ಕಾರುಗಳು ಮುಖಾಮುಖಿ ಡಿಕ್ಕಿ : ದಂಪತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Accident-02

ಕನಕಪುರ,ಅ.30-ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ತೀವ್ರ ಗಾಯಗೊಂಡಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.  ಬೆಂಗಳೂರಿನ ಕೋಣನಕುಂಟೆ ಕ್ರಾಸ್‍ನ ಎಳಚೇನಹಳ್ಳಿ ಗ್ರಾಮದ ದಂಪತಿಗಳಾದ ಕುಮಾರ್(47), ಪತ್ನಿ ರುದ್ರಮ್ಮ(35) ಮೃತಪಟ್ಟ ದುರ್ದೈವಿಗಳಾಗಿದ್ದು, ಮಕ್ಕಳಾದ ಪೂರ್ಣಿಮ(14), ಕಿರಣ್(12) ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ನಗರದ ಬಿಡಬ್ಲ್ಯುಎಸ್‍ಎಸ್‍ನಲ್ಲಿ ನೌಕರರಾಗಿರುವ ಕುಮಾರ್ ಕನಕಪುರ ತಾಲ್ಲೂಕಿನ ಕಬ್ಬಾಳಮ್ಮನ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳುತ್ತಿದ್ದಾಗ ಪಟ್ಟಣದ ರೈಸ್‍ಮಿಲ್ ಸಮೀಪ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಕ್ಕಳು ಗಾಯಗೊಂಡಿದ್ದಾರೆ.

ಈ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುತ್ತತ್ತಿಗೆ ತೆರಳಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಮಾರ್ಗಮಧ್ಯೆ ಪಾನಮತ್ತರಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ಕಾರಿನಲ್ಲಿದ್ದ ಐವರು ವಿದ್ಯಾರ್ಥಿಗಳಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.  ಸ್ಥಳಕ್ಕೆ ಆಗಮಿಸಿದ ಪಟ್ಟಣ ಸಂಚಾರಿ ಪೊಲೀಸರು ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ಗಾಯಾಳುಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin