‘ಕಾವೇರಿ’ ಅಧಿವೇಶನ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

Session-3

ಬೆಂಗಳೂರು, ಸೆ.23– ಕಾವೇರಿ ವಿಚಾರವಾಗಿ ಇಂದು ಕರೆಯಲಾಗಿದ್ದ ತುರ್ತು ವಿಶೇಷ ಅಧಿವೇಶನದಲ್ಲಿ ಕಾವೇರಿ ನದಿ ಪಾತ್ರ ಜಲಾಶಯಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂಬ ನಿರ್ಣಯವನ್ನು ಉಭಯ ಸದನಗಳಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಗಿದೆ. ನೆಲ, ಜಲ, ಭಾಷೆ ಹಾಗೂ ರಾಜ್ಯದ ಜನರ ಹಿತ ಕಾಪಾಡುವಲ್ಲಿ ಪಕ್ಷಭೇದ ಮರೆತ ಎಲ್ಲ ಜನಪ್ರತಿನಿಧಿಗಳು ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿ ಈ ಮೂಲಕ ಅಧಿವೇಶನದಲ್ಲಿ ಚರಿತ್ರಾರ್ಹ ದಾಖಲೆ ಬರೆದರು.

ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಕಲಾಪ 2.15 ಗಂಟೆ ತಡವಾಗಿ ಆರಂಭವಾಯಿತು. ಅಳೆದು-ತೂಗಿ ನಿರ್ಣಯದ ಪ್ರತಿ ತಯಾರು ಮಾಡುವ ಸಲುವಾಗಿಯೇ ಅಷ್ಟು ಕಾಲಾವಕಾಶ ಹಿಡಿದು ಕಲಾಪ ಆರಂಭಕ್ಕೆ ವಿಳಂಬವಾಯಿತು ಎಂದು ಹೇಳಲಾಗಿದೆ. ನಂತರ ಆರಂಭವಾದ ವಿಧಾನಸಭೆ ಕಲಾಪದಲ್ಲಿ ಕನ್ನಡ ನಿರ್ಣಯ ಪ್ರತಿಯನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತ ಮಂಡಿಸಿದರು. ಇಂಗ್ಲಿಷ್ ನಿರ್ಣಯವನ್ನು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಂಡಿಸಿದರು.

ಕಾವೇರಿ ನೀರು ಬಿಡುವುದಿಲ್ಲ ಎಂಬ ನೇರವಾಕ್ಯವನ್ನು ಸೇರಿಸಿದರೆ ಅದು ನ್ಯಾಯಾಂಗದೊಂದಿಗಿನ ಸಂಘರ್ಷಕ್ಕೆ ನಾಂದಿಯಾಗಲಿದೆ ಎಂಬ ಎಚ್ಚರಿಕೆಯಿಂದ ಅಳೆದು-ತೂಗಿ ರಾಜ್ಯದ ಹಿತಾಸಕ್ತಿಯನ್ನಷ್ಟೇ ನಿರ್ಣಯದಲ್ಲಿ ಸೇರಿಸಲಾಗಿದೆ. ಈ ನಡುವೆ ನಿರ್ಣಯದ ಪ್ರತಿ ಸಿದ್ಧಗೊಳ್ಳುವ ಸಮಯದಲ್ಲಿ ಮಳೆ ಮೋಡ ಮುಸುಕಿದ್ದು, ಒಂದು ವೇಳೆ ಮಳೆ ಬಂದು, ಜಲಾಶಯ ತುಂಬಿದರೆ ನೀರು ಬಿಡುವುದಿಲ್ಲ ಎಂಬ ಶಂಕೆಯೂ ವ್ಯಕ್ತವಾಯಿತು. ಜಲಾಶಯಗಳಲ್ಲಿ ನೀರು ತುಂಬಿದರೆ ತಮಿಳುನಾಡಿಗೆ ನೀರು ಬಿಡಲೇಬೇಕಾಗುತ್ತದೆ. ಆಗ ಸದನದಲ್ಲಿ ನೀರು ಬಿಡುವುದಿಲ್ಲ ಎಂದು ತೆಗೆದುಕೊಂಡ ನಿರ್ಣಯ ಉಲ್ಲಂಘಿಸಿದಂತಾಗಿ ಸದನದ ಹಕ್ಕು ಚ್ಯುತಿಯಾಗುವ ಸಾಧ್ಯತೆಯೂ ಇರುವುದರಿಂದ ಎಚ್ಚರಿಕೆಯಿಂದ ನಿರ್ಣಯದ ಪ್ರತಿ ಸಿದ್ಧಗೊಳಿಸಲಾಗಿದೆ.

ನಿರ್ಣಯ:

2016-17ನೆ ಜಲವರ್ಷದಲ್ಲಿ ಸಂಕಷ್ಟದ ತೀವ್ರ ಗಂಭೀರ ಪರಿಸ್ಥಿತಿ ಇರುವುದನ್ನು ಈ ಸದನವು ತೀವ್ರ ಅತಂಕದಿಂದ ಗಮನಿಸಿದೆ. ಆದರೆ, ನೀರಿನ ಕೊರತೆಯ ಪ್ರಮಾಣವೇನು ಎಂಬುದು ಈ ಋತುವಿನ ಅಂತ್ಯ ಅಂದರೆ 31-01-2017ರ ನಂತರವೇ ಸ್ಪಷ್ಟವಾಗಿ ತಿಳಿಯಲಿದೆ ಎಂಬುದನ್ನು ಈ ಸದನ ಗಮನಿಸಿದೆ. ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಾದ ಕೃಷ್ಣರಾಜಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ-ಇವುಗಳಲ್ಲಿ ನೀರಿನ ಮಟ್ಟ ಅತ್ಯಂತ ತಳಮಟ್ಟದ ಹಂತವನ್ನು ತಲುಪಿರುವುದನ್ನು ಮತ್ತು ಕೇವಲ 27.6 ಟಿಎಂಸಿ ಮಾತ್ರ ನೀರು ಇರುವುದನ್ನು ಈ ಸದನವು ಆತಂಕದಿಂದ ಪರಿಗಣಿಸಿದೆ.

ಈ ಗಂಭೀರ ಮತ್ತು ಆತಂಕಕಾರಿ ವಾಸ್ತವ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪಟ್ಟಣಗಳು ಹಾಗೂ ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳಿಗಾಗಿ ಮಾತ್ರ ಈಗಿರುವ ನಾಲ್ಕು ಜಲಾಶಯಗಳ ಒಟ್ಟಾರೆ ಜಲಸಂಗ್ರಣೆಯಿಂದ ನೀರನ್ನು ಬಳಸಬೇಕೆಂದು ಸರ್ಕಾರಕ್ಕೆ ಈ ಸದನವು ಈ ನಿರ್ಣಯದ ಮೂಲಕ ನಿರ್ದೇಶಿಸುತ್ತದೆ.

ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಜನರ ಹಿತಾಸಕ್ತಿಯನ್ನು ಪರಿಗಣಿಸಿ ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಲ್ಲಿ ಹಾಲಿ ಇರುವ ಒಟ್ಟಾರೆ ಸಂಗ್ರಹಣೆಯಾಗಿರುವ ನೀರನ್ನು ಬೆಂಗಳೂರು ಮಹಾನಗರವೂ ಸೇರಿದಂತೆ ಕಾವೇರಿ ಕೊಳ್ಳದ ಜನರಿಗೆ ಮೂಲಭೂತ ಅವಶ್ಯಕವಾದ ಕುಡಿಯುವ ನೀರನ್ನು ಒದಗಿಸುವ ಉದ್ದೇಶಕ್ಕಾಗಿ ಹಾಗೆಯೇ ಸಂಪೂರ್ಣವಾಗಿ ಉಳಿಸಿಕೊಳ್ಳಲು ಮತ್ತು ಇದಕ್ಕೆ ಹೊರತಾದ ಬೇರೆ ಯಾವುದೇ ಕಾರಣಕ್ಕೂ ಒದಗಿಸಲು ಸಾಧ್ಯವಿಲ್ಲವೆಂಬ ನಿರ್ಣಯವನ್ನು ಈ ಸದನವು ಸರ್ವಾನುಮತದಿಂದ ಅಂಗೀಕರಿಸುತ್ತಿದೆ ಎಂಬ ನಿರ್ಣಯನ್ನು ವಿಶೇಷ ಅಧಿವೇಶನದಲ್ಲಿ ಮಂಡಿಸಲಾಯಿತು. ಸಂತಾಪ ಸೂಚಕ ನಿರ್ಣಯದ ನಂತರ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಕಾವೇರಿ ವಿಷಯದ ಕುರಿತ ನಿರ್ಣಯ ಮಂಡನೆಗೆ ಅವಕಾಶ ನೀಡಿದರು.

ಇಂಗ್ಲಿಷ್‍ನಲ್ಲಿ ನಿರ್ಣಯವನ್ನು ಮಂಡಿಸಿದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಕಾವೇರಿ ಕೊಳ್ಳದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಜನರ, ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸುವ ಅಗತ್ಯವಿದೆ. ಇದು ಇಡೀ ದೇಶದ ಗಮನ ಸೆಳೆದಿರುವುದರಿಂದ ಇಂಗ್ಲಿಷ್‍ನಲ್ಲಿ ನಿರ್ಣಯವನ್ನು ಮಂಡಿಸುತ್ತಿದ್ದೇನೆ ಎಂದು ಹೇಳಿದರು.  ಜೆಡಿಎಸ್‍ನ ಉಪನಾಯಕ ವೈ.ಎಸ್.ವಿ.ದತ್ತ ಮಾತನಾಡಿ, ಕನ್ನಡದಲ್ಲಿರುವ ನಿರ್ಣಯದ ಪ್ರತಿಯನ್ನು ಓದಿ ಮಂಡಿಸಿದರು. ಈ ಇಬ್ಬರು ನಿರ್ಣಯ ಮಂಡಿಸಿದಾಗ ಇಡೀ ಸದನ ಒಂದಾಗಿ ಮೇಜು ಕುಟ್ಟಿ ಸ್ವಾಗತಿಸಿತು.

 •  ಐತಿಹಾಸಿಕ ಒಗ್ಗಟ್ಟು ಪ್ರದರ್ಶಿಸಿದ ರಾಜ್ಯದ ರಾಜಕೀಯ ಪಕ್ಷಗಳು
 • ವಿಧಾನ ಪರಿಷತ್ ನಲ್ಲಿ ಕಾವೇರಿ ಕೊಳ್ಳದ ಜಾಲಾಶಯಗಳ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಬೇಕು. ಎಂಬ ನಿರ್ಣಯ ಅಂಗೀಕಾರ

Session--7

 • ಪರಿಷತ್‍ನಲ್ಲೂ ನಿರ್ಣಯಕ್ಕೆ ಅಸ್ತು

ಬೆಂಗಳೂರು, ಸೆ.23- ಕಾವೇರಿ ಜಲಾನಯನ ಪ್ರದೇಶದಲ್ಲಿರುವ ನಾಲ್ಕು ಜಲಾಶಯಗಳಲ್ಲಿನ ನೀರನ್ನು ಕುಡಿಯುವುದಕ್ಕೆ ಮಾತ್ರ ಬಳಸಿಕೊಳ್ಳಬೇಕೆಂಬ ಸರ್ಕಾರದ ನಿರ್ಣಯಕ್ಕೆ ಪ್ರತಿಪಕ್ಷಗಳು ವಿಧಾನಪರಿಷತ್‍ನಲ್ಲಿ ಬೆಂಬಲ ಸೂಚಿಸಿದವು.  ಕಲಾಪ ಆರಂಭವಾಗುತ್ತಿದ್ದಂತೆ ಸಂತಾಪ ನಿರ್ಣಯ ಸೂಚನೆಯ ನಂತರ ಸಭಾಪತಿ ಡಿ.ಎಚ್.ಶಂಕರ್‍ಮೂರ್ತಿ ಕಾವೇರಿ ನೀರಿನ ಬಿಕ್ಕಟ್ಟಿನ ಚರ್ಚೆಗೆ ಅವಕಾಶ ನೀಡಿದರು. ಕಾಂಗ್ರೆಸ್ ಸದಸ್ಯ  ಎ.ರವಿ ಅವರು  ನಿರ್ಣಯವನ್ನು ಮಂಡಿಸಿ ಕಾವೇರಿ ಜಲಾನಯನದ ಕೆಆರ್‍ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸಿಕೊಳ್ಳುವ ಅನಿವಾರ್ಯತೆ ಇದೆ. ಬೆಂಗಳೂರು ಸೇರಿದಂತೆ ನಗರ, ಪಟ್ಟಣ, ಹಳ್ಳಿಗಳಿಗೂ ಈ ಜಲಾಶಯದ ನೀರೇ ಪೂರೈಕೆಯಾಗಬೇಕು. ಈ ಜಲಾಶಯಗಳಲ್ಲಿ ನೀರು ಖಾಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಈಗಿರುವ ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಿಲ್ಲ. ಸರ್ಕಾರದ ನಿರ್ಣಯಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ನಿರ್ಣಯವನ್ನು ಕಾಂಗ್ರೆಸ್‍ನ ಹಿರಿಯ ಸದಸ್ಯ ಉಗ್ರಪ್ಪ ಅನುಮೋದಿಸಿದ ಬಳಿಕ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕಾವೇರಿ ನೀರು ಹಂಚಿಕೆ ಸಂಬಂಧ ಸರ್ಕಾರ ದಿಟ್ಟ ಕ್ರಮ ಕೈಗೊಂಡರೂ ನಿಮ್ಮ ಬೆಂಬಲಕ್ಕೆ ನಮ್ಮ ಪಕ್ಷ ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ಘೋಷಿಸಿದರು. ರಾಜ್ಯದ ಇತಿಹಾಸದಲ್ಲೇ ಸರ್ಕಾರದ ನಿರ್ಣಯಕ್ಕೆ ಸರ್ವಪಕ್ಷ ಬೆಂಬಲ ನೀಡಿರುವುದು ಇದೇ ಮೊದಲು. ನಾಲ್ಕು ಜಲಾಶಯಗಳಲ್ಲಿ 27.6 ಟಿಎಂಸಿ ನೀರು ಸಂಗ್ರಹವಾಗಿದೆ. ಸುಪ್ರೀಂಕೋರ್ಟ್‍ಗೆ ವಾಸ್ತವ ಪರಿಸ್ಥಿತಿ ತಿಳಿಯದೆ ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿದೆ. ಕರ್ನಾಟಕದ ಜನತೆ ಉದಾರಿಗಳು. ನಾವು ತಮಿಳುನಾಡು ಕೇಳಿದಾಗಲೆಲ್ಲಾ ನೀರು ಬಿಟ್ಟಿದ್ದೇವೆ. ನಮಗೇ ಕುಡಿಯಲು ನೀರು ಇಲ್ಲದಾಗ ಎಲ್ಲಿಂದ ಹರಿಸುವುದು ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟ್ ತೀರ್ಪಿನ ನಂತರ ರೊಚ್ಚಿಗೆದ್ದ ರೈತರು, ಜನರು ಪ್ರತಿಭಟನೆ ನಡೆಸಿದ್ದರಿಂದ 40 ಸಾವಿರ ಕೋಟಿ ನಷ್ಟ ವಾಯಿತು. ನಮಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡು ಸಾಂಬಾ ಬೆಳೆಗೆ ನೀರು ಕೇಳುತ್ತಿದೆ. ಯಾವುದೇ ಕಾರಣಕ್ಕೂ ಒಂದು ಹನಿ ನೀರು ಹರಿಸಬಾರದು ಎಂದು ಈಶ್ವರಪ್ಪ ಆಗ್ರಹಿಸಿದರು. ಹಿಂದೆ ನಡೆದ ಎರಡು ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸಬಾರದು. ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದೆವು. ಆದರೆ, ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ ಮೊನ್ನೆ ನಡೆದ ಸರ್ವಪಕ್ಷಸಭೆಯನ್ನು ಬಹಿಷ್ಕರಿಸಿದೆವು. ಏನೇ ಆಗಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟರೆ ನಾವು ಬೆಂಬಲಿಸುತ್ತೇವೆ ಎಂದರು.

ಜೆಡಿಎಸ್‍ನ ಬಸವರಾಜ ಹೊರಟ್ಟಿ ಮಾತನಾಡಿ, ಇಂದು ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಹಿಂದೆ ಮಹದಾಯಿ, ಕೃಷ್ಣಾ ನದಿ ನೀರಿನ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ, ಕಾವೇರಿ ನೀರಿನ ಹೋರಾಟ ದಕ್ಷಿಣ ಕರ್ನಾಟಕಕ್ಕೆ ಎಂಬಂತಾಗಿತ್ತು. ಆದರೆ, ಇದೀಗ ಅಖಂಡ ಕರ್ನಾಟಕ ಒಂದಾಗಿದೆ ಎಂದು ತಿಳಿಸಿದರು. ಬಳಿಕ ಡಿ.ಎಚ್.ಶಂಕರಮೂರ್ತಿ ಅವರು ಕಾವೇರಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ನೀರಿನ ಬಳಕೆಗೆ ಮಾತ್ರ ಬಳಸಿಕೊಳ್ಳಬೇಕೆಂದು ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸಿ ಸದನವನ್ನು ನಿರ್ದಿಷ್ಟಾವಧಿಗೆ ಮುಂದೂಡಿದರು.

 • ಕಾವೇರಿ ಕಲಾಪ ಆರಂಭ, ಅಗಲಿದ ಗಣ್ಯರು ಹಾಗೂ ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ.

Session--5

 • ಉಭಯ ಸದನಗಳಲ್ಲಿ ಸಂಪುಟ ಕೈಗೊಳ್ಳಬೇಕಾದ ನಿರ್ಣಯದ ಬಗ್ಗೆ ಸದನ ಸಲಹಾ ಸಮಿತಿಯಲ್ಲಿ ಚರ್ಚೆ ನಡೆಸಲಾಯಿತು. ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ ಅನಗತ್ಯ ಚರ್ಚೆಗೆ ಅವಕಾಶ ಇಲ್ಲ, ಕೇವಲ 2ಗಂಟೆ ಕಲಾಪ ನಡೆಸುವಂತೆ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಅವೆಲ್ಲಕ್ಕಿಂತ ಮುಖ್ಯವಾಗಿ ಕಲಾಪದಲ್ಲಿ ಒಂದೇ ಸಾಲಿನ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Session--4

Session--6

 • ನೀರಿನ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು  ನಿಯಮ 159ರ ಪ್ರಕಾರ ಕಾನೂನು ಸಚಿವ ಟಿಬಿ ಜಯಚಂದ್ರ ಅವರಿಂದ ಪ್ರಸ್ತಾವನೆ ಮಂಡನೆ.
 • ಕಲಾಪದಲ್ಲಿ ಕುಮಾರಸ್ವಾಮಿ, ಆರ್.ಅಶೋಕ್, ಕೆಎಸ್ ಪುಟ್ಟಣ್ಣಯ್ಯ, ವೈಎಸ್ ವಿ ದತ್ತಾ, ಶೆಟ್ಟರ್, ಬಿಆರ್ ಪಾಟೀಲ್, ಅಶೋಕ್ ಖೇಣಿ, ರಾಜೀವ್ ಗೆ ಮಾತ್ರ ಮಾತನಾಡಲು ಅವಕಾಶ.

Session-1

 • ವಿಶೇಷ ಕಾವೇರಿ ಅಧಿವೇಶನಕ್ಕೆ ಅಂಬರೀಶ್ ಗೈರು

ಬೆಂಗಳೂರು, ಸೆ.23- ಕಾವೇರಿ ಸಮಸ್ಯೆಯ ಹಿನ್ನೆಲೆಯಲ್ಲಿ ಇಂದು ನಡೆದ ವಿಶೇಷ ಅಧಿವೇಶನದಲ್ಲಿ ಅಂಬರೀಶ್ ಸೇರಿದಂತೆ ಕೆಲ ಮಾಜಿ ಸಚಿವರು ಗೈರು ಹಾಜರಾಗಿದ್ದುದು ಎದ್ದು ಕಾಣುತ್ತಿತ್ತು. ಸುಪ್ರೀಂಕೋರ್ಟ್ ತೀರ್ಪಿನಿಂದ ಕಾವೇರಿ ಕೊಳ್ಳದಲ್ಲಿ ಉದ್ಭವಿಸಿರುವ ಸಂಕಷ್ಟ ಪರಿಸ್ಥಿತಿ ನಿವಾರಣೆಗೆ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂಬ ನಿರ್ಣಯ ಕೈಗೊಂಡಿರುವ ರಾಜ್ಯಸರ್ಕಾರ ಇದನ್ನು ಅಧಿವೇಶನ ನಡೆಸುವ ಮೂಲಕ ಕೇಂದ್ರಕ್ಕೆ ಮಾಹಿತಿ ರವಾನಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಇಂದು ಮಹತ್ವದ ಅಧಿವೇಶನ ನಡೆಯಿತಾದರೂ ಇದರಲ್ಲಿ ಈ ಕ್ಷೇತ್ರದ ಪ್ರತಿನಿಧಿಯಾಗಿದ್ದ ಮಾಜಿ ಸಚಿವ ಅಂಬರೀಶ್ ಗೈರು ಹಾಜರಾಗಿದ್ದರು. ಇದರೊಂದಿಗೆ ಮಾಜಿ ಸಚಿವರಾದ ಶ್ಯಾಮನೂರು ಶಿವಶಂಕರಪ್ಪ, ಖಮರುಲ್ಲಾ ಇಸ್ಲಾಂ ಗೈರು ಹಾಜರಿಯಾಗಿದ್ದಾರೆ.

 • ನಾವೆಲ್ಲ ಒಗ್ಗಟ್ಟಾಗಿದ್ದೇವೆ: ಅಶೋಕ್ ಸಹಮತ

Session-2ಬೆಂಗಳೂರು,ಸೆ.23-ತಮಿಳುನಾಡಿಗೆ ನೀರು ಹರಿಸದಿರುವ ವಿಚಾರದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಮೊದಲು ನಡೆದ ಎರಡು ಸರ್ವಪಕ್ಷಗಳ ಸಭೆಯಲ್ಲೂ ನಾವು ಇದನ್ನೇ ಪ್ರತಿಪಾದಿಸಿದ್ದೆವು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇಂದಿಲ್ಲಿ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಈ ವಿಚಾರವನ್ನು ಸರ್ಕಾರ ಪರಿಗಣಿಸದೆ 10 ಟಿಎಂಸಿ ನೀರನ್ನು ಬಿಡುವುದಾಗಿ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿ ಗೊಂದಲ ಉಂಟು ಮಾಡಿತ್ತು. ಹಾಗಾಗಿ ಮೂರನೇ ಸರ್ವಪಕ್ಷ ಸಭೆಯನ್ನು ನಾವು ಬಹಿಷ್ಕರಿಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.
20-30 ವರ್ಷಗಳಿಂದ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಇಂದು ನಾಡಿನ ನೆಲ-ಜಲ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.  ಸಿ.ಟಿ.ರವಿ ಮಾತನಾಡಿ, ಕಾವೇರಿ ವಿಚಾರದಲ್ಲಿ ನಡೆಯುತ್ತಿರುವ ಈ ಅಧಿವೇಶನ ಐತಿಹಾಸಿಕ ಅಧಿವೇಶನವಾಗಿದೆ. ಐದನೇ ಬಾರಿ ಇಂತಹ ಅಧಿವೇಶನ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಹೇಳಿದರು.  1991ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಕಾವೇರಿ ವಿಚಾರದಲ್ಲಿ ಉಂಟಾಗಿದ್ದ ಸಮಸ್ಯೆ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ನಡೆಸಲಾಗಿತ್ತು. ನಂತರ 1995ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, 2002ರಲ್ಲಿ ಎಸ್.ಎಂ.ಕೃಷ್ಣ ಅವರ ಆಡಳಿತದ ಸಮಯದಲ್ಲಿ ಹಾಗೂ 2007ರಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಅಧಿವೇಶನ ನಡೆದಿತ್ತು ಎಂದು ಸ್ಮರಿಸಿದರು.

 • ರೈತರಿಗೆ 50 ಸಾವಿರ ರೂ. ಪರಿಹಾರ : ಅಧಿವೇಶನದಲ್ಲಿ ಮಂಡಿಸಲು ಜೆಡಿಎಸ್ ನಿರ್ಣಯ

Kumaraswamy

ಬೆಂಗಳೂರು, ಸೆ.23- ಕಾವೇರಿ ಜಲಾನಯನ ಪ್ರದೇಶಗಳ ರೈತರುಗಳಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಹಾಗೂ ಕುಡಿಯುವ ನೀರು ಒದಗಿಸಬೇಕು ಎಂಬ ನಿರ್ಣಯವನ್ನು ಜೆಡಿಎಸ್ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಿದೆ.  ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ನೀರು ಹರಿಸಿರುವುದರಿಂದ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಾದ ಕಬಿನಿ, ಕೆಆರ್‍ಎಸ್, ಹೇಮಾವತಿ, ಹಾರಂಗಿ ಜಲಾನಯನ ಪ್ರದೇಶಗಳ 19 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಈ ರೈತರಿಗೆ ತಾತ್ಕಾಲಿಕ ಪರಿಹಾರವಾಗಿ ಪ್ರತಿ ಎಕರೆಗೆ 50 ಸಾವಿರ ರೂ. ನೀಡಬೇಕು. ನೀರು ಬಿಡುವುದನ್ನು ಸ್ಥಗಿತಗೊಳಿಸಬೇಕು. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮುಂದಾಗಬೇಕು ಎಂಬ ನಿರ್ಣಯವನ್ನು ಅಧಿವೇಶನದಲ್ಲಿ ಪಕ್ಷದ ವತಿಯಿಂದ ಮಂಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಹಾಗೂ ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಕೈಗೊಳ್ಳಲಿರುವ ನಿರ್ಣಯಕ್ಕೆ ಬದ್ಧರಾಗಿರುವ ನಿರ್ಧಾರಕ್ಕೆ ಬರಲಾಗಿದೆ. ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪನಾಯಕ ವೈ.ಎಸ್.ವಿ.ದತ್ತ ಸೇರಿದಂತೆ ಜೆಡಿಎಸ್‍ನ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

 •  ಅಸಹಕಾರ ಚಳವಳಿ ಕೈ ಬಿಡಲು ಡಿಕೆಶಿ ಮನವಿ

ಬೆಂಗಳೂರು, ಸೆ.23- ಮಂಡ್ಯದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಸಹಕಾರ ಚಳವಳಿಯನ್ನು ಕೈ ಬಿಡಬೇಕೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.  ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಹಕಾರ ಚಳವಳಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕರೆತರಬಾರದು. ಇದರಿಂದ ಮುಂದಿನ ದಿನಗಳಲ್ಲಿ ಅವರಿಗೆ ತೊಂದರೆಯಾಗಲಿದೆ. ಇದನ್ನು ನಾಯಕರು ಮನಗಾಣಬೇಕು ಎಂದು ಹೇಳಿದರು.  ಸರ್ಕಾರಿ ಕಚೇರಿಗಳನ್ನು ಮುಚ್ಚುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರಿ ಕಚೇರಿಗಳನ್ನು ಮುಚ್ಚಿಸಬಾರದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಚೇರಿಗಳಿಗೆ ಪೊಲೀಸ್ ಭದ್ರತೆ ಒದಗಿಸಲು ಸೂಚಿಸಲಾಗಿದೆ. ಶಾಂತಿಯುತ ಪ್ರತಿಭಟನೆ ನಡೆಯಬೇಕು ಎಂದು ತಿಳಿಸಿದರು.ವಿಶೇಷ ಅಧಿವೇಶನ ಜನರ ಧ್ವನಿ ಸರ್ಕಾರದ ಧ್ವನಿಯಾಗಲಿದೆ. ಜನಪ್ರತಿನಿಧಿಗಳು ಜನರ ಪರವಾಗಿ ಚರ್ಚೆ ಮಾಡುತ್ತಾರೆ. ಮೊದಲು ಕುಡಿಯುವ ನೀರಿನ ವಿಚಾರ ಇತ್ಯರ್ಥವಾಗಬೇಕು. ನ್ಯಾಯಪೀಠದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಒಪ್ಪತಕ್ಕದ್ದಲ್ಲ ಎಂದು ತಿಳಿಸಿದರು.  ಬೆಂಗಳೂರು ಮೂಲಕ ಭಾರತವನ್ನು ಇಡೀ ವಿಶ್ವ ನೋಡುತ್ತಿದೆ. ಇಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಾರದು ಎಂದು ಡಿಕೆಶಿ ಹೇಳಿದರು.

 • ಮಹದಾಯಿ ವಿಷಯಕ್ಕೂ ಹೆಚ್ಚು ಒತ್ತು ನೀಡಿ : ದತ್ತ

ಬೆಂಗಳೂರು,ಸೆ.23-ಕಾವೇರಿ ವಿಷಯವಾಗಿ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ನಡೆಸುತ್ತಿರುವ ವಿಶೇಷ ಅಧಿವೇಶನವನ್ನು ಮಹದಾಯಿ ವಿಚಾರವಾಗಿ ನಾಳೆಗೂ ಮುಂದುವರೆಸುವ ನಿರ್ಣಯ ತೆಗೆದುಕೊಂಡರೆ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತು ಬರುತ್ತದೆ ಎಂದು ಶಾಸಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಲ-ಜಲ, ಭಾಷೆ ವಿಷಯವಾಗಿ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ತಮಿಳುನಾಡಿಗೆ ನೀರು ಬಿಡಬಾರದು ಎಂಬ ನಿರ್ಣಯ ಮತ್ತು ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ವಿಚಾರ ಸಂವಿಧಾನದ ಪಾವಿತ್ರತೆಯನ್ನು ಪ್ರಶ್ನೆ ಮಾಡಿದಂತಾಗಿದೆ ಎಂದರು.  ಜೆಡಿಎಸ್ ಸಹ ಸರ್ಕಾರದ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ನೀಡಿದೆ. ಇಂದಿನ ಅಧಿವೇಶನದಿಂದಾಗಿ ನ್ಯಾಯಾಂಗ, ಶಾಸಕಾಂಗ ತನ್ನ ಪರಿಧಿಯಲ್ಲಿರಬೇಕು, ಸುಪ್ರೀಂಕೋರ್ಟ್ ಸಂವಿಧಾನದ ಪಾರಮ್ಯವನ್ನು ಉಲ್ಲಂಘಿಸಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಪಾತ್ರ ಮತ್ತು ಮಧ್ಯಸ್ಥಿಕೆ ಮುಖ್ಯವಾಗುತ್ತದೆ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂದು ಹೇಳಿದರು.

Live

 • ಇಂದಿನ ಅಧಿವೇಶನ ರಾಷ್ಟ್ರಕ್ಕೆ ಹೊಸ ಸಂದೇಶ

ಬೆಂಗಳೂರು, ಸೆ.23- ಇಂದಿನ ವಿಶೇಷ ಅಧಿವೇಶನದಿಂದ ರಾಷ್ಟ್ರಕ್ಕೆ ಒಂದು ಸಂದೇಶ ರವಾನೆಯಾಗಲಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‍ನಷ್ಟೇ ಸಂವಿಧಾನಾತ್ಮಕ ಅಧಿಕಾರವನ್ನು ವಿಧಾನಸಭೆ ಮತ್ತು ಸಂಸತ್ತು ಹೊಂದಿದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡದಿದ್ದರೆ ವಿಧಾನಸಭೆ ನಿರ್ಣಯವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಲು ಸಾಧ್ಯವಿಲ್ಲ. ಇದನ್ನು ಪ್ರಧಾನಿ ಹಾಗೂ ರಾಷ್ಟ್ರಪತಿಗಳು ಗಮನಿಸಬೇಕೆಂದು ತಿಳಿಸಿದರು. ಸುಪ್ರೀಂಕೋರ್ಟ್‍ನ ಆದೇಶದಿಂದ ನಮ್ಮ ಜಲಾಶಯ ಬರಿದಾಗಿದೆ. ನಾವು ಆ ಆದೇಶಕ್ಕೆ ಗೌರವ ಕೊಟ್ಟಿದ್ದರಿಂದ ನಮ್ಮ ರೈತರ ಬೆಳೆಗಳು ನಾಶವಾಗಿವೆ. ಜನರ ಆಕ್ರೋಶದ ನಡುವೆ ಸರ್ಕಾರದ ನೀರು ಬಿಟ್ಟು ನ್ಯಾಯಾಲಯದ ಆದೇಶವನ್ನು ಗೌರವಿಸಿದೆ ಎಂದರು.

Updates Awaiting ….

► Follow us on –  Facebook / Twitter  / Google+

Facebook Comments

Sri Raghav

Admin