ಕಾನ್ಸ್ಟೆಬಲ್’ಗಳ ಮೇಲೆ ಹಲ್ಲೆ ಮಾಡಿ ಬಂದೂಕು ಕಸಿದು ಪರಾರಿಯಾದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Police-Attack
ಬೆಂಗಳೂರು, ಜ.18- ರಾತ್ರಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್ ಕಾನ್ಸ್‍ಟೆಬಲ್‍ಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅವರ ಬಳಿ ಇದ್ದ .303 ಬಂದೂಕನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಡಿಗೇಹಳ್ಳಿ ಠಾಣೆ ಕಾನ್ಸ್‍ಟೆಬಲ್‍ಗಳಾದ ಪರಮೇಶ್ ಮತ್ತು ಸಿದ್ದಪ್ಪ ಅವರು ರಾತ್ರಿ ಗಸ್ತಿನಲ್ಲಿದ್ದರು.

ಮುಂಜಾನೆ 2 ಗಂಟೆ ಸಮಯದಲ್ಲಿ ಭದ್ರಪ್ಪ ಲೇಔಟ್‍ನ ಟಾಟಾ ನಗರದ 9ನೆ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಮನೆಯೊಂದರ ಮುಂದೆ ನಿಲ್ಲಿಸಲಾಗಿದ್ದ ಕಾರಿನ ಬಳಿ ನಾಲ್ಕೈದು ಮಂದಿ ಅನುಮಾನಾಸ್ಪದವಾಗಿ ನಿಂತಿರುವುದು ಗಮನಕ್ಕೆ ಬಂದಿದೆ. ಈ ಇಬ್ಬರು ಕಾನ್ಸ್‍ಟೆಬಲ್‍ಗಳು ಆ ಸ್ಥಳಕ್ಕೆ ಹೋಗುತ್ತಿದ್ದಾಗ ಕಾರಿನ ಬಳಿ ಇವರು ಅವಿತುಕೊಂಡಿದ್ದಾರೆ. ಅವರನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಇವರ ಮೇಲೆಯೇ ದುಷ್ಕರ್ಮಿಗಳು ಮುಗಿಬಿದ್ದಿದ್ದಾರೆ.

ಈ ವೇಳೆ ಕಾನ್ಸ್‍ಟೆಬಲ್ ಬಳಿ ಇದ್ದ .303 ಬಂದೂಕು ಕೆಳಗೆ ಬಿದ್ದಿದೆ. ದುಷ್ಕರ್ಮಿಗಳು ಬಂದೂಕನ್ನು ತೆಗೆದುಕೊಂಡು ಇವರ ಮೇಲೆ ಹಿಗ್ಗಾಮುಗ್ಗ ಥಳಿಸಿ ಪರಾರಿಯಾಗಿದ್ದಾರೆ. ತಕ್ಷಣ ಪರಮೇಶ್ವರ್ ಅವರು ಕೊಡಿಗೇಹಳ್ಳಿ ಠಾಣೆಗೆ ವಿಷಯ ತಿಳಿಸಿದ್ದಾರೆ. ಹೊಯ್ಸಳ ಸಿಬ್ಬಂದಿ, ಚೀತಾ ಹಾಗೂ ರಾತ್ರಿ ಗಸ್ತಿನಲ್ಲಿದ್ದ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ದುಷ್ಕರ್ಮಿಗಳಿಗಾಗಿ ಶೋಧ ಕೈಗೊಂಡರಾದರೂ ಅಷ್ಟರಲ್ಲಾಗಲೇ ಅವರು ಕಣ್ಮರೆಯಾಗಿದ್ದರು. ಹಲ್ಲೆಯಿಂದ ಗಾಯಗೊಂಡಿರುವ ಕಾನ್ಸ್‍ಟೆಬಲ್‍ಗಳಾದ ಪರಮೇಶ್ ಮತ್ತು ಸಿದ್ದಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ವಿದ್ಯುತ್ ಇರಲಿಲ್ಲ. ಅಲ್ಲದೆ, ಸ್ವಲ್ಪ ದೂರದಲ್ಲಿ ರಾಜಕಾಲುವೆ, ರೈಲ್ವೆ ಹಳಿ ಇರುವುದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Facebook Comments

Sri Raghav

Admin