾಡಾನೆಗಳು ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬಾಳೆ, ಅಡಿಕೆ, ತೆಂಗು ಹಾಗೂ ತರಕಾರಿ ಬೆಳೆಗಳನ್ನು ತಿಂದು ನಾಶಪಡಿಸಿವೆ. ಕಳೆದ ರಾತ್ರಿ ಸೀಗೇಪಾಳ್ಯ ಮತ್ತು ಗೊಲ್ಲರಹಟ್ಟಿ ಗ್ರಾಮದ ನಿವಾಸಿಗಳಾದ ಬಾಲಯ್ಯ, ಕೆಂಪಯ್ಯ ಮತ್ತು ಬೈಲ್ ರಂಗಯ್ಯ ಎಂಬುವರ ಜಮೀನುಗಳಿಗೆ ನುಗ್ಗಿ ತೆಂಗಿನ ಮರ ಮತ್ತು ಸೌತೆಗಿಡವನ್ನು ತಿಂದು ನಾಶಪಡಿಸಿವೆ.

ಬನ್ನೇರುಘಟ್ಟದಿಂದ ಎಂಟು ಕಾಡಾನೆಗಳ ಹಿಂಡು ಶಿವಗಂಗೆ ತಪ್ಪಲಿನಂತೆ ಬಂದಿದ್ದು , ರಾತ್ರಿಯಾದರೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ಎಂಟು ಕಾಡಾನೆಗಳ ಪೈಕಿ ದೇವಗಾನಹಳ್ಳಿ , ವೀರಸಾಗರ, ಹೊಸಹಳ್ಳಿ ಬಳಿ ಮೂರು ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ.
ಇನ್ನು ಐದು ಕಾಡಾನೆಗಳು ತಪ್ಪಿಸಿಕೊಂಡಿದ್ದು ರೈತರಿಗೆ ನಿರಂತರವಾಗಿ ಕಾಟ ಕೊಡುತ್ತಿವೆ. ಮೊದಲೇ ಬರಗಾಲ ತಾಂಡವವಾಡುತ್ತಿದ್ದು , ಇರುವ ನೀರಿನಲ್ಲೇ ತರಕಾರಿ ಬೆಳೆಗಳನ್ನು ಬೆಳೆದಿದ್ದು , ಆನೆಗಳು ದಾಳಿ ಮಾಡಿ ಅದನ್ನೂ ನಾಶಪಡಿಸಿವೆ. ಹೀಗಾದರೆ ನಮ್ಮ ಗತಿಯೇನು? ಪ್ರತಿ ವರ್ಷವು ಆನೆಗಳ ದಾಳಿ ನಡೆಯುತ್ತಲೇ ಇರುತ್ತದೆ.

ಆದರೆ ಅವುಗಳನ್ನು ನಿಯಂತ್ರಿಸಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಶಾಶ್ವತವಾಗಿ ಆನೆಗಳಿಂದ ಮುಕ್ತಿ ನೀಡಬೇಕೆಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ. ಈಗಾಗಲೇ ಆನೆಗಳ ದಾಳಿಗೆ ಮೂರು ಜನರು ಸಾವನ್ನಪ್ಪಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿ ಯಾವುದೇ ಪರಿಹಾರ ದೊರೆಯದೆ ಬೀದಿಪಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಆನೆಗಳಿಂದ ಶಾಶ್ವತವಾಗಿ ಮುಕ್ತಿ ನೀಡುವಂತೆ ರೈತರು ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin