ಕಾವೇರಿಗಾಗಿ ಅರೆಬೆತ್ತಲೆ ಮೆರವಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

tumakuru--bjp

ತುಮಕೂರು, ಸೆ.23- ಕಾವೇರಿ ನೀರಿನ ಹಂಚಿಕೆ ಕುರಿತಂತೆ ಸುಪ್ರಿಂಕೋರ್ಟು ನೀಡಿರುವ ಆದೇಶವನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ನಗರದ ಟೌನ್‍ಹಾಲ್ ವೃತ್ತದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು.ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕಾವೇರಿ ಕಣಿವೆಯಲ್ಲಿ ಜಲಕ್ಷಾಮ ಉಂಟಾಗಿದೆ. ಜನ-ಜಾನುವಾರುಗಳ ಕುಡಿಯುವ ನೀರಿಗೂ ಪರದಾಡುತ್ತಿದ್ದು, ಇಂತಹ ವೇಳೆ ತಮಿಳುನಾಡಿನ ಸಾಂಬಾ ಬೆಳೆಗೆ ಅಗತ್ಯವಿರುವ ನೀರು ಹರಿಸುವಂತೆ ಸುಪ್ರಿಂಕೋರ್ಟ್ ಆದೇಶ ನೀಡಿರುವುದು ಖಂಡನೀಯ ಎಂದರು.

ಕರ್ನಾಟಕ ಜಲಾನಯನ ಪ್ರದೇಶದ ಹಾರಂಗಿ, ಕಬಿನಿ, ಹೇಮಾವತಿ ಮತ್ತು ಕೆ.ಆರ್.ಎಸ್.ನಿಂದ ಒಟ್ಟು 27 ಟಿ.ಎಂ.ಸಿ ಮಾತ್ರ ನೀರಿದೆ. ಇದರಲ್ಲಿ ಬೆಂಗಳೂರು ನಗರ,ರಾಮನಗರ, ಮಂಡ್ಯ,ಚಾಮರಾಜನಗರ ಜಿಲ್ಲೆಗಳಿಗೆ ಕುಡಿಯುವ ನೀರಿಗೆ 38 ಟಿ.ಎಂ.ಸಿ ನೀರು ಬೇಕಾಗುತ್ತದೆ.ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದು ಅತ್ಯಂತ ಖಂಡನೀಯ ವೆಂದರು.ಕಳೆದ ಎರಡು ದಿನಗಳ ಹಿಂದೆ ಮೆಟ್ಟೂರು ಡ್ಯಾಂನಲ್ಲಿ 45 ಟಿ.ಎಂ.ಸಿ ನೀರು ಸಂಗ್ರಹವಾಗಿ ಬೇಸಿಗೆ ಬೆಳೆಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರೈತರು, ಜನಪ್ರತಿನಿಧಿಗಳು ಡ್ಯಾಂಗೆ ಬಾಗಿನ ಅರ್ಪಿಸಿದ್ದಾರೆ. ಈ ಎಲ್ಲಾ ಮಾಹಿತಿ ಸುಪ್ರಿಂಕೋರ್ಟಿನ ಮುಂದಿದ್ದರೂ ಕರ್ನಾಟಕಕ್ಕೆ ವಿರುದ್ದವಾಗಿ ಪೂರ್ವಾಗ್ರಹ ಪೀಡಿತರಾಗಿ ತೀರ್ಪು ನೀಡುವ ಮೂಲಕ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡಿರುವುದಲ್ಲದೆ, ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಹೇಮಾವತಿಯಿಂದ ತುಮಕೂರು ನಗರ ಸೇರಿದಂತೆ ಜಿಲ್ಲೆಗೆ ಹರಿಯುವ ನೀರು ಅತ್ಯಂತ ಕಡಿಮೆಯಿದ್ದು, ಈಗಿರುವ ನೀರು ಮುಂದಿನ ಒಂದುವರೆ ತಿಂಗಳಿಗೆ ಮಾತ್ರ ಸಾಕಾಗುತ್ತದೆ. ಆದ್ದರಿಂದ ಜಿಲ್ಲೆಯ ರೈತರು ಸುಪ್ರಿಂಕೋರ್ಟ್‍ನ ತೀರ್ಪಿನ ವಿರುದ್ದ ಬೀದಿಗಿಳಿದು ಶಾಂತಿಯುತ ಹೋರಾಟ ನಡೆಸಬೇಕೆಂದು ಗೋವಿಂದರಾಜು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ರೈತಸಂಘದ ನಿಜಾನಂದ ಮೂರ್ತಿ, ಚಿಕ್ಕಬೈರೇಗೌಡ, ಶಂಕರಪ್ಪ, ಪೂಜಾರಪ್ಪ, ಚಿಕ್ಕರಂಗಯ್ಯ, ರವೀಶ್, ಯತೀಶ್ ಸ್ಭೆರಿದಂತೆ ಹಲವರು ಭಾಗವಹಿಸಿದ್ದರು.ಟೌನ್‍ಹಾಲ್ ವೃತ್ತದಲ್ಲಿ ಅರೆಬೆತ್ತಲೆ ಮೇರವಣಿಗೆ ನಡೆಸಿ ರಸ್ತೆಯಲ್ಲಿಯೇ ಉರುಳುಸೇವೆ ನಡೆಸಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin