ಕಾವೇರಿ ಆದೇಶ ಅವೈಜ್ಞಾನಿಕ : ದೊರೆಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

kaveri
ಯಲಹಂಕ, ಸೆ.23- ಸುಪ್ರೀಂಕೋರ್ಟ್ ಕಾವೇರಿ ವಿವಾದ ಸಂಬಂಧ ಹೊರಡಿಸಲಾಗಿರುವ ಆದೇಶ ಅವೈಜ್ಞಾನಿಕ ವಾಗಿದ್ದು, ಇದನ್ನು ಧಿಕ್ಕರಿಸುವುದರಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಹೊರತು ಪಡಿಸಿ ಯಾರಿಗೂ ತೊಂದರೆ ಆಗಲಾರದು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ವೀರಭದ್ರಪ್ಪ ತಾಯಪ್ಪನವರ 106ನೆ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವುದು ತನ್ನ ವ್ಯಾಪ್ತಿಗೆ ಬಾರದ ವಿಷಯವಾಗಿದೆ.

ಇದರಲ್ಲಿ ಸುಪ್ರೀಂ ಕೋರ್ಟ್ ಕೂಡ ರಾಜಕಾರಣ ಮಾಡುತ್ತಿದೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.ತಾಯಪ್ಪನವರ ಜತೆ 1942ರ ಅಸಹಕಾರ ಚಳವಳಿ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟ, ಚಳವಳಿಗಳಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ ಅಪೂರ್ವ ಕ್ಷಣಗಳನ್ನು ದೊರೆಸ್ವಾಮಿಯವರು ಪುನರ್‍ಮನನ ಮಾಡಿಕೊಂಡರು. ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಜನಪ್ರತಿನಿಧಿಗಳು ರಾಜಕಾರಣ ಬದಿಗಿಟ್ಟು ಒಕ್ಕೊರಲಿನಿಂದ ಭಾವನಾತ್ಮಕವಾಗಿ ಸಂಬಂಧ ಹೊಂದಿರುವ ಜೀವನದಿ ಕಾವೇರಿಗಾಗಿ ಹೋರಾಟ ಕೈಗೊಳ್ಳಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕೂಡ ಮಧ್ಯ ಪ್ರವೇಶ ಮಾಡಬೇಕು ಎಂದು ಹೇಳಿದರು.

ಯಾರೊಬ್ಬರೂ ಕಟು ನಿರ್ಧಾರ ಕೈಗೊಳ್ಳದೆ ಇರುವ ನೀರನ್ನೆಲ್ಲ ತಮಿಳುನಾಡಿಗೆ ಬಿಟ್ಟು ಅಸಹಾಯಕತೆ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಜನರಿಗೆ ಮಾಡಿದ ವಿಶ್ವಾಸದ್ರೋಹ. ಸಿದ್ದ ರಾಮಯ್ಯನವರು ಇದಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವ ನಾಟಕವಾಡುತ್ತಿದ್ದಾರೆಯೇ ವಿನಃ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಟೀಕಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin