ಕಾವೇರಿ ಕೊಳ್ಳದಲ್ಲಿದ್ದರೂ ಹೇಮಾವತಿ ಕೆರೆಗಳಿಗೆ ಇಲ್ಲ ನೀರಿನ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

hemavathi

ತುಮಕೂರು, ಸೆ. 25-ಕಾವೇರಿ ಕೊಳ್ಳದ ಹೇಮಾವತಿ ನಾಲಾ ವಲಯದಲ್ಲಿನ ಎಲ್ಲಾ ಕೆರೆಗಳು ಬತ್ತಿ ಹೋಗಿ ಕೃಷಿಗೆ ನೀರಿಲ್ಲದೆ ಕುಡಿಯಲು ಮಾತ್ರ ಬಳಸುವ ಸ್ಥಿತಿ ಎದುರಾಗಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.  ತುಮಕೂರು ಜಿಲ್ಲೆಯ ಹೇಮಾವತಿ ನಾಲಾ ವಲಯದ 176 ಕೆರೆಗಳಲ್ಲಿ ಬಹುತೇಕ ಎಲ್ಲವೂ ಮಳೆ ಕೊರತೆಯಿಂದ ಬತ್ತಿ ಹೋಗಿದ್ದು, ಕೇವಲ 21 ಕೆರೆಗಳು ಮಾತ್ರ ಮಳೆ ನೀರಿಗೆ ಅಲ್ಪಸ್ವಲ್ಪ ತುಂಬಿವೆ. ಅಂದರೆ ಶೇ.25ರಷ್ಟು ನೀರು ಮಾತ್ರ ಕುಡಿಯಲು ಸಿಗುತ್ತಿರುವುದು ಈ ಭಾಗದ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಕಾವೇರಿ ಕಣಿವೆಯ ಉದ್ದಕ್ಕೂ ಎದುರಾಗಿರುವ ನೀರಿನ ಬವಣೆಯನ್ನು ಕಣ್ಣಾರೆ ಕಂಡ ಪತ್ರಕರ್ತರು ಅಧ್ಯಯನ ನಡೆಸಿದರು. ಫೆಬ್ರವರಿಯಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಮಳೆ ಅವಯಲ್ಲಿ ಕೆರೆಗಳು ತುಂಬುವ ನಿರೀಕ್ಷೆ ಇತ್ತಾದರೂ ಈ ಬಾರಿ ಸಾಕಷ್ಟು ಕೆರೆಗಳು ತುಂಬದೆ ಕೃಷಿಕರು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಾವರಿ ಬೇಸಾಯವಿರಲಿ, ಕನಿಷ್ಠ ಒಣ ಭೂಮಿ ಬೇಸಾಯ ಮಾಡಲು ಆಗದೆ ಕಂಗಾಲಾಗಿರುವ ರೈತರು ಕಳೆದ ಎರಡು ವರ್ಷಗಳಿಂದ ಒಣ ಭೂಮಿ ಬೇಸಾಯ ಮಾಡಿದ್ದೇವೆ. ಕಾವೇರಿ ನದಿ ಪಾತ್ರದಲ್ಲಿದ್ದರೂ ನೀರಾವರಿ ಸೌಲಭ್ಯವಿಲ್ಲದೆ ಸದಾ ಕಾಲ ಸಂಕಷ್ಟದಲ್ಲೇ ಬೆಳೆ ತೆಗೆದಿದ್ದೇವೆ. ಈಗ ಒಣ ಬೇಸಾಯಕ್ಕೂ ತೊಂದರೆ ಎದುರಾಗಿರುವುದರಿಂದ ರೈತರಿಗೆ ಸಾಕಷ್ಟು ನೋವು ತಂದಿದೆ.

ಎಂ.ಎಚ್.ಪಟ್ಟಣದ ಕೆರೆ ಸಂಪೂರ್ಣ ಒಣಗಿ ಹೋಗಿದ್ದು, 62.92 ಮಿಲಿಯನ್ ಕ್ಯೂಬಿಕ್ ಅಡಿ ನೀರು ತುಂಬಿಸಬಹುದಾದಷ್ಟು ಸಾಮರ್ಥ್ಯವಿರುವ ಈ ಕೆರೆಯಿಂದ 195 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಬಹುದಾಗಿದ್ದರೂ ಕೆರೆಗಳೇ ಜೀವ ಕಳೆದುಕೊಂಡಿರುವುದರಿಂದ ಬರಗಾಲದ ಸ್ಥಿತಿ ಬಂದೊದಗಿದೆ. ಇದೇ ಕೆರೆ ಸಾಲಿಗೆ ಸೇರುವ ಅಸಲಿಪುರ, ಗೌಡಿಹಳ್ಳಿ, ದೊಡ್ಡನಾಗರ, ಗುಬ್ಬಿ, ಅಮಾನಿ ಕೆರೆಗಳು ಒಣಗಿರುವುದರಿಂದ ಕಾವೇರಿ ಕೊಳ್ಳದಲ್ಲಿ ರೈತರ ಅಸಹಾಯಕತೆ ವ್ಯಕ್ತವಾಗಿದೆ. ರೈತರು ಮಳೆಯನ್ನೇ ನಂಬಿ ಕೃಷಿ ನಡೆಸುತ್ತಿದ್ದು, ಈಗ ಬೇಸಾಯ ಮಾಡಲಾಗದೆ ಹೋಗುತ್ತಿದೆ. ಹೇಮಾವತಿ ನಾಲಾ ವಲಯದಲ್ಲಿದ್ದರೂ ಕೃಷಿಕರು ಕೃಷಿ ಮಾಡದೆ ಇರುವಂತಹ ಪರಿಸ್ಥಿತಿ ದಿನದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಈ ಹಿಂದೆಲ್ಲಾ ಒಣ ಭೂಮಿ ಬೇಸಾಯದಲ್ಲಿ ರಾಗಿ, ಜೋಳವನ್ನಾದರೂ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಅದೂ ಸಾಧ್ಯವಾಗದೆ ಹೋಗಿರುವುದರಿಂದ ಬಹುತೇಕ ಮಂದಿ ಕಂಗಾಲಾಗಿ ಅಸಹಾಯಕತೆಯಿಂದ ಬಳಲುವಂತಾಗಿದೆ.
ಗುಬ್ಬಿ ತಾಲೂಕಿನ ಕಿಟ್ಟದ ಕುಪ್ಪೆ ಗ್ರಾಮದಲ್ಲಿ ಅಧ್ಯಯನ ನಡೆಸಿದ ವೇಳೆ ರೈತರು ಕಳೆದ ಎಂಟು ವರ್ಷಗಳಿಂದ ಮಳೆ ಇಲ್ಲ. ಬರದಿಂದಾಗಿ ನಾಲೆಗಳಲ್ಲಿ ನೀರಿಲ್ಲ. ಅಂತರ್ಜಲ ಮಟ್ಟ ಒಂದೂವರೆ ಸಾವಿರ ಅಡಿಗೆ ಇಳಿದಿದೆ. ಬೋರ್‌ವೆಲ್ ಕೊರೆದರೂ ನೀರು ಬರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು. ಕುಡಿಯುವ ನೀರಿಗೂ ಸಾಕಷ್ಟು ತೊಂದರೆ ಎದುರಾಗಿದ್ದು, ಇಲ್ಲಿಂದ 5 ಕಿ.ಮೀ. ದೂರದ ಗುಬ್ಬಿಗೆ ತೆರಳಿ 2 ರೂ. ಕಾಯಿನ್ ಹಾಕಿ ನೀರು ತರುವ ಪರಿಸ್ಥಿತಿ ಬಂದೊದಗಿದೆ.

former
ಇನ್ನು ಬೆಳೆಯುತ್ತಿದ್ದ ರಾಗಿ, ಜೋಳ, ತೆಂಗು, ಅಡಿಕೆ ಬೆಳೆಗಳ ಸ್ಥಿತಿಯಂತೂ ಹೇಳತೀರದಾಗಿದೆ. ಜೀವನ ಮಾಡಲು ದಾರಿಯೇ ಇಲ್ಲ. ಆದರೆ ಸರ್ಕಾರ ಮಾತ್ರ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಹೇಳುತ್ತಿದೆ. ದನಕರುಗಳಿಗೂ ಮೇವಿಲ್ಲ. ಮೊನ್ನೆ ಮಳೆ ಬಂತೆಂದು ಬಿತ್ತನೆ ಮಾಡಿದ್ದೆವು. ಮತ್ತೆ ಮಳೆ ಬಾರದೆ ಬಿತ್ತಿದ ಬೀಜವೂ ಮೊಳಕೆಯೊಡೆಯಲಿಲ್ಲ. ಸಾಲ ಮಾಡಿ ತಂದ ಬೀಜದ ದುಡ್ಡು ತೀರಿಲ್ಲ. ಸರ್ಕಾರದ ಮುಂದೆ ಪರಿಹಾರಕ್ಕಾಗಿ ಕೈ ಚಾಚಬೇಕು ಎಂಬ ಉದ್ದೇಶ ನಮಗಿಲ್ಲ ಎಂದು ಅಲವತ್ತುಕೊಂಡರು. ನೀರು,ಗೊಬ್ಬರ ಕೊಟ್ಟರೆ ನಾವೇ ದುಡಿದು ಸರ್ಕಾರದ ಸಾಲ ತೀರಿಸುತ್ತೇವೆ. ಮೊದಲು ಸರ್ಕಾರ ನೀರು ಕೊಡಲಿ ಎಂದು ಪರಿಪರಿಯಾಗಿ ಬೇಡಿದರು. ಇನ್ನು ಕೆಲ ರೈತರು ಸಾಲವನ್ನು ಸರ್ಕಾರ ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin