ಕಾವೇರಿ ಎಫೆಕ್ಟ್ : ಠುಸ್ಸಾದ ಪಟಾಕಿ ವಹಿವಾಟು, ಪೂರೈಕೆಯಲ್ಲಿ ಭಾರೀ ವ್ಯತ್ಯಯ

ಈ ಸುದ್ದಿಯನ್ನು ಶೇರ್ ಮಾಡಿ

Pataki-01

ಬೆಂಗಳೂರು, ಅ.15-ಕರ್ನಾಟಕ ಮತ್ತು ತಮಿಳುನಾಡು ನಡುವೆ ಭಾರೀ ಕಿಚ್ಚು ಹಚ್ಚಿದ ಕಾವೇರಿ ನದಿ ನೀರು ಹಂಚಿಕೆ ವಿವಾದ ಈ ಬಾರಿ ಪಟಾಕಿಯ ಮೇಲೆಯೂ ಪರಿಣಾಮ ಬೀರಿದೆ.
ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಆದರೆ ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಪಟಾಕಿ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ.  ಕಾರಣವೇನೆಂದರೆ ಕರ್ನಾಟಕದಲ್ಲಿ ದಸರಾ ಮತ್ತು ದೀಪಾವಳಿ ಸೇರಿದಂತೆ ವಿಶೇಷ ದಿನಗಳಲ್ಲಿ ಶೇ.90ರಷ್ಟು ಪಟಾಕಿಯನ್ನು ತಮಿಳುನಾಡಿನ ಶಿವಕಾಶಿಯಿಂದಲೇ ಖರೀದಿ ಮಾಡಲಾಗುತ್ತದೆ.  ಕರ್ನಾಟಕ ಮತ್ತು ತಮಿಳುನಾಡಿಗೆ ಹೊಂದಿಕೊಂಡಿರುವ ಗಡಿಪ್ರದೇಶ ಹೊಸೂರು ನಂತರ ಶಿವಕಾಶಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಪಟಾಕಿಯನ್ನು ಉತ್ಪಾದಿಸುವ ಕಾರ್ಖಾನೆಗಳಿವೆ. ಕರ್ನಾಟಕ ಸೇರಿದಂತೆ ದೇಶ, ವಿದೇಶಗಳಿಗೂ ಶಿವಕಾಶಿಯಿಂದಲೇ ಪಟಾಕಿಯನ್ನು ಪೂರೈಕೆ ಮಾಡಲಾಗುತ್ತದೆ.

ಆದರೆ ಈ ಬಾರಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ಬಿಕ್ಕಟ್ಟು ಸೃಷ್ಟಿಯಾಗಿದ್ದರಿಂದ ಶಿವಕಾಶಿ ಪಟಾಕಿ ಠುಸ್ಸಾಗಿದೆ. ಸೆಪ್ಟೆಂಬರ್ 5ರಂದು ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ ತಮಿಳುನಾಡಿಗೆ ನೀರು ಹರಿಸಬೇಕೆಂದು ಆದೇಶ ನೀಡಿತ್ತು. ಅಲ್ಲಿಂದ ಆರಂಭವಾದ ಕಾವೇರಿ ಗಲಭೆ ಸರಿಸುಮಾರು 23 ದಿನಗಳ ಕಾಲ ಉಭಯ ರಾಜ್ಯಗಳ ನಡುವೆ ಭಾರೀ ಸಂಘರ್ಷವನ್ನೇ ಸೃಷ್ಟಿಸಿತು.  ತಮಿಳುನಾಡಿನಿಂದ ಕರ್ನಾಟಕಕ್ಕಾಗಲಿ ಇಲ್ಲವೇ ಕರ್ನಾಟಕದಿಂದ ತಮಿಳುನಾಡಿಗಾಗಲಿ ಒಂದೇ ಒಂದು ಲಾರಿ, ಬಸ್ ಸಂಚರಿಸಲಿಲ್ಲ. ಅಷ್ಟೇ ಏಕೆ ಕಡೇ ಪಕ್ಷ ದ್ವಿಚಕ್ರ ವಾಹನವೂ ಕೂಡ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕನ್ಯಾಕುಮಾರಿಯಲ್ಲಿ ಕನ್ನಡಿಗನೊಬ್ಬನ ಮೇಲೆ ತಮಿಳು ಪುಂಡರು ಹಲ್ಲೆ ನಡೆಸಿದ್ದನ್ನು ಮುಂದಿಟ್ಟುಕೊಂಡು ಸಿಡಿದೆದ್ದ ಕನ್ನಡಿಗರು ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ತಮಿಳುನಾಡು ವಾಹನಗಳ ಮೇಲೆ ಹಲ್ಲೆ ನಡೆಸಿದರು. ಪ್ರತಿದಿನ ಹೊಸೂರು ಮೂಲಕ ವಾಹನಗಳು ಕನಿಷ್ಠ ಮೂರರಿಂದ ನಾಲ್ಕು ಸಾವಿರ ಸಂಚರಿಸುತ್ತಿದ್ದವು. ಆರದ ಗಾಯ: ಮೇಲ್ನೋಟಕ್ಕೆ ಕಾವೇರಿ ಗಲಭೆ ತಿಳಿಗೊಂಡಿದ್ದರೂ ಪರಿಸ್ಥಿತಿ ಮಾತ್ರ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ವಾಹನಗಳು ಹೊಸೂರು ಮೂಲಕ ತಮಿಳುನಾಡು ಪ್ರವೇಶಿಸಲು ಹಿಂದೆಮುಂದೆ ನೋಡುತ್ತಿದ್ದಾರೆ.

ಅತ್ತ ಹೊಸೂರಿನಿಂದ ಬೆಂಗಳೂರಿಗೆ ಬರಲು ಅಲ್ಲಿನ ವಾಹನಗಳು ಕೂಡ ಮೀನಾಮೇಷ ಎಣಿಸುತ್ತಿವೆ. ಇದರ ಪರಿಣಾಮ ಪ್ರತಿವರ್ಷ ಪೂರೈಕೆಯಾಗುತ್ತಿದ್ದ ಪಟಾಕಿ ತಲುಪಲು ಸಾಧ್ಯವಾಗುತ್ತಿಲ್ಲ.
ಹೊಸೂರಿನಲ್ಲಿ ಈಗಲೂ ಎರಡೂ ರಾಜ್ಯಗಳ ವಾಹನಗಳನ್ನು ಬಿಗಿ ತಪಾಸಣೆ ನಡೆಸಿಯೇ ಒಳಬಿಡಲಾಗುತ್ತದೆ. ಪ್ರತಿ ವರ್ಷ ಹೇಗೋ ಕದ್ದುಮುಚ್ಚಿ ಇಲ್ಲವೇ ಪೊಲೀಸರ ಕಣ್ತಪ್ಪಿಸಿ ಪಟಾಕಿಗಳನ್ನು ತರಲಾಗುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ವಿಷಮವಾಗಿರುವುದರಿಂದ ಪಟಾಕಿ ಮಾರಾಟದಲ್ಲಿ ಏರುಪೇರಾಗಿದೆ ಎನ್ನುತ್ತಾರೆ ಗ್ರಾಹಕರು.

ಶಿವಕಾಶಿಯಲ್ಲೂ ಪಟಾಕಿ ಕೊಳ್ಳುವವರು ಇಲ್ಲದಂತಾಗಿದೆ. ತಮಿಳುನಾಡಿಗಿಂತ ಹೆಚ್ಚಾಗಿ ಇಲ್ಲಿ ಪಟಾಕಿ ಖರೀದಿಸುತ್ತಿದ್ದವರೇ ಕರ್ನಾಟಕದವರು. ಮುಖ್ಯಮಂತ್ರಿ ಜಯಲಲಿತಾಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವುದು ಒಂದೆಡೆಯಾದರೆ ಎಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಬಹುದೆಂಬ ಭಯದಿಂದ ಶಿವಕಾಶಿಯತ್ತ ಯಾರೊಬ್ಬರು ಮುಖ ಮಾಡುತ್ತಿಲ್ಲ. ಇದೆಲ್ಲದರ ಪರಿಣಾಮವೇ ಪ್ರತಿ ವರ್ಷ ಹಬ್ಬಕ್ಕೂ ಮುನ್ನವೇ ಧಾಮ್‍ಧೂಮ್ ಎಂದು ಸಿಡಿಯುತ್ತಿದೆ ಪಟಾಕಿಗಳಿಗೆ ಬರಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin