ಕಾಮಗಾರಿ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್‍ಗಳ ನಡುವೆ ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

Krpuram

ಕೆ.ಆರ್.ಪುರ, ಜ.13-ಯುಜಿಡಿ ಕಾಮಗಾರಿ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್‍ಗಳ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದ ಘಟನೆ ನಡೆದು ಸಾರ್ವಜನಿಕರು ಇರಿಸು-ಮುರಿಸು ಪಡುವಂತಾಯಿತು.  ಕೆ.ಆರ್.ಪುರಂನ ಟಿ.ಸಿ.ಪಾಳ್ಯದಲ್ಲಿ ಜಿಪಿಡಬ್ಲ್ಯುಜೆಪಿ ಯೋಜನೆಯಡಿ 7 ಕೋಟಿ ಅನುದಾನದಲ್ಲಿ ಯುಜಿಡಿ ಕಾಮಗಾರಿ ಪ್ರಾರಂಭವಾಗಿದ್ದು, ಇಂಜಿನಿಯರ್‍ಗಳು ಪಂಪ್‍ಸೆಟ್ ಹಾಗೂ ಜನರೇಟರ್ ಅಳವಡಿಸಲು ಸ್ಥಳೀಯರ ಅನುಮತಿ ಪಡೆದು 14 ಅಡಿ ಭೂಮಿಯನ್ನು ಅಗೆದಿದ್ದಾರೆ.   ಇಂದು ಬೆಳಗ್ಗೆ ಭೂಮಿ ಅಗೆಯುತ್ತಿದ್ದಾಗ ಶಾಸಕ ಭೈರತಿ ಬಸವರಾಜು ಅವರ ಬೆಂಬಲಿಗರು ಹಾಗೂ ಬಿಬಿಎಂಪಿ ನಾಮನಿರ್ದೇಶಿತ ಕಾಂಗ್ರೆಸ್ ಸದಸ್ಯ ಆಂತೋಣಿ ಸ್ವಾಮಿ ಮತ್ತು ಕೆಲ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಇಲ್ಲಿ ಭೂಮಿ ಅಗೆಯಬಾರದು, ಪಂಪ್‍ಸೆಟ್ ಅಳವಡಿಸಬಾರದು, ಜನರೇಟರ್ ಹಾಕಬಾರದು ಎಂದು ಪಟ್ಟು ಹಿಡಿದು ಅಗೆದಿದ್ದ ಹಳ್ಳಕ್ಕೆ ಮಣ್ಣು ತುಂಬಲಾರಂಭಿಸಿದರು.  ಈ ವಿಷಯ ತಿಳಿದು ಬಿಬಿಎಂಪಿ ಬಿಜೆಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಧಾವಿಸಿ ಕಾಮಗಾರಿಗೆ ಏಕೆ ಅಡ್ಡಿಪಡಿಸುತ್ತೀರಾ? ಈ ಕಾಮಗಾರಿಗೆ ನಿಮ್ಮ ಶಾಸಕರೇ ಗುದ್ದಲಿ ಪೂಜೆ ಮಾಡಿ ಹೋಗಿದ್ದಾರೆ. ಅಲ್ಲದೆ, ಸ್ಥಳೀಯರ ಒಪ್ಪಿಗೆಯನ್ನು ಪಡೆದುಕೊಂಡೇ ಪಂಪ್‍ಸೆಟ್ ಹಾಕಲಾಗುತ್ತಿದೆ. ಕಾಮಗಾರಿ ನಡೆಯಲು ಬಿಡಿ ಎಂದು ಒತ್ತಾಯಿಸಿದರು.

ಇದರಿಂದ ಮಾತಿಗೆ ಮಾತು ಬೆಳೆದು ಪೂರ್ಣಿಮಾ ಶ್ರೀನಿವಾಸ್ ಹಾಗೂ ಆಂತೋಣಿ ಸ್ವಾಮಿ ನಡುವೆ ವಾಗ್ವಾದವೇ ನಡೆಯಿತು. ಕಾಂಗ್ರೆಸ್ಸಿಗರು ಇಲ್ಲಿ ಪಂಪ್‍ಸೆಟ್ ಹಾಕಿದರೆ ಸುತ್ತಮುತ್ತಲ ಜನರಿಗೆ ವಾಸನೆ ಬರುತ್ತದೆ. ಜನರೇಟರ್‍ನಿಂದ ಸದಾ ಶಬ್ಧ ಬರುವುದರಿಂದ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ಇಲ್ಲಿ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಹಠ ಹಿಡಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರು ಪಂಪ್‍ಸೆಟ್ ಇಲ್ಲೇ  ಇರಲಿ. ಇದರಿಂದ ನಮಗೆ ಅನುಕೂಲವಾಗುತ್ತದೆ. ಜನರೇಟರ್‍ಗೆ ಸಮೀಪದಲ್ಲೇ ಜಾಗ ಕೊಡುತ್ತೇವೆ ಅಲ್ಲಿ ಅಳವಡಿಸಿ ಎಂದು ಇಂಜಿನಿಯರ್‍ಗೆ ಮನವಿ ಪತ್ರ ನೀಡಿದರು. ನಂತರ ವಾತಾವರಣ ತಿಳಿಯಾಯಿತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin