ಕಾರವಾರದ ಅರೆಬೈಲು ಘಟ್ಟದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--n01

ಕಾರವಾರ,ಸೆ.13-ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಅರೆಬೈಲು ಘಟ್ಟ ಸಮೀಪ ಲಾರಿ ಮತ್ತು ಝೈಲೊ ವಾಹನದ ನಡುವೆ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರಲ್ಲಿ ಎರಡು ತಿಂಗಳ ಹಸುಗೂಸು ಸೇರಿದಂತೆ ಮೂವರು ಮಕ್ಕಳು, ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿದ್ದಾರೆ. ಒಟ್ಟು 10 ಮಂದಿ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Acci--04

ಮೃತಪಟ್ಟಿರುವವರೆಲ್ಲರೂ ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾಮದವರಾಗಿದ್ದು , ಇವರೆಲ್ಲರೂ ಮಾಜಿ ಶಾಸಕ ಶಾಮ್ ಘಾಟ್‍ಗೆ ಅವರ ಸಂಬಂಧಿಗಳು ಎಂದು ತಿಳಿದುಬಂದಿದೆ. ಮೃತಪಟ್ಟಿರುವವರಲ್ಲಿ ವಿವೇಕ್ ಘಾಟ್‍ಗೆ, ಸಾಗರ್, ಮುಜುಂವುಲ್ಲಾ( ಕಾರು ಚಾಲಕ), ಮೇನಕಾ(25), ವೈಷ್ಣವಿ(4), ಸಿದ್ದಾರ್ಥ(1) ರೇಣುಕಾ ಸೇರಿದ್ದಾರೆ. ಇನ್ನುಳಿದ ಮೂವರು ಮೃತರು ಮತ್ತು ಇಬ್ಬರು ಗಾಯಾಳುಗಳ ಹೆಸರುಗಳು ಲಭ್ಯವಾಗಿಲ್ಲ.
ಇವರೆಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಸುಬ್ರಹ್ಮಣೇಶ್ವರ ಸ್ವಾಮಿ ದರ್ಶನ ಪಡೆದು ರಾಯಭಾಗಕ್ಕೆ ಹಿಂದಿರುಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಇರುವ ಅರೆಬೈಲು ಘಟ್ಟದ ಬಳಿ ಕಾರು ಬರುತ್ತಿದ್ದಾಗ ಹುಬ್ಬಳ್ಳಿಯಿಂದ ಅಂಕೋಲಾಕ್ಕೆ ತೆರಳುತ್ತಿದ್ದ ಲಾರಿ ಇವರಿದ್ದ ನತದೃಷ್ಟ ಕಾರಿಗೆ ಅಪ್ಪಳಿಸಿದೆ. ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು , ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Acci--02

ಬಂಧುಗಳ ಆಕ್ರಂದನ:

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಕುಟುಂಬದವರು, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ತಮ್ಮ ಪ್ರಿಯರು, ಮಕ್ಕಳುಗಳನ್ನು ಕಳೆದುಕೊಂಡ ಸಂಬಂಧಿಕರು ದುರ್ವಿಧಿಯನ್ನು ಹಳಿಯುತ್ತಾ ಶೋಕಿಸುತ್ತಿರುವುದು ಕರುಣಾಜನಕವಾಗಿತ್ತು.

Facebook Comments

Sri Raghav

Admin