ಕಾರು ಪಲ್ಟಿ : ಆಯುರ್ವೇದಿಕ್ ವೈದ್ಯ ಸಾವು
ಮಳವಳ್ಳಿ,ಆ.11- ವೇಗವಾಗಿ ಬರುತ್ತಿದ್ದ ಕಾರೊಂದು ಅಪಘಾತಕ್ಕೀಡಾಗಿ ಕಾರಿನಲ್ಲಿದ್ದ ಪಟ್ಟಣದ ಆಯುರ್ವೇದಿಕ್ ವೈದ್ಯರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಎನ್ಇಎಸ್ ಬಡಾವಣೆಯ ಕುರುಬರ ವಿದ್ಯಾರ್ಥಿ ನಿಲಯ ರಸ್ತೆಯ ವಾಸಿ ಖಾಸಗಿ ಆಯುರ್ವೇದಿಕ್ ವೈದ್ಯರಾದ ಸಿದ್ದಪ್ಪ (65) ಎಂಬುವರೇ ಮೃತಪಟ್ಟ ದುರ್ದೈವಿ.ಘಟನೆಯಲ್ಲಿ ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಟಾಟಾ ಇಂಡಿಕಾ ಕಾರಿನಲ್ಲಿ ಯಳಂದೂರು ಸಮೀಪ ಇರುವ ತಮ್ಮ ತೋಟ ನೋಡಲೆಂದು ಕುಟುಂಬದವರ ಸಮೇತ ಹೊರಟಿದ್ದರು. ನಿನ್ನೆ ಬೆಳಗ್ಗೆ 11.50 ರ ಸಮಯದಲ್ಲಿ ಕಾರು ಮಳವಳ್ಳಿ – ಕೊಳ್ಳೇಗಾಲ ಮುಖ್ಯ ರಸ್ತೆಯ ಶಿವನಸಮುದ್ರದ ರೊಟ್ಟಿಕಟ್ಟೆ ಬಳಿ ವೇಗವಾಗಿ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿ ಹೊಡೆಯಿತು ಎನ್ನಲಾಗಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದು , ಗಾಯಗೊಂಡಿರುವ ಗೌತಮ್ ಹಾಗೂ ಸುಂದ್ರಮ್ಮ ಎಂಬುವರನ್ನು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
► Follow us on – Facebook / Twitter / Google+