ಕಾವೇರಿ ಕೊಳ್ಳದಲ್ಲಿ ಮಳೆ ಅಭಾವ ನೀಗಿಸಲು ಮೋಡ ಬಿತ್ತನೆ

ಈ ಸುದ್ದಿಯನ್ನು ಶೇರ್ ಮಾಡಿ

 

Kaveriಬೆಂಗಳೂರು, ಆ.11- ಕಳೆದ ಎರಡು ವರ್ಷಗಳಂತೆ ಈ ವರ್ಷವೂ ಕೂಡ ಬರದ ಛಾಯೆ  ಆವರಿಸುತ್ತಿರುವ  ಹಿನ್ನೆಲೆಯಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಸೆಪ್ಟೆಂಬರ್‍ನ ಮೊದಲ ವಾರದಲ್ಲಿ ಮೋಡ ಬಿತ್ತನೆ ಮಾಡುವ ಮೂಲಕ ಕೃತಕ ಮಳೆ ಬೀಳಿಸುವ ಯತ್ನವನ್ನು ಸರ್ಕಾರ ಮಾಡಲಿದೆ. ಮೋಡಬಿತ್ತನೆ ಮಾಡಲು ಕೇಂದ್ರ ವಿಮಾನಯಾನ ಇಲಾಖೆಯಿಂದ ಅನುಮತಿಪಡೆಯಬೇಕಾಗಿದೆ. ಎಷ್ಟೇ ತರಾತುರಿ ಮಾಡಿ ಪಾರದರ್ಶಕ ಕಾಯ್ದೆಯಿಂದ ಹೊರಗಿಟ್ಟರೂ ಮೋಡಬಿತ್ತನೆ  ಆರಂಭಿಸಲು ಕನಿಷ್ಠ ಎರಡು ವಾರಗಳ ಕಾಲವಕಾಶ ಬೇಕಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.  ನೆರೆಯ ಮಹಾರಾಷ್ಟ್ರದಲ್ಲಿ ಕಳೆದ ಎರಡು ವರ್ಷಗಳ ಕಾಲ ಮೋಡ ಬಿತ್ತನೆ ಮಾಡಿ ಮಳೆ ತರಿಸುವ ಯತ್ನ ಮಾಡಿದ್ದು, ಶೇ.10ರಿಂದ 20ರಷ್ಟು  ಪ್ರಯೋಜನವಾಗಿರುವ ಫಲಿತಾಂಶ ಬಂದಿದೆ. ಈ ಬಾರಿ ಕೂಡ ಮೋಡ ಬಿತ್ತನೆ ಮಾಡಲು ಎಲ್ಲಾ ಸಿದ್ದತೆಗಳನ್ನು ಮಹಾರಾಷ್ಟ್ರ ಸರ್ಕಾರ ಮಾಡಿತ್ತು. ಆದರೆ, ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಿಂದ ಕೊನೆಗಳಿಗೆಯಲ್ಲಿ ಮೋಡಬಿತ್ತನೆ ಕಾರ್ಯ ಕೈ ಬಿಟ್ಟಿತ್ತು.

ಮೋಡಬಿತ್ತನೆಗೆ ಬೇಕಾದ ಏರ್‍ಕ್ರಾಪ್ಟರ್ ಹಾಗೂ ರಾಡಾರ್ ಮಹಾರಾಷ್ಟ್ರದಲ್ಲೇ ಲಭ್ಯವಿದ್ದು, ಆದರೆ, ಕೇಂದ್ರ ಸರ್ಕಾರದ ಅನುಮತಿ ಬೇಕಾಗಿರುವುದರಿಂದ ಸೆಪ್ಟೆಂಬರ್‍ಗೂ ಮುನ್ನ ಮೋಡಬಿತ್ತನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ನಿನ್ನೆ ನಡೆದ ರಾಜ್ಯ ಸಂಪುಟಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಗೆ ಮೋಡ ಬಿತ್ತನೆ ಮಾಡುವ ಹೊಣೆಗಾರಿಕೆ ನೀಡಿದ್ದು, ನದಿಪಾತ್ರಗಳ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡಲು 30 ಕೋಟಿ ರೂ. ಅನುದಾನವನ್ನು ಕೂಡ ಒದಗಿಸಲಾಗಿದೆ.

ಈ ನಡುವೆ ಕಾವೇರಿ ನ್ಯಾಯಾಧಿಕರಣದ ತೀರ್ಪಿನಂತೆ ನೀರನ್ನು ಕರ್ನಾಟಕದಿಂದ ಬಿಟ್ಟಿಲ್ಲ ಎಂದು ತಮಿಳುನಾಡು ತಕರಾರು ತೆಗೆದಿದೆ. ನೀರಿನ ಅಭಾವದ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಹೊರತುಪಡಿಸಿ ಕೃಷಿ ಬಳಕೆಗೆ ನೀರು ಹರಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಎರಡೂ ತಿಂಗಳುಗಳ ಕಾಲ ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದು ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮೋಡ ಬಿತ್ತನೆಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಯನ್ನು ಒದಗಿಸುವಂತೆ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವನ್ನು ಕೋರಲಾಗಿದೆ. ಮೋಡ ಬಿತ್ತನೆ ಮಾಡಿದರೂ ಕೂಡ ಶೇ.100ರಷ್ಟು ಮಳೆ ಬರುವ ಖಾತ್ರಿ ಇಲ್ಲ. ಶೇ.50ರಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು.  ಈಗಾಗಲೇ ಮೂರು ತಿಂಗಳು ಮುಂಗಾರಿನ ಅವಧಿ ಮುಗಿದಿದೆ. ಹೀಗಾಗಿ ಕೊನೆ ಗಳಿಗೆಯಲ್ಲಿ ಮೋಡಬಿತ್ತನೆ ಕೆಲಸವನ್ನು ಸರ್ಕಾರ ಮಾಡುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin