ಕಾವೇರಿಗಾಗಿ ಮಂಡ್ಯ ಬಂದ್ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

Mandya

 • ಕೆಆರ್‍ಎಸ್‍ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ
 • ದುಷ್ಕರ್ಮಿಗಳಿಂದ ವೋಲ್ವೋ ಬಸ್‍ಗಳ ಮೇಲೆ ಕಲ್ಲು ತೂರಾಟ
 • ಮೈಸೂರು-ಬೆಂಗಳೂರು ನಡುವೆ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ
 • ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ. ಸಂಜೆ ಸರ್ವಪಕ್ಷಗಳ ಸಭೆ
 • ಮಂಡ್ಯ ಬಂದ್‍ಗೆ ಪಕ್ಷಾತೀತ ಬೆಂಬಲ
 • ಎಲ್ಲ ಜಿಲ್ಲೆಗಳಲ್ಲಿ ಕಾವೇರಿ ಹೋರಾಟದ ಕಾವು
 • ನೂರಾರು ಕನ್ನಡಪರ ಸಂಘಟನೆಗಳು ಹೋರಾಟದಲ್ಲಿ ಭಾಗಿ
 • ರೈತ ಸಂಘಟನೆಗಳಿಂದ ಮುಗಿಲು ಮುಟ್ಟಿದ ಆಕ್ರೋಶ
 • ಉರುಳುಸೇವೆ, ಅರೆಬೆತ್ತಲೆ ಮೆರವಣಿಗೆ, ರಸ್ತೆ ತಡೆ, ಟಯರ್‍ಗಳಿಗೆ ಬೆಂಕಿ
 • ಮೈಸೂರು ಕುಡಿಯುವ ನೀರಿನ ಘಟಕಕ್ಕೆ ಪ್ರತಿಭಟನಾಕಾರರಿಂದ ಬೀಗ
 • ತಮಿಳುನಾಡಿಗೆ ನೀರು ಹರಿಸಿದರೆ ಕೆಆರ್‍ಎಸ್‍ಗೆ ಮುತ್ತಿಗೆ, ಜಿ.ಮಾದೇಗೌಡ ಎಚ್ಚರಿಕೆ

ಮಂಡ್ಯ/ಬೆಂಗಳೂರು, ಸೆ.6- ಕಾವೇರಿ ಜಲಾಶಯಗಳಲ್ಲಿನ ನೀರಿನ ಕೊರತೆ ನಡುವೆಯೂ ತಮಿಳುನಾಡಿಗೆ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಮಂಡ್ಯ ಜಿಲ್ಲಾ ಬಂದ್ಗೆ ಕರೆ ನೀಡಿದ್ದು, ರಾಜ್ಯದೆಲ್ಲೆಡೆ ಕನ್ನಡಿಗರ ಆಕ್ರೋಶ ಭುಗಿಲೆದ್ದಿದೆ.  ತೀರ್ಪು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಂಡಿದೆ. ಮಂಡ್ಯ, ಬೆಂಗಳೂರು, ಮೈಸೂರು, ತುಮಕೂರು, ಕೋಲಾರ, ಹುಬ್ಬಳ್ಳಿ, ಧಾರವಾಡ, ಮಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಎಲ್ಲೆಡೆ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಬೀದಿಗಿಳಿದು ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಸುಪ್ರೀಂಕೋರ್ಟ್ ತೀರ್ಪು ಖಂಡಿಸಿವೆ.

ವಿವಿಧೆಡೆ ರಸ್ತೆ ತಡೆ ನಡೆಸಿ ಟಯರ್ಗಳಿಗೆ ಬೆಂಕಿ ಹಚ್ಚಿ ಬೈಕ್ ರ್ಯಾಲಿ ನಡೆಸಿದ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ತಮಿಳುನಾಡು, ಸುಪ್ರೀಂಕೋರ್ಟ್ ಭೂತ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವೆಡೆ ದುಷ್ಕರ್ಮಿಗಳು ಬಸ್ಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ತಮಿಳುನಾಡಿಗೆ ಹೋಗುವ ಬಸ್ಗಳನ್ನು ನಿಲ್ಲಿಸಲಾಗಿದೆ.  ಕೆಆರ್ಎಸ್ ವೃಂದಾವನದ ಸುತ್ತಲೂ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಇಂದಿನಿಂದ 9 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ರಾಜ್ಯದ ಪರ ಕಾವೇರಿ ವಿವಾದದ ಬಗ್ಗೆ ವಾದ ಮಾಡುವ ವಕೀಲರು ಪದೇ ಪದೇ ವಿಫಲರಾಗುತ್ತಿದ್ದು, ವಕೀಲರಾದ ನಾರಿಮನ್ ಅವರನ್ನು ಬದಲಾವಣೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. [ ಇದನ್ನೂ ಓದಿ : ವಾದ-ವಿವಾದಕ್ಕೆ ಭರಿಸಿದ ವೆಚ್ಚಕ್ಕೆ ಲೆಕ್ಕವಿಲ್ಲ, ಆದರೂ ಬಗೆಹರಿದಿಲ್ಲ ವ್ಯಾಜ್ಯ ]

ಮದ್ದೂರು ತಾಲೂಕಿನ ಮಾಗರಹಳ್ಳಿ ರಸ್ತೆ ಬಳಿ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ ಟಯರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.  ಶ್ರೀರಂಗಪಟ್ಟಣದ ಬಳಿ ಪ್ರವಾಸಿಗರ ವಾಹನ ತಡೆದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ನೀರು ಬಿಟ್ಟರೆ ಆತ್ಮಾಹುತಿ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಬಿಡುವುದು ಎಷ್ಟು ಸಮಂಜಸ. ಬೆಳೆದ ಬೆಳೆಗೇ ನೀರಿಲ್ಲ, ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಡಲು ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ.ಕೆಆರ್ಎಸ್ಗೆ ಮುತ್ತಿಗೆ ಹಾಕುತ್ತೇವೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.  ಸುಪ್ರೀಂಕೋರ್ಟ್ ಆದೇಶ ವಿರೋಧಿಸಿ ಕಾವೇರಿ ಹಿತರಕ್ಷಣಾ ಸಮಿತಿ ಮಂಡ್ಯ ಜಿಲ್ಲಾ ಬಂದ್ಗೆ ಕರೆ ನೀಡಿದ್ದು, ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಅಂಗಡಿ-ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಜನತೆ ಸ್ವಯಂಪ್ರೇರಿತರಾಗಿ ಬೆಳಗ್ಗೆಯಿಂದಲೇ ಬಂದ್ನಲ್ಲಿ ಪಾಲ್ಗೊಂಡಿದ್ದರು.  [ ಇದನ್ನೂ ಓದಿ :  ಸುಪ್ರೀಂ ತೀರ್ಪಿನ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಾಧಾನ ]

ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ, ಸಂಜಯ್ ಸರ್ಕಲ್, ಶ್ರೀರಂಗಪಟ್ಟಣ ಮುಂತಾದ ಕಡೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.  ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೋಲ್ವೋ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮುಂಜಾನೆಯಿಂದ ಕೇವಲ 10 ಸರ್ಕಾರಿ ಬಸ್ಗಳು ಮಾತ್ರ ಮೈಸೂರಿಗೆ ತೆರಳಿದ್ದು, ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಕೆಎಂ ದೊಡ್ಡಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಮಂಡ್ಯದ ಕೆಆರ್ಎಸ್ ಡ್ಯಾಮ್ ಉದ್ಯಾನವನ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಇತ್ತ ಹೇಮಾವತಿ ಜಲಾಶಯದಿಂದ ನೀರು ಹೊರಬಿಡದಂತೆ ಜೆಡಿಎಸ್ ಹಾಗೂ ಕನ್ನಡಪರ ಸಂಘಟನೆಗಳು ಗೊರೂರು ಬಂದ್ಗೆ ಕರೆ ನೀಡಿದ್ದು, ಬಂದ್ ಯಶಸ್ವಿಯಾಗಿದೆ.

ಬಂದ್ನಿಂದ ಉಂಟಾಗುವ ಟ್ರಾಫಿಕ್ ಜಾಮ್, ಇನ್ನಿತರ ತೊಂದರೆಗಳಿಗೆ ವಿಶೇಷ ಫೇಸ್ಬುಕ್ ಪುಟ ಆರಂಭಿಸಲಾಗಿದೆ ಎಂದು ಮಂಡ್ಯ ಎಸ್ಪಿ ಸುಧೀರ್ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ 4 ಡಿವೈಎಸ್ಪಿ, 8 ಸಿಪಿಐ, 3 ಕೆಎಸ್ಆರ್ಪಿ, 2 ಡಿಎಆರ್, 950 ಅರೆಸೇನಾ ಸಿಬ್ಬಂದಿ, 1300 ಸಿವಿಲ್ ಪೊಲೀಸರು, 13 ಎಎಸ್ಐ ಹಾಗೂ 2400 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.  ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ. ಇಂದು ಸಂಜೆ ಸರ್ವಪಕ್ಷಗಳ ಸಭೆ ಇದೆ. ಕೆಆರ್ಎಸ್ ಗರಿಷ್ಠ ನೀರು ಸಂಗ್ರಹ ಸಾಮಥ್ರ್ಯ ಪ್ರಮಾಣ 124 ಅಡಿ. ಸದ್ಯ 93 ಅಡಿ ನೀರು ಸಂಗ್ರಹವಿದೆ. ಪ್ರತಿದಿನ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ಸ್ ನೀರನ್ನು 10 ದಿನಗಳ ಕಾಲ ಹರಿಸಬೇಕು.

ಮಂಡ್ಯ ಪೂರ್ಣ ಬಂದ್

ಮಂಡ್ಯ ಸೆ.06 : ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿರುವ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿವೆ. ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ರಸ್ತೆ ಮಧ್ಯೆ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಪ್ರತಿಭಟನೆ ನಡೆಸುತ್ತಿರುವುದರಿಂದ ರಸ್ತೆ ಸಂಚಾರ ಅಸ್ತವಸ್ಯಗೊಂಡಿದೆ. ಇನ್ನು ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಸರ್ಕಾರಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಇದೇ ವೇಳೆ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದು, ಕಾವೇರಿ ನದಿ ನೀರು ಹಂಚಿಕೆ ಪರ ವಾದಿಸುತ್ತಿರುವ ರಾಜ್ಯದ ಪರ ವಕೀಲರಾದ ಪಾಲಿ ನಾರಿಮನ್ ರನ್ನು ಕೈಬಿಡುವಂತೆ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರು ಹೇಳಿದ್ದಾರೆ.  ಕನ್ನಡ ಪರ ಸಂಘಟನೆಗಳು ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ ಇಂದು ಶಾಲಾ-ಕಾಲೇಜುಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ ರಜೆ ಘೋಷಿಸಿದ್ದಾರೆ. ತಮಿಳುನಾಡಿಗೆ ಪ್ರತಿ ದಿನ 15 ಸಾವಿರ ಕ್ಯೂಸೆಕ್ಸ್ ನೀರನ್ನು 10 ದಿನ ಕಾಲ ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ಸರ್ವಪಕ್ಷ ಸಭೆ ಕರೆದ ಸಿದ್ದರಾಮಯ್ಯ

ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ ಮಂಗಳವಾರ ಮಂಡ್ಯ ಬಂದ್ಗೆ ಕರೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ನಡೆ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಾರೆ. ಮಂಗಳವಾರ ಸಂಜೆ ವಿಧಾನಸಭೆ ಮತ್ತು ವಿಧಾನಪರಿಷತ್ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಮುಖ್ಯಮಂತ್ರಿಗಳು ಕರೆದಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಮತ್ತು ಮುಂದಿನ ಹೋರಾಟದ ಕುರಿತು ಚರ್ಚಿಸಿ, ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಖಂಡಿಸಿ ಕಾವೇರಿ ಹಿತರಕ್ಷಣಾ ವೇದಿಕೆ ಮಂಗಳವಾರ ಮಂಡ್ಯ ಬಂದ್ಗೆ ಕರೆ ನೀಡಿದೆ.

[ ಇದನ್ನೂ ಓದಿ :  ತಮಿಳುನಾಡಿಗೆ ನೀರು ಹರಿಸಿದರೆ ಕೆಆರ್’ಎಸ್’ಗೆ ಮುತ್ತಿಗೆ: ಜಿ.ಮಾದೇಗೌಡ ಎಚ್ಚರಿಕೆ  ]

4ec1b541-2737-4d94-a43c-f1c481611dfb

ಕಬಿನಿ ಜಲಾಶಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

ಎಚ್‍ಡಿ ಕೋಟೆ, ಸೆ.6- ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಕಬಿನಿ ಜಲಾಶಯಕ್ಕೆ ನುಗ್ಗಿ ದಾಂಧಲೆ ಮಾಡುವ ಅಪಾಯವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರವು ಜಲಾಶಯಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.   ಮೈಸೂರಿನ ಹೆಚ್ಚುವರಿ ಎಸ್‍ಪಿ ಕಲಾಕೃಷ್ಣಸ್ವಾಮಿ ಅವರ ಮಾರ್ಗದರ್ಶನದ ಮೇರೆಗೆ ತಾಲೂಕಿನ ಸಬ್‍ಇನ್ಸ್‍ಪೆಕ್ಟರ್ ಹರೀಶ್, ಇನ್ಸ್‍ಪೆಕ್ಟರ್ ವಿ.ಸಿ.ಅಶೋಕ್, ಬೀಚನಹಳ್ಳಿ ಸಬ್‍ಇನ್ಸ್‍ಪೆಕ್ಟರ್ ಸುರೇಶ್, ಕೆಎಸ್‍ಆರ್‍ಪಿ 5 ತುಕಡಿ ಹಾಗೂ 200ಕ್ಕೂ ಹೆಚ್ಚು ಪೊಲೀಸರನ್ನು ತಾಲೂಕಿನ ಹ್ಯಾಂಡ್‍ಪೋಸ್ಟ್ ಹಾಗೂ ಬೀಚನಹಳ್ಳಿ ಪ್ರದೇಶದಲ್ಲಿರುವ ಕಬಿನಿ ಜಲಾಶಯಕ್ಕೆ ಸೂಕ್ತ ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

7ee558e4-5311-4b69-a627-468b18d60fcc

ಬಿಗಿ ಪೊಲೀಸ್ ಬಂದೋಬಸ್ತ್

ಬೆಂಗಳೂರು, ಸೆ.6-ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಮಂಡ್ಯ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸೇರಿದಂತೆ 4ಸಾವಿರ ಪೊಲೀಸರನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರ ಜತೆ ಎರಡು ಕಂಪೆನಿ ಆರ್‍ಎಎಫ್ , ಡಿಎಆರ್ ಪ್ಲಟೂನ್ಸ್, 25 ಕೆಎಸ್‍ಆರ್‍ಪಿ ಪ್ಲಟೂನ್ಸ್ ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.  ನಿನ್ನೆ ಕಾವೇರಿ ತೀರ್ಪು ಹೊರ ಬೀಳುತ್ತಿದ್ದಂತೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್‍ಮೋಹನ್, ದಕ್ಷಿಣ ವಿಭಾಗದ ಐಜಿಪಿ ಬಿ.ಕೆ.ಸಿಂಗ್ ಅವರು ಮಂಡ್ಯದಲ್ಲಿ ಮೊಕ್ಕಾಂಹೂಡಿದ್ದಾರೆ.

9cfa43a9-8c2d-4383-9022-6490292350b8

ಬಂದ್‍ಗೆ ದರ್ಶನ್ ಬೆಂಬಲ :

ಮೈಸೂರು, ಸೆ.6- ತಮಿಳುನಾಡಿಗೆ ನೀರು ಹರಿಸುವ ಸುಪ್ರೀಂ ಆದೇಶ ವಿರೋಧಿಸಿ ಮಂಡ್ಯದಲ್ಲಿ ನಡೆಯುತ್ತಿರುವ ಬಂದ್‍ಗೆ ನಟ ದರ್ಶನ್ ಬೆಂಬಲ ಸೂಚಿಸಿದ್ದಾರೆ. ಇಂದು ಬೆಳಗ್ಗೆ ಸಾಂಸ್ಕೃತಿಕ ನಗರದಲ್ಲಿ ಚಕ್ರವರ್ತಿ ಸಿನಿಮಾ ಚಿತ್ರೀಕರಣದಲ್ಲಿ ನಟ ದರ್ಶನ್ ಭಾಗವಹಿಸಿದ್ದ ವೇಳೆ ಮಂಡ್ಯದಲ್ಲಿ ಬಂದ್ ನಡೆಯುತ್ತಿರುವ ವಿಷಯ ತಿಳಿದು ಚಿತ್ರೀಕರಣವನ್ನು ನಿಲ್ಲಿಸಿ ಬಂದ್‍ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

ed797afe-25f7-43f6-8797-269324a4ca8f

fd6ba668-ac74-499f-af0f-a7127b5ecd1d

ಕೆಆರ್‌ಎಸ್, ಬೃಂದಾವನ ಗಾರ್ಡನ್ ಗೆ ಬಿಗಿ ಭದ್ರತೆ

ಕಾವೇರಿ ನದಿ ನೀರು ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ಕರ್ನಾಟಕದ ವಿರುದ್ಧವಾಗಿ ಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೃಷ್ಣರಾಜಸಾಗರ ಅಣೆಕಟ್ಟು ಹಾಗೂ ಬೃಂದಾವನ ಉದ್ಯಾನವನಕ್ಕೆ ಭಾರಿ ಬಂದೋಬಸ್ತ್, ಬಿಗಿ ಭದ್ರತೆ ಒದಗಿಸಲಾಗಿದೆ. ಸೋಮವಾರದಿಂದ ನಾಲ್ಕು ದಿನಗಳ ಕಾಲ ಪ್ರವೇಶ ನಿಷೇಧಿಸಲಾಗಿದೆ.  ದಕ್ಷಿಣ ವಲಯ ಐಜಿ ಬಿ.ಕೆ.ಸಿಂಗ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಕೆಆರ್‍ಎಸ್ ಜಲಾಶಯದ ಸುತ್ತಲೂ ಪರಿಶೀಲನೆ ನಡೆಸಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ರಾಜ್ಯದ ವಿರುದ್ಧ ಸುಪ್ರಿಂ ಕೋರ್ಟ್ ತೀರ್ಪು ನೀಡಿರುವುದರಿಂದ ಜಲಾಶಯದ ಸುತ್ತಲೂ ಯಾವ ರೀತಿ ಬಿಗಿ ಭದ್ರತೆ ಒದಗಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್ ಐಎಸ್ ಎಫ್) ಪಹರೆ ಕಾಯುತ್ತಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಕೈಗಾರಿಕಾ ಭದ್ರತಾ ಪಡೆ ಕಾರ್ಯನಿರ್ವಹಿಸುವ ಬಗ್ಗೆ ಮಾಹಿತಿ ಪಡೆದುಕೊಂಡರು. ಈಗಾಗಲೇ ಭದ್ರತಾ ಪಡೆಯಲ್ಲದೆ, ಸ್ಥಳೀಯ ಪೊಲೀಸರನ್ನು ಹೊರ ಭಾಗದಲ್ಲಿ ನಿಯೋಜಿಸಲಾಗಿದ್ದು, ಇದರ ಜೊತೆಗೆ ಹಲವು ತುಕಡಿಗಳ ಕೆಎಸ್‍ಆರ್ ಪಿ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.  ಕೆಆರ್‍ಎಸ್ ಜಲಾಶಯದ ಕೆಳ ಭಾಗದ ಕಾವೇರಿ ನದಿ ತೀರದಿಂದ ಪಟ್ಟಣದ ಸ್ನಾನದ ಘಟ್ಟ ಸೇರಿದಂತೆ ಕಾವೇರಿ ನದಿ ತೀರ ಪ್ರದೇಶಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅವಲೋಕಿಸಿದರು. ಕೆಆರ್‍ಎಸ್ ಜಲಾಶಯದ ಮುಂದಿನ ಗೇಟ್ ಹಾಗೂ ಸೇತುವೆ ಬಳಿಯ ಕೆಳ ಭಾಗದ ಗೇಟ್ ಗಳನ್ನು ಸುರಕ್ಷಿತವಾಗಿ ಬಿಗಿ ಭದ್ರತೆಗೊಳಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಟ್ಟಾರೆ ಕೆಆರ್‍ಎಸ್ ಗೆ ಬಿಗಿಬಂದೋಬಸ್ತ್ ಮಾಡಲಾಗಿದ್ದು, ಸುತ್ತಮುತ್ತಲಿನ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ

6b7c2a4b-9f9c-4634-9882-24cb98863fc2

ತಮಿಳ್ನಾಡಿಗೆ ಬಸ್ ಸಂಚಾರ ಸ್ಥಗಿತ

ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ಹಳೇ ಮೈಸೂರು ಣಾಗದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಮೈಸೂರು ಮಾರ್ಗದಲ್ಲಿ ಬಸ್ ಸಂಚಾರವನ್ನ ತಡೆದಿರುವ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮನಗರ, ಚನ್ನಪಟ್ಟಣದವರೆಗೆ ಮಾತ್ರ ಬಸ್ ಸಂಚರಿಸುತ್ತಿದ್ದು, ಅಲ್ಲಿಂದ ಮುಂದೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಈ ಮಧ್ಯೆ, 50 ಕ್ಕೂ ಹೆಚ್ಚುಪ್ರತಿಭಟನಾಕಾರರು ಮೈಸೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಮೇಗಳಾಪುರ ಸಮೀಪದ ಪಂಪ್ ಹೌಸ್ ಘಟಕಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಮಂಡ್ಯಕ್ಕೆ ತೆರಳುವ ಕೆಎಸ್‌ಆರ್ಟಿಸಿ ಬಸ್ ಸಂಚಾತ ಸ್ಥಗಿತಗೊಳಿಸಲಾಗಿದೆ. ಮಂಡ್ಯ, ಶ್ರೀರಂಗಪಟ್ಟಣ, ಕೆಆರ್ಎಸ್, ಮದ್ದೂರು, ಮಳವಳ್ಳಿ ಸೇರಿ ಹಲವೆಡೆ ರೈತರು, ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ.  ವಿವಿಧೆಡೆ ರಸ್ತೆ ತಡೆದು, ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ, ಹಾಸನದ ಗೊರೂರು ಜಲಾಶಯಕ್ಕೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು. ಇಬ್ಬರು ಡಿವೈಎಸ್ಪಿ. ಇಬ್ಬರು ಸರ್ಕಲ್ ಇನ್ಸ್`ಪೆಕ್ಟರ್‍, 8 ಪಿಎಸ್‌ಐ ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.

35ebeec3-1b77-42e9-b418-f253b93b8443

ಮದ್ದೂರು : ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಣೆ

ಮದ್ದೂರು, ಸೆ.6-ಕಾವೇರಿ ನದಿಯಿಂದ 50 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲು ಸುಪ್ರೀಂಕೋರ್ಟ್ ಹೊರಡಿಸಿರುವ ಆದೇಶ ವಿರೋಧಿಸಿ ಇಂದು ರೈತರು ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಿಸಿದರು. ಇನ್ನೊಂದೆಡೆ ಕನ್ನಡ ಪರ ಸಂಘಟನೆಗಳು ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಮತ್ತು ಕನ್ನಡಪರ ಸಂಘಟನೆಗಳ ಪ್ರತಿಭಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ, ಮದ್ದೂರು-ಕೊಳ್ಳೇಗಾಲ ಹಾಗೂ ತುಮಕೂರು ಮಾರ್ಗದ ನಡುವೆ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಮುಂಜಾನೆಯಿಂದಲೇ ತಾಲೂಕಿನ ಗೆಜ್ಜಲಗೆರೆ, ಉಪ್ಪಿನಕೆರೆ, ಗೊರವನಹಳ್ಳಿ ಸೇರಿದಂತೆ ಹಲವೆಡೆ ರೈತರು ಮರದ ದಿಮ್ಮಿಗಳನ್ನು ರಸ್ತೆಗೆ ಅಡ್ಡವಿಟ್ಟು ಪ್ರತಿಭಟನೆ ನಡೆಸಿ ಟಯರ್‍ಗಳಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಸುಪ್ರೀಂಕೋರ್ಟ್ ಹಾಗೂ ಸಂಸದರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಾವೇರಿ ನೀರು ಉಳಿಸಿ, ರೈತರ ರಕ್ಷಣೆ ಮಾಡಿ ಎಂದು ಘೋಷಣೆ ಕೂಗಿದರು.

ಬೆಂಗಳೂರು-ಮೈಸೂರು ಹೆದ್ದಾರಿಯ ಕೊಪ್ಪ ಹೊಸ ಸರ್ಕಲ್ ಬಳಿ ಪ್ರತಿಭಟನೆಗಿಳಿದ ರೈತರು ಕಪ್ಪು ಬಟ್ಟೆ ಹೊದ್ದು ರಸ್ತೆಯಲ್ಲಿ ಮಲಗುವ ಮೂಲಕ ಕರಾಳ ದಿನ ಆಚರಿಸಿದರು. ಮಂಡ್ಯ ಜಿಲ್ಲೆ ಬಂದ್‍ಗೆ ಬೆಂಬಲಿಸಿ ನಡೆಸಿದ ಮದ್ದೂರು ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ವರ್ತಕರು ಸ್ವಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಕಾವೇರಿ ಹೋರಾಟಕ್ಕೆ ಸಾಥ್ ನೀಡಿದರು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು ನೌಕರರಿಲ್ಲದೆ ಬಣಗುಡುತ್ತಿದ್ದವು.

58c105ec-f924-4bef-af33-707e0dc1463a

ba845790-9fdb-499e-929c-6b0ebf13d7de

Facebook Comments

Sri Raghav

Admin