ಕಾಡಾನೆ ದಾಳಿಗೆ  ಅರಣ್ಯ ರಕ್ಷಕ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಮೇ 22- ಕಾಡಾನೆ ದಾಳಿಗೆ ಕರ್ತವ್ಯ ನಿರತ ಅರಣ್ಯ ರಕ್ಷಕ ಬಲಿಯಾಗಿರುವ ಘಟನೆ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ನಾಗಮಲೆ – ಇಂಡಿಗನತ್ತ ಪ್ರದೇಶದಲ್ಲಿ ನಡೆದಿದೆ. ಕೊಂಗನೂರು ಗ್ರಾಮದ ಹಲಗ ತಂಬಡಿ (40) ದಾಳಿಗೆ ಬಲಿಯಾದ ವ್ಯಕ್ತಿ.

ಪಾರ್ಲ ರೇಂಜ್‍ನಲ್ಲಿ ವಾಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಈತ ಕಳೆದ 8 ವರ್ಷಗಳಿಂದ ಈ ಪ್ರದೇಶದಲ್ಲಿ ಕಳ್ಳ ಬೇಟೆ ತಡೆ ಶಿಬಿರದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದರು. ಎಂದಿನಂತೆ ನಿನ್ನೆ ಕರ್ತವ್ಯದಲ್ಲಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಕಾಡಾನೆ ದಾಳಿಗೊಳಗಾಗಿ ಮೃತಪಟ್ಟ ಹಲಗ ತಂಬಡಿ ಮೃತ ದೇಹವನ್ನು ಕುಟುಂಬದವರು ಹಾಗೂ ಗ್ರಾಮಸ್ಥರು ಸ್ಥಳೀಯ ರೈತ ಸಂಘದವರೊಡಗೂಡಿ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಅರಣ್ಯ ಇಲಾಖೆ ಕಚೇರಿ ಮುಂದಿಟ್ಟು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದರು.

ಮೃತ ಹಲಗ ತಂಬಡಿಗೆ ಪತ್ನಿ ಹಾಗೂ ಪುತ್ರಿಯರಿದ್ದು ಅವರ ಜೀವನ ನಿರ್ವಹಣೆಗೆ 5 ಲಕ್ಷ ರೂ. ಪರಿಹಾರ ಹಾಗೂ ಮೃತನ ಪತ್ನಿಗೆ ಇಲಾಖೆಯಲ್ಲಿ ಖಾಯಂ ನೌಕರಿ ನೀಡುವಂತೆ ಒತ್ತಾಯಿಸಿದರು.

ಸ್ಥಳಕ್ಕಾಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ಮಾತನಾಡಿ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಬಂದ ನಂತರ ಇಲಾಖೆಯಿಂದ 5 ಲಕ್ಷ ಪರಿಹಾರ ನೀಡಲಾಗುವುದು ಹಾಗೂ ಇನ್ನಿತರ ಬೇಡಿಕೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸ ಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟ ಠಾಣೆ ಸಿಪಿಐ ಗೋಪಾಲ ಕೃಷ್ಣ ಪ್ರತಿಭಟನಾ ಸ್ಥಳಕ್ಕೆ ಬಂದೋಬಸ್ತ್ ಒದಗಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ