ಕಾವೇರಿ ಕೊಳ್ಳದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಂದ ವೈಮಾನಿಕ ಸಮೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ


ಬೆಂಗಳೂರು, ಸೆ.11-ಕಾವೇರಿ ಜಲಾನಯನ ಭಾಗದ ಜಲಾಶಯಗಳಾದ ಹಾರಂಗಿ, ಕಬಿನಿ, ಹೇಮಾವತಿ ಹಾಗೂ ಕೆಆರ್‍ಎಸ್ ಜಲಾಶಯಗಳ ನೀರಿನ ಮಟ್ಟ ಪರಿಶೀಲನೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಇಂದು ವೈಮಾನಿಕ ಸಮೀಕ್ಷೆ ನಡೆಸಿದರು.   ನಗರದ ಜಕ್ಕೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ತೆರಳಿದ ಗೌಡರು ಈ ನಾಲ್ಕು ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದ ಸಮೀಕ್ಷೆ ನಡೆಸಿ ಮಾಹಿತಿ ಪಡೆದುಕೊಂಡರು.  ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳ ವಾಸ್ತವ ಸ್ಥಿತಿಗತಿಯನ್ನು ಅರಿಯಲು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದರು. ಮೊದಲಿಗೆ ಕೆಆರ್‍ಎಸ್ ಜಲಾಶಯದ ವೈಮಾನಿಕ ಸಮೀಕ್ಷೆ ನಡೆಸಿದ ಗೌಡರು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆದರು.  [  ಇದನ್ನೂ ಓದಿ : ಮಂಡ್ಯದಲ್ಲಿ ‘ಕಾವೇರಿ’ದ ಹೋರಾಟ : ಜೆಡಿಸ್-ಬಿಜೆಪಿ ಸಾಥ್ ]

ಸಮೀಕ್ಷೆಯ ನಂತರ ವಾಸ್ತಾವಂಶಗಳನ್ನು ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಲಿದ್ದಾರೆ.  ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‍ನಲ್ಲಿ ವೈಮಾನಿಕ ಸಮೀಕ್ಷೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ನಮ್ಮ ರಾಜ್ಯದಲ್ಲಿ ಕೇವಲ ಒಂದೇ ಒಂದು ಬೆಳೆಯನ್ನು ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಆದರೆ ನೆರೆಯ ತಮಿಳುನಾಡು ಮೂರು ಬೆಳೆಗೆ ನೀರನ್ನು ಕೇಳುತ್ತಿದೆ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.   ನಮ್ಮ ರೈತರು ಬದುಕಬೇಕು, ತಮಿಳುನಾಡಿನ ರೈತರು ಉಳಿಯಬೇಕು. ಯಾರೂ ಕಷ್ಟಕ್ಕೆ ಒಳಗಾಗಬಾರದು. ಕಷ್ಟಸುಖವನ್ನು ಹಂಚಿಕೊಂಡು ಸಹಬಾಳ್ವೆ ಮಾಡಬೇಕು. ಇದು ಇಂದು ನಿನ್ನೆಯ ವಿವಾದವಲ್ಲ. ಕಳೆದ 1856ರಿಂದಲೂ ವಿವಾದ ಇದೆ ಎಂದರು.

 

Devegowda

ಸುಪ್ರೀಂಕೋರ್ಟ್‍ನ ಆದೇಶವನ್ನು ಪಾಲಿಸಲು ಸರ್ಕಾರ ನೀರು ಬಿಟ್ಟಿದೆ. ನಾವು ಕಾನೂನುಬದ್ಧವಾಗಿಯೇ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.   ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಚಿತ್ರಣವನ್ನು ನೋಡಲು ವೈಮಾನಿಕ ಸಮೀಕ್ಷೆ ಕೈಗೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿ ಕಷ್ಟದ ಪರಿಸ್ಥಿತಿಯಿದ್ದು ಕುಡಿಯುವ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಕೇಳುತ್ತಿದ್ದಾರೆ. ಈ ವಾಸ್ತವ ಸಂಗತಿಯನ್ನು ಈಗಾಗಲೇ ಪ್ರಧಾನಿ ಮೋದಿ ಅವರ ಗಮನಕ್ಕೂ ತರಲಾಗಿದೆ ಎಂದರು.  ತಾವು ಕೆಲ ಸಮಯ ಪ್ರಧಾನಿಯಾಗಿ ಕೆಲಸ ಮಾಡಿದ ಅನುಭವವಿದೆ ಎಂದ ಅವರು, ತಮ್ಮ ಅನುಭವದ ಆಧಾರದ ಮೇಲೆ ಸೂಕ್ತ ಸಲಹೆಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಾ ಬಂದಿದ್ದೇನೆ. ಅಗತ್ಯವಾದರೆ ತಮಿಳುನಾಡಿನ ಪ್ರದೇಶಕ್ಕೂ ಭೇಟಿ ನೀಡಿ ವಾಸ್ತಾವಂಶ ಅರಿಯುವ ಪ್ರಯತ್ನ ಮಾಡುತ್ತೇನೆ. ವಾಸ್ತಾವಂಶವನ್ನು ತಿಳಿದುಕೊಂಡ ನಂತರ ಮುಂದೇನು ಮಾಡಬೇಕು ಎಂಬ ತೀರ್ಮಾನ ಕೈಗೊಳ್ಳಲು ವೈಮಾನಿಕ ಸಮೀಕ್ಷೆ ಕೈಗೊಂಡಿರುವುದಾಗಿ ಹೇಳಿದರು.

ಈಗಾಗಲೇ ನವದೆಹಲಿಯಲ್ಲಿ ಗೌಡರು ರಾಜ್ಯದ ಪರ ಸುಪ್ರೀಂಕೋರ್ಟ್‍ನಲ್ಲಿ ವಾದ ಮಾಡುವ ವಕೀಲರಾದ ಫಾಲಿ.ಎಸ್ ನಾರಿಮನ್ ಹಾಗೂ ಅನಿಲ್ ದಿವಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಕಾನೂನು ಸಲಹೆ ಪಡೆದಿದ್ದರು. ಆನಂತರ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ರಾಜ್ಯದ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದರು.  ವೈಮಾನಿಕ ಸಮೀಕ್ಷೆ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಜೊತೆಗಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin