ಕಾಯಿಲೆ ಬಿದ್ದ ಕುಟುಂಬಕ್ಕೆ ಮಗನ ಹುಟ್ಟುಹಬ್ಬದ ಹಣ ದಾನ ಮಾಡಿ ಮಾದರಿಯಾದ ದಂಪತಿ
ಹುಣಸೂರು, ಡಿ.14- ಬಡಿಸಿದರೆ ಹಸಿವಿರಬಾರದು. ಗುಡಿಸಿದರೆ ಕಸವಿರಬಾರದು. ದಾನ ಮಾಡಿದರೆ ಇನ್ನೊಬ್ಬರ ಬಾಳಿಗೆ ದಾರಿದೀಪವಾಗಬೇಕು ಎಂಬ ಗಾದೆ ಮಾತಿಗೆ ಕಟ್ಟೆಮಳಲವಾಡಿ ಗ್ರಾಮದ ಈ ಆದರ್ಶ ದಂಪತಿಯೇ ಉದಾಹರಣೆ. ಕಾಯಿಲೆ ಗೂಡಾಗಿರುವ ಕುಟುಂಬದ ಚಿಕಿತ್ಸಾ ವೆಚ್ಚ ಭರಿಸಲು ತಮ್ಮ ಮಗನ ಹುಟ್ಟುಹಬ್ಬಕ್ಕೆ ಕೂಡಿಟ್ಟಿದ್ದ 2100 ಹಣವನ್ನು ದಾನ ಮಾಡುವ ಮೂಲಕ ಗಣೇಶ ಮತ್ತು ಅರ್ಪಿತಾ ದಂಪತಿ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.
ಕಟ್ಟೆಮಳಲವಾಡಿಯಲ್ಲಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವ ಪರಶುರಾಮ ಎಂಬುವರ ಪತ್ನಿ ಚೆನ್ನಾಜಮ್ಮ ಪಾಶ್ರ್ವವಾಯು ಪೀಡಿತೆ. ಮಗ ಮಲ್ಲೇಶನಿಗೆ ಬ್ರೈನ್ ಟ್ಯೂಮರ್. ಇನ್ನು 7 ವರ್ಷದ ಮೊಮ್ಮಗಳು ಕಮಲಳಿಗೆ ಕ್ಯಾನ್ಸರ್. ಇವರ ಚಿಕಿತ್ಸಾ ವೆಚ್ಚವೇ ತಿಂಗಳಿಗೆ 15,000. ಪತ್ನಿ, ಮಗ ಮತ್ತು ಮೊಮ್ಮಗಳ ಚಿಕಿತ್ಸಾ ವೆಚ್ಚ ಭರಿಸುವುದೇ ಪರಶುರಾಮನ ದಿನನಿತ್ಯದ ಕಾಯಕ. ಎಷ್ಟೇ ಕೂಲಿ ಮಾಡಿದರೂ ಚಿಕಿತ್ಸಾ ವೆಚ್ಚ ಮತ್ತು ಕುಟುಂಬದ ಹಸಿವು ನೀಗಿಸಲು ಪರಶುರಾಮನಿಗೆ ಸಾಧ್ಯವಾಗದೆ ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ.
ಈ ಕುಟುಂಬದ ಕರುಣಾಜನಕ ಕಥೆ ಕೇಳಿದ ಗಣೇಶ ಮತ್ತು ಅರ್ಪಿತಾ ದಂಪತಿ ತಮ್ಮ ಮಗ ಸಿದ್ಧಾರ್ಥನ ಹುಟ್ಟುಹಬ್ಬಕ್ಕೆ ಕೂಡಿಟ್ಟಿದ್ದ ಹಣವನ್ನು ಪರಶುರಾಮನಿಗೆ ನೀಡಿ ಈ ಹಣವನ್ನು ನಿಮ್ಮ ಕುಟುಂಬ ಸದಸ್ಯರ ಚಿಕಿತ್ಸಾ ವೆಚ್ಚಕ್ಕೆ ಭರಿಸಿಕೊಳ್ಳಿ ಎಂದು ಹೇಳಿ ಮಾನವೀಯತೆ ಮೆರೆದಿದ್ದಾರೆ. ಆಧುನಿಕ ಕಾಲದಲ್ಲೂ ಇಂತಹ ನಿಕೃಷ್ಟ ಬದುಕು ಸಾಗಿಸುತ್ತಿರುವವರು ಇನ್ನೂ ಇದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಮಾರಣಾಂತಿಕ ತತ್ತರಿಸಿರುವ ಪರುಶುರಾಮನ ಕುಟುಂಬಕ್ಕೆ ಅಂಬೇಡ್ಕರ್ ನಿಗಮದಿಂದ ಧನ ಸಹಾಯ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಗಣೇಶ ಮತ್ತು ಅರ್ಪಿತಾ ದಂಪತಿಯಂತೆ ಉಳ್ಳವರು ಪರಶುರಾಮನ ಕುಟುಂಬಕ್ಕೆ ನೆರವು ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ನಿಂಗರಾಜು ಮಲ್ಲಾಡಿ ಮನವಿ ಮಾಡಿಕೊಂಡರು. ಯಾವುದೇ ಜಾತಿ, ಧರ್ಮದವರು ಇರಲಿ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿದ್ದರೆ, ಅಂತಹವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಅಂತಹ ಕಾನೂನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಬೇಕು ಎಂದು ನಿಂಗರಾಜು ಒತ್ತಾಯಿಸಿದರು.