ಕಾಡಾನೆ ದಾಳಿಗೆ ವನಪಾಲಕ ಬಲಿ : ಗ್ರಾಮಸ್ಥರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Protest

ಮಾಗಡಿ,ಸೆ.10-ನಿನ್ನೆ ರಾತ್ರಿ ವನಪಾಲಕನೊಬ್ಬ ಆನೆ ದಾಳಿಗೆ ಬಲಿಯಾಗಿದ್ದು, ಈ ಪ್ರಕರಣಗಳು ಮರುಕಳಿಸುತ್ತರುವುದನ್ನು ವಿರೋಧಿಸಿ ಅತ್ತಿನಕೆರೆ ಗ್ರಾಮಸ್ಥರು ರೊಚ್ಚುಗೆದ್ದು ರಾಮನಗರ ಮಾಗಡಿ ರಸ್ತೆಯನ್ನು ಬಂದ್ ಮಾಡಿ ಇಂದು ಪ್ರತಿಭಟನೆ ನಡೆಸಿದರು. ಆನೆ ದಾಳಿಗೆ ಬಲಿಯಾದ ವನಪಾಲಕ 35 ವರ್ಷದ ಪಂಚಲಿಂಗಯ್ಯ ನಿನ್ನೆ ರಾತ್ರಿ ಕಾಡಾನೆಯನ್ನು ಓಡಿಸುವ ಸಂದರ್ಭ ಈ ಘಟನೆ ನಡೆದಿದೆ.  ಮೃತ ಪಂಚಲಿಂಗಯ್ಯ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಗ್ರಾಮದ ಮೇಲೆ ನಡೆಯುತ್ತಿರುವ ಆನೆ ಹಾವಳಿಯನ್ನು ತಡೆಗಟ್ಟಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನಾಕಾರರು ಪಂಚಲಿಂಗಯ್ಯ ಅವರ ಶವವನ್ನು ಪೊಲೀಸರಿಗೊಪ್ಪಿಸದೆ ರಸ್ತೆಯಲ್ಲೇ ಇಟ್ಟು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಬರಲೇಬೇಕೆಂದು ಪಟ್ಟು ಹಿಡಿದರು.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ಪಿ ಲಕ್ಷ್ಮಿ ಗಣೇಶ್, ಜಿಲ್ಲಾ ಅರಣ್ಯಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಲಕ್ಷ್ಮಿ , ಮಾಗಡಿ ಸರ್ಕಲ್ ಇನ್‍ಸ್ಪೆಕ್ಟರ್ ನಂದೀಶ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿ ಪಂಚಲಿಂಗಯ್ಯನವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಿದರು.  ಕಳೆದ ವಾರವಷ್ಟೇ ಬಹಿರ್ದೆಸೆಗೆ ಹೋಗಿದ್ದ ವ್ಯಕ್ತಿಯೊಬ್ಬನನ್ನು ಕಾಡಾನೆಯೊಂದು ತುಳಿದು ಸಾಯಿಸಿತ್ತು.  ತಾಲ್ಲೂಕಿನ ಬಂಟರಗುಪ್ಪೆ ಅರಣ್ಯ ಪ್ರದೇಶದಲ್ಲಿ ಕಾಡಾನೆಯನ್ನು ಅಟ್ಟುವ ಸಂದರ್ಭದಲ್ಲಿ ಆನೆಯು ವನಪಾಲಕನನ್ನು ಸೊಂಡಿಲಿನಿಂದ ಎಸೆದು ಕೊಂದು ಹಾಕಿದೆ. ಕಾಡಾನೆ ದಾಳಿಯಿಂದ ಬಲಿಯಾಗುವವರ ಸಂಖ್ಯೆ ತಾಲ್ಲೂಕಿನಲ್ಲಿ ಮರುಕಳಿಸುತ್ತಲೇ ಇದೆ. ಕಳೆದ ಎರಡು ವರ್ಷದ ಹಿಂದೆ ರೈತರೊಬ್ಬರು ಆನೆ ದಾಳಿಗೆ ತುತ್ತಾಗಿದ್ದರು. ಈಗ ಮತ್ತೊಮ್ಮೆ ಅಂಥದೇ ದಾಳಿ ನಡೆದಿದದು,, ಗ್ರಾಮಸ್ಥರು ಭಯದಲ್ಲೇ ಕಾಲ ಕಳೆಯುವಂತಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin