ಕಾವೇರಿಗಾಗಿ ರೈಲ್ವೆ ಬಂದ್ : ನಿಗದಿಯಂತೆ ರೈಲುಗಳ ಸಂಚಾರ, ಮಂಡ್ಯ, ಶಿವಮೊಗ್ಗದಲ್ಲಿ ಹಲವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಬೆಂಗಳೂರು, ಸೆ.15 : ಕನ್ನಡ ಒಕ್ಕೂಟ ಕರೆ ನೀಡಿರುವ ರೈಲ್ವೆ ಬಂದ್’ನಿಂದಾಗಿ ಯಾವುದೇ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿಲ್ಲ. ನಿಗದಿತ ವೇಳಾಪಟ್ಟಿಯಂತೆ ಎಲ್ಲಾ ರೈಲುಗಳು ಸಂಚಾರ ನಡೆಸುತ್ತಿವೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ. ಬೆಂಗಳೂರು ನಗರದ ರೈಲು ನಿಲ್ದಾಣಗಳು, ಮಂಡ್ಯ ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ಖಂಡಿಸಿ ರೈಲ್ವೆ ಬಂದ್ ಗೆ ಕರೆ ನೀಡಲಾಗಿದೆ. ಮುಂಜಾನೆಯಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲು ನಿಲ್ದಾಣದಲ್ಲಿ ನಿಗದಿತ ವೇಳಾಪಟ್ಟಿಯಂತೆ ಸಂಚಾರ ನಡೆಸುತ್ತಿವೆ.

ಮಂಡ್ಯದಲ್ಲಿ ರೈಲು ತಡೆಯಲೆತ್ನಿಸಿದ 6 ಮಂದಿ ವಶಕ್ಕೆ
ಕಾವೇರಿ ನದಿ ನೀರಿಗಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಗುರುವಾರ ಕನ್ನಡಪರ ಕರೆ ನೀಡಿರುವ ರೈಲ್ ರೋಕೋ ಚಳವಳಿಯಲ್ಲಿ ಭಾಗಿಯಾಗಿದ್ದ 6 ಮಂದಿ ಕನ್ನಡಪರ ಹೋರಾಟಗಾರರನ್ನು ಮಂಡ್ಯದಲ್ಲಿ ವಶಕ್ಕೆ ಪಡೆಯಲಾಗಿದೆ. ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರೈಲ್ ರೋಕೋ ಚಳವಳಿ ನಿಮಿತ್ತ ಇಂದು ಮಂಡ್ಯ ರೈಲು ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ 6 ಮಂದಿ ಕನ್ನಡಪರ ಹೋರಾಟಗಾರರನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸಿ ನಿಲ್ದಾಣ ಪ್ರವೇಶಕ್ಕೆ ಕಾರ್ಯಕರ್ತರು ಯತ್ನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ನಿಲ್ದಾಣದ ಆವರಣ ಪ್ರವೇಶಿಸಿದ ಪ್ರತಿಭಟನಾಕಾರರನ್ನು ಅಲ್ಲಿಯೇ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಕೋಲಾರದಲ್ಲಿಯೂ ರೈಲ್ ರೋಕೊ ಚಳವಳಿಗೆ ಚಾಲನೆ ನೀಡಲಾಗಿದ್ದು, ಕೋಲಾರ ರೈಲ್ವೇ ನಿಲ್ದಾಣದ ಬಳಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿರುವ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಕೋಲಾರ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಸಿಎಂ ಜಯಲಲಿತಾ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದಲ್ಲದೆ ಮೈಸೂರು, ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ನಗರಗಳ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಶಿವಮೊಗ್ಗದಲ್ಲೂ  ಹಲವರ ಬಂಧನ 

ಕಾವೇರಿ ನದಿ ನೀರಿನ ವಿಚಾರವಾಗಿ ಶಿವಮೊಗ್ಗದಲ್ಲಿ ಹೋರಾಟ ಮುಂದುವರೆದಿದೆ. ರೈಲು ತಡೆಗೆ ಮುಂದಾದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕಾವೇರಿ ವಿಚಾರವಾಗಿ ಇಂದು ರಾಜ್ಯದಲ್ಲಿ ರೈಲು ಸಂಚಾರ ಬಂದ್ ಮಾಡಿ, ಪ್ರತಿಭಟನೆ ನಡೆಸಲು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಂತರ ರೈಲು ತಡೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದಿದ್ದಾರೆ.  ರೈಲು ನಿಲ್ದಾಣದೊಳಗೆ ಘೋಷಣೆ ಕೂಗುತ್ತಾ ಆಗಮಿಸಿದ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು, ರೈಲು ತಡೆಯಲು ಮುಂದಾದರು. ಇದಕ್ಕೆ ಅವಕಾಶ ಕೊಡದ ಪೊಲೀಸರು, ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin