ಧೈರ್ಯ ತುಂಬಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ks--puttannayya

ಪಾಂಡವಪುರ, ಸೆ.14-ಕಾವೇರಿ ಗದ್ದಲದಲ್ಲಿ ದಾಳಿಗೊಳಗಾದ ತಮಿಳು ಭಾಷಿಕರ ಮನೆಗಳಿಗೆ ತೆರಳಿ ಧೈರ್ಯ ತುಂಬಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಯಾರು ಆತಂಕಕ್ಕೊಳಗಾಗಬೇಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅಭಯ ನೀಡಿದರು.ಜಿಲ್ಲಾಧಿಕಾರಿ ಜಿಯಾವುಲ್ಲಾ ಜತೆ ದೂರವಾಣಿಯಲ್ಲಿ ಮಾತನಾಡಿ, ವಾರಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದರೆ ಕೂಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ. ನಿಷೇಧಾಜ್ಞೆ ಮೊಟಕುಗೊಳಿಸುವಂತೆ ಮನವಿ ಮಾಡಿದರು.ಕಾವೇರಿ ನೀರು ಕಳೆದು ಕೊಂಡಿರುವುದಲ್ಲದೇ ಪ್ರತಿಭಟನಾಕಾರರ ಧಾಂದಲೆಯಿಂದ ರಾಜ್ಯ ನಷ್ಟ ಅನುಭವಿಸ ಬೇಕಾಗಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವಿಷಾಧ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಕಿಡಿಗೇಡಿಗಳು ಕನ್ನಡಿಗರ ಮೇಲೆ ಹಲ್ಲೆ ನಡೆಸಿ ಗಲಭೆ ಮಾಡಿದ್ದೇ ಈ ಅವಾಂತರಕ್ಕೆ ಕಾರಣ. ಕರ್ನಾಟಕದಲ್ಲಿರುವ ಅಲ್ಪ ಸಂಖ್ಯಾತರ ಮೇಲೆ ದಬ್ಬಾಳಿಕೆ ಸಲ್ಲದು. ಜತೆಗೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನೆ ನೆಪ ಮಾಡಿಕೊಂಡ ಕೆಲವರು ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ತಮಿಳರಿಗೆ ಸೇರಿದ ಆಸ್ತಿ-ಪಾಸ್ತಿ ಹಾಳು ಮಾಡಿದ್ದಾರೆ ಎಂದರು.ಅಂತರರಾಜ್ಯ ನೀರಿನ ವಿಚಾರಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆ ಹೊರತು ನ್ಯಾಯಾಲಯ ಮಧ್ಯೆ ಪ್ರವೇಶ ಮಾಡಬಾರದು, ಇದರಿಂದ ಜನಾಂಗೀಯ ವೈಷಮ್ಯ ಮೂಡುತ್ತದೆ. ಮಳೆ ಆಧಾರಿತವಾಗಿ ನೀರು ಹಂಚಿಕೆ ಮಾಡ ಬೇಕೆ ಹೊರತು ಕೋರ್ಟ್ ಮುಖಾಂತರ ಅಲ್ಲ ಎಂದರು.

ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದರೆ ಸಂವಿಧಾನ ಬಿಕ್ಕಟ್ಟು ಸೃಷ್ಠಿಯಾಗಲಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಗೌರವ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಲ್ಲದೆ ನೀರಿನ ಅಭಾವದಿಂದ ಬೆಳೆ ನಾಶವಾದರೆ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಿ, ಸಾಲಮನ್ನಾ ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಆಗ್ರಹಿಸಿದರು.  ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ನೀಡಿದ ದಿನದಿಂದ ಸೋಮವಾರದವರೆಗೆ ಪ್ರತಿಭಟನೆಗಳಲ್ಲಿ ನಿರತರಾಗಿದ್ದ ತಾಲೂಕಿನ ಜನತೆ ಇಂದು ನಿಷೇದಾಜ್ಞೆ  ಜಾರಿಯಲ್ಲಿರುವುದರಿಂದ ಯಾವುದೇ ಪ್ರತಿರೋಧವಿಲ್ಲದೆ ಶಾಂತವಾಗಿದ್ದರು.

ನಿನ್ನೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದ ಪಟ್ಟಣದಲ್ಲಿ ಇಂದು ಬೆಳಿಗ್ಗೆಯಿಂದಲೇ ಯಾರೋಬ್ಬರೂ ರಸ್ತೆಗೆ ಇಳಿದು ಪ್ರತಿಭಟನೆ ನಡೆಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಪಟ್ಟಣದ ಗಲ್ಲಿ ಗಲ್ಲಿಯಲ್ಲೂ ಗಸ್ತು ತಿರುಗಿದ ಪೊಲೀಸರು ನಿಷೇದಾಜ್ಞೆ   ಹಿನ್ನೆಲೆಯಲ್ಲಿ ಗುಂಪು ಸೇರದಂತೆ ಎಚ್ಚರ ವಹಿಸಿ, ಪೊಲೀಸ್ ವಾಹನ ಹಾಗೂ ಆಟೋಗಳಿಗಳಿಗೆ ಮೈಕ್ ಕಟ್ಟಿಸಿ ಗುಂಪು ಸೇರದಂತೆ ಪ್ರಚಾರ ನಡೆಸಿದರು.ತಮಿಳು ಕಾಲೋನಿಗಳಲ್ಲಿ

ಪೊಲೀಸ್ ಕಣ್ಗಾವಲು :

ಪಟ್ಟಣದ ತಮಿಳರ ಮನೆಗಳ ಮೇಲೆ ಸೋಮವಾರ ಪ್ರತಿಭಟನಾಕಾರರು ದಾಳಿ ಮಾಡಿ ಗಲಭೆ ನಡೆಸಿದ ಹಿನ್ನೆಲೆಯಲ್ಲಿ ಪಟ್ಟಣದ ತಮಿಳು ಕಾಲೋನಿಗಳಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಬಂದೋಬಸ್ತ್‍ನ್ನು ಮಾಡಲಾಗಿತ್ತು. ಕೆಎಸ್‍ಆರ್‍ಪಿ, ವಜ್ರ ಹಾಗೂ ಡಿಆರ್ ತುಕಡಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಪಟ್ಟಣದ ಅಂಚೆ ಕಚೇರಿ, ಹಳೆ ಬಸ್ ನಿಲ್ದಾಣ, ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣ, ಡಾ.ರಾಜಕುಮಾರ್ ವೃತ್ತ, ಐದು ದೀಪದ ವೃತ್ತ, ಹಿರೇಮರಳಿ ವೃತ್ತ, ಅನಂತರಾಮ್ ವೃತ್ತ, ನಿವೃತ್ತ ನ್ಯಾಯಮೂರ್ತಿ ಸಿ.ಶಿವಪ್ಪ ಅವರ ಮನೆ ಮುಂದೆ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು.

 

► Follow us on –  Facebook / Twitter  / Google+

Facebook Comments

Sri Raghav

Admin