ಕಾವೇರಿಗಾಗಿ ರೈತರ ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

Kaveri

ಮಂಡ್ಯ, ಅ.5- ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಸೋಮವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತರು ಇಂದು ಬೆಳಗ್ಗೆ ಕೆಆರ್‍ಎಸ್‍ನಿಂದ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಇಂದು ಮುಂಜಾನೆ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಅವರ ನೇತೃತ್ವದಲ್ಲಿ ನೂರಾರು ರೈತರು ಕೆಆರ್‍ಎಸ್ ಬಳಿಯ ಧರಣಿ ಸ್ಥಳದಿಂದ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆಯಲ್ಲಿ ತೆರಳಿ ತಹಸೀಲ್ದಾರ್ ಕೃಷ್ಣ ಅವರಿಗೆ ಮನವಿ ಸಲ್ಲಿಸಿ ತಕ್ಷಣವೇ ನೀರು ನಿಲ್ಲಿಸುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಪಾದಯಾತ್ರೆ ಹೊರಡುವ ಮುನ್ನ ಮಾತನಾಡಿದ ನಂಜುಂಡೇಗೌಡ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಒಂದು ಹನಿ ನೀರನ್ನು ಬಿಡಕೂಡದು. ಕರ್ನಾಟಕದ ಜನ ಕುಡಿಯಲು ನೀರಿಲ್ಲದೆ ಕಂಗಾಲಾಗಿದ್ದಾರೆ. ಸಾವಿರಾರು ಎಕರೆಯಲ್ಲಿ ಇದ್ದ ಬೆಳೆ ಒಣಗಿ ಹಾಳಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮಗೆ ಇಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುವುದು ಖಂಡನೀಯ ಎಂದು ಹೇಳಿದರು.

ರಾಜ್ಯ ಸರ್ಕಾರ ರೈತರಿಗೆ ಸುಳ್ಳು ಹೇಳಿ ತಮಿಳುನಾಡಿಗೆ ನೀರು ಬಿಟ್ಟಿದೆ. ರೈತರ ಹೆಸರಿನಲ್ಲಿ ನೀರು ಹರಿಸಲಾಗುತ್ತಿದೆ. ನಿನ್ನೆ ಸರ್ವೋಚ್ಚ ನ್ಯಾಯಾಲಯದಲ್ಲಿ 24 ಸಾವಿರ ಕ್ಯೂಸೆಕ್ಸ್ ನೀರು ಬಿಡುವುದಾಗಿ ಒಪ್ಪಿಕೊಂಡು ಬಂದು, ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸುಳ್ಳು ಹೇಳುತ್ತಿದೆ. ಸರ್ಕಾರ ಇಂತಹ ನಾಟಕ ಮಾಡುವುದನ್ನು ಬಿಟ್ಟು ಮೊದಲು ನೀರು ಬಂದ್ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರವಾಗಲಿದೆ. ಈ ವೇಳೆ ಸಂಭವಿಸುವ ಯಾವುದೇ ಘಟನೆಗಳಿಗೆ ಸರ್ಕಾರವೇ ಹೊಣೆ ಎಂದು ಅವರು ಎಚ್ಚರಿಕೆ ನೀಡಿದರು.
ರಾಜಕೀಯ ಪಕ್ಷಗಳು ತಮ್ಮ ರಾಜಕಾರಣಕ್ಕಾಗಿ ಕಾವೇರಿ ವಿವಾದವನ್ನು ಬಳಸಿಕೊಳ್ಳುತ್ತಿವೆ. ಯಾರಿಗೂ ಜನ ಹಿತ, ರೈತರ ಹಿತ ಕಾಪಾಡುವ ಇಚ್ಛಾಶಕ್ತಿ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಪಾದಯಾತ್ರೆ ಹೊರಟ ರೈತರನ್ನು ಮಾರ್ಗದುದ್ದಕ್ಕೂ ಅನೇಕ ಗ್ರಾಮಗಳ ಜನರು ಸ್ವಾಗತಿಸಿ ಬೀಳ್ಕೊಟ್ಟರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin