ಕಾವೇರಿಗಾಗಿ ದೇವೇಗೌಡರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

 

Devegowdaಬೆಂಗಳೂರು, ಅ.1-ಕಾವೇರಿ ವಿವಾದದಲ್ಲಿ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಮತ್ತು ವಾಸ್ತವ ಸ್ಥಿತಿ ಅರಿಯಲು ಉಭಯ ರಾಜ್ಯಗಳಿಗೆ ತಜ್ಞರ ತಂಡಗಳನ್ನು ಕಳುಹಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ಬೆಳಗ್ಗೆ ಇಲ್ಲಿ ಅಹೋರಾತ್ರಿ ಸತ್ಯಾಗ್ರಹ ಆರಂಭಿಸಿದ್ದಾರೆ.  ಹಿರಿಯ ಮುತ್ಸದ್ದಿ ದೇವೇಗೌಡರ ಉಪವಾಸ ಸತ್ಯಾಗ್ರಹಕ್ಕೆ ಶಾಸಕ ವೈ.ಎಸ್.ವಿ.ದತ್ತ ಹಾಗೂ ವಿಧಾನಪರಿಷತ್ ಸದಸ್ಯಟಿ.ಎ.ಶರವಣ ಅವರು ಸಾಥ್ ನೀಡಿದ್ದಾರೆ. ದೇವೇಗೌಡರ ಈ ನಿರ್ಧಾರದಿಂದಾಗಿ ಕಾವೇರಿ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಂತಾಗಿದೆ.

ದೇವಸ್ಥಾನದಲ್ಲಿ ಪೂಜೆ:

ಇದಕ್ಕೂ ಮುನ್ನ ದೇವೇಗೌಡರು ಬಸವನಗುಡಿಯ ಕಾರಂಜಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕೆಆರ್‍ರಸ್ತೆಯಲ್ಲಿರುವ ಕೋಟೆ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಆ ಬಳಿಕ ಮಹಾತ್ಮ ಗಾಂಧಿ ಪ್ರತಿಮೆಗೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಗಾಂಧೀಜಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಮರಣಶಾಸನ:

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ರಾಜ್ಯದ ಪಾಲಿಗೆ ಮರಣಶಾಸನವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  ಜಲಸಂಗ್ರಹ ಕುರಿತಂತೆ ವಾಸ್ತವ ಸ್ಥಿತಿ ಅರಿಯಲು ಕರ್ನಾಟಕ ಹಾಗೂ ತಮಿಳುನಾಡಿಗೆ ತಜ್ಞರ ತಂಡ ಕಳುಹಿಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು. ಈ ಮೂಲಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕಕ್ಕೆ ಅನ್ಯಾಯ:

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಆಗಿರುವ ನಿರ್ಣಯಗಳನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಕಾವೇರಿ ಜಲವಿವಾದದ ವಿಚಾರದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಬಹಳ ಮುಖ್ಯವಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಸಮಾಲೋಚನೆ ನಡೆಸಿರುವ ವಿಚಾರವೂ ಗೊತ್ತಾಗಿದೆ ಎಂದರು.  ಕಾವೇರಿ ವಿಚಾರದಲ್ಲಿ ನಾನು ಯಾರನ್ನೂ ದೂರುವುದಿಲ್ಲ. ನೆರೆಯ ತಮಿಳುನಾಡಿಗೆ ಅನ್ಯಾಯ ಮಾಡುವ ಉದ್ದೇಶ ನಮಗಿಲ್ಲ. ನಮ್ಮ ಜಲಾಶಯಗಳಲ್ಲಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಕುಡಿಯಲು ನೀರು ಇಲ್ಲದಿದ್ದರೂ ಚಿಂತೆಯಿಲ್ಲ. ತಮಿಳುನಾಡಿಗೆ ನೀರು ಬಿಡೋಣ, ನ್ಯಾಯಾಲಯ ಹೇಳಿದಂತೆ ಕೇಳೋಣ. ಆದರೆ ಅದಕ್ಕೂ ಮುನ್ನ ತಜ್ಞರ ತಂಡವನ್ನು ಉಭಯ ರಾಜ್ಯಗಳಿಗೆ ಕಳುಹಿಸಿ ಎರಡು ದಿನಗಳ ಕಾಲ ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಳ್ಳಬೇಕು. ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ಸಮಸ್ಯೆ ಕಡೆ ಗಮನಹರಿಸಿದ್ದಾರೆ. ಈ ವಿಚಾರವೂ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.  ಸಂಜೆ 4 ಗಂಟೆಯೊಳಗೆ ಕಾವೇರಿ ನಿರ್ವಹಣಾ ಮಂಡಳಿ ಸದಸ್ಯರ ವಿವರ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚಿಸಿದೆ. ಸಂಸತ್‍ನಲ್ಲಿ ಕಾವೇರಿ ವಿಚಾರದ ಬಗ್ಗೆ ಹೋರಾಟ ಮಾಡಿದ್ದೇನೆ ಎಂದರು.

ಮೋದಿ ಮಧ್ಯಸ್ಥಿಕೆ: ಪುಟ್ಟರಾಜು ಪುನರುಚ್ಚಾರ

ಬೆಂಗಳೂರು, ಅ.1-ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟಿನ ಪರಿಹಾರಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿಯವರು ಮಧ್ಯ ಪ್ರವೇಶಿಸಬೇಕೆಂದು ಮಂಡ್ಯ ಕ್ಷೇತ್ರದ ಜೆಡಿಎಸ್ ಸಂಸದ ಸಿ.ಎಸ್.ಪುಟ್ಟರಾಜು ಆಗ್ರಹಿಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮಾಜಿ ಪ್ರಧಾನಿ ದೇವೇಗೌಡರು ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ನಾವು ಕೂಡ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಜನರ ಪಾಲಿಗೆ ಮರಣಶಾಸನವಾಗಿದೆ. ತಕ್ಷಣವೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು, ಜನರ ಹಿತ ಕಾಪಾಡಬೇಕು. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು. ದೇವೇಗೌಡರು ವಿಧಿಯಿಲ್ಲದೆ ಉಪವಾಸ ಸತ್ಯಾಗ್ರಹ ಕೈಗೊಂಡು ಗಾಂಧೀಜಿ ಪ್ರತಿಮೆ ಬಳಿ ಅಹಿಂಸಾತ್ಮಕವಾಗಿ ಹೋರಾಟ ಕೈಗೊಂಡಿದ್ದಾರೆ. ಇಳಿ ವಯಸ್ಸಿನಲ್ಲೂ ಇಂತಹ ಹೋರಾಟಕ್ಕೆ ಮುಂದಾಗಿದ್ದಾರೆ. ಮೋದಿಯವರು ನ್ಯಾಯಯುತವಾಗಿ ವಿಮರ್ಶೆ ಮಾಡಿ ಕಾವೇರಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಬಗೆಹರಿಸಬೇಕೆಂದು ಪುಟ್ಟರಾಜು ಆಗ್ರಹಿಸಿದರು.

ಕಾವೇರಿಗಾಗಿ ಮಾಜಿ ಪ್ರಧಾನಿ ದೇವೇಗೌಡರು ಉಪವಾಸ ಸತ್ಯಾಗ್ರಹ  ಮಾಡುವ ಸ್ಥಳಕ್ಕೆ  ಜೆಡಿಎಸ್ ಬಂಡಾಯ ಶಾಸಕರ ಭೇಟಿ ನೀಡಿ ದೇವೇಗೌಡರೊಂದಿಗೆ ಕೈಕುಲುಕಿದರು.
ಕಾವೇರಿಗಾಗಿ ಮಾಜಿ ಪ್ರಧಾನಿ ದೇವೇಗೌಡರು ಉಪವಾಸ ಸತ್ಯಾಗ್ರಹ ಮಾಡುವ ಸ್ಥಳಕ್ಕೆ ಜೆಡಿಎಸ್ ಬಂಡಾಯ ಶಾಸಕರ ಭೇಟಿ ನೀಡಿ ದೇವೇಗೌಡರೊಂದಿಗೆ ಕೈಕುಲುಕಿದರು.

► Follow us on –  Facebook / Twitter  / Google+

Facebook Comments

Sri Raghav

Admin