ಕಾವೇರಿ ಗಲಭೆಯಲ್ಲಿ ಆರ್‍ಎಸ್‍ಎಸ್ ಕೈವಾಡವಿದೆ ಎಂದ ಪರಮೇಶ್ವರ್ ವಿರುದ್ಧ ಬಿಜೆಪಿ ಕೆಂಡ

ಈ ಸುದ್ದಿಯನ್ನು ಶೇರ್ ಮಾಡಿ

Parameshwar

ಬೆಂಗಳೂರು, ಸೆ.17-ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತಿತರ ಕಡೆ ನಡೆದ ಗಲಭೆಯಲ್ಲಿ ಆರ್‍ಎಸ್‍ಎಸ್ ಕೈವಾಡವಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಬಿಜೆಪಿ ಕೆಂಡ ಕಾರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಶಾಸಕ ಸಿ.ಟಿ.ರವಿ ಸೇರಿದಂತೆ ಅನೇಕ ಮುಖಂಡರು ಪರಮೇಶ್ವರ್ ಹೇಳಿಕೆಯನ್ನು ಖಂಡಿಸಿದ್ದಲ್ಲದೆ, ತನಿಖೆ ನಡೆಸುವಂತೆ ನೇರ ಬಹಿರಂಗ ಸವಾಲು ಹಾಕಿದ್ದಾರೆ. ಕಾವೇರಿ ಗಲಭೆಯಲ್ಲಿ ಆರ್‍ಎಸ್‍ಎಸ್ ಸೇರಿದಂತೆ ಯಾವುದೇ ಸಂಘಟನೆಗಳ ಮುಖಂಡರ ಪಾತ್ರವಿದ್ದರೆ ರಾಜ್ಯಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಗೃಹ ಸಚಿವರು ಬಹಿರಂಗ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಪ್ರಕರಣವನ್ನು ಮುಚ್ಚಿ ಹಾಕಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಆರ್‍ಎಸ್‍ಎಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನವನು ಆಡಳಿತಾರೂಢ ಕಾಂಗ್ರೆಸ್ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರ್‍ಎಸ್‍ಎಸ್ ಕೈವಾಡವಿದ್ದರೆ ತನಿಖೆ ನಡೆಸಲು ಮೀನಾಮೇಷವೇಕೆ ಎಂದು ಪ್ರಶ್ನಿಸಿದ್ದಾರೆ.

ಆರ್‍ಎಸ್‍ಎಸ್ ದೇಶಭಕ್ತ ಸಂಘಟನೆ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಆರ್‍ಎಸ್‍ಎಸ್ ದೇಶಭಕ್ತ ಸಂಘಟನೆ. ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಾಧ್ಯವಾಗದ ಪರಮೇಶ್ವರ್ ಆಧಾರ ರಹಿತ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಆರ್‍ಎಸ್‍ಎಸ್ ಎಂದಿಗೂ ಪ್ರಚೋದನೆಗೆ ಕುಮ್ಮಕ್ಕು ನೀಡುವುದಿಲ್ಲ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಹೋದರತೆ ಬೆಳೆಸುತ್ತದೆ. ಗೃಹ ಖಾತೆ ನಿಭಾಯಿಸಲು ಸಾಧ್ಯವಿಲ್ಲದ ಪರಮೇಶ್ವರ್ ಹೈಕಮಾಂಡ್ ಮೆಚ್ಚಿಸಲು ಇಂತಹ ಹೇಳಿಕೆ ನೀಡಿರಬಹುದು. ಆರ್‍ಎಸ್‍ಎಸ್ ಕಾರ್ಯಕರ್ತರು ಭಾಗಿಯಾಗಿರುವುದಕ್ಕೆ ಸಾಕ್ಷಿಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಯಾರೊಬ್ಬರಿಗೂ ಶೋಭೆ ತರುವುದಿಲ್ಲ. ಸರ್ಕಾರದ ಕೆಳಗೆ ಅನೇಕ ತನಿಖಾ ಸಂಸ್ಥೆಗಳಿದ್ದು, ಈವರೆಗೂ ಏಕೆ ತನಿಖೆ ನಡೆಸಲು ಮುಂದಾಗಿಲ್ಲ ಎಂದು ಪ್ರಶ್ನಿಸಿದರು. ಇನ್ನು ಮುಂದಾದರೂ ಆರ್‍ಎಸ್‍ಎಸ್ ವಿರುದ್ಧ ಆರೋಪಿಸುವಾಗ ಎಚ್ಚರಿಕೆಯಿಂದ ಮಾತನಾಡಿದರೆ ಅವರ ಬಗ್ಗೆ ಗೌರವ ಹೆಚ್ಚುತ್ತದೆ. ಇಲ್ಲದಿದ್ದರೆ ನಾವೂ ಕೂಡ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದು ಯಡಿಯೂರಪ್ಪ ಎಚ್ಚರಿಸಿದರು.

ಕ್ಷಮಾಪಣೆ ಕೇಳಲಿ:

ಇನ್ನು ದೂರವಾಣಿ ಮೂಲಕ ಈ ಸಂಜೆಯೊಂದಿಗೆ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಗೃಹ ಇಲಾಖೆಯನ್ನು ನಿಭಾಯಿಸುವಲ್ಲಿ ವಿಫಲರಾಗಿರುವ ಪರಮೇಶ್ವರ್ ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಹಿಂದೆ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಕೂಡ ಆರ್‍ಎಸ್‍ಎಸ್ ವಿರುದ್ಧ ಇಂತಹ ಸುಳ್ಳು ಹೇಳಿಕೆ ನೀಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದರು ಎಂಬುದನ್ನು ಪರಮೇಶ್ವರ್ ಮರೆಯಬಾರದು. ಅವರು ರಾಜ್ಯದ ಗೃಹ ಮಂತ್ರಿಯೇ ಹೊರತು, ಕಾಂಗ್ರೆಸ್ ಪಕ್ಷದ ಗೃಹ ಮಂತ್ರಿಯಲ್ಲ ಎಂಬುದನ್ನು ತಿಳಿಯಬೇಕು.

ಆರ್‍ಎಸ್‍ಎಸ್ ಕೈವಾಡವಿದ್ದರೆ ಗುಪ್ತಚರ ವಿಭಾಗ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಕೈ ಕೆಳಗೆ ಕೆಲಸ ಮಾಡುತ್ತದೆ. ಈ ವೇಳೆಗೆ ಅದು ಬಹಿರಂಗ ಪಡಿಸದೆ ಸುಮ್ಮನಿರುತ್ತಿರಲಿಲ್ಲ. ಕಾವೇರಿ ಸಮಸ್ಯೆ ಮತ್ತು ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ವಿಫಲರಾಗಿರುವ ಪರಮೇಶ್ವರ್ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಮೊದಲು ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಶೆಟ್ಟರ್ ಆಗ್ರಹಿಸಿದರು.ಒಂದು ವೇಳೆ ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಪರಮೇಶ್ವರ್‍ಗೆ ಡಿವಿಎಸ್ ಸವಾಲು :

ಕಾವೇರಿ ನೀರಿನ ವಿಚಾರದಲ್ಲಿ ನಡೆದ ಗಲಭೆಗಳಿಗೆ ಆರ್.ಎಸ್.ಎಸ್ ಕಾರಣ ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಿಡಿ ಕಾರಿದ್ದಾರೆ. ಆರೋಪಕ್ಕೆ ದಾಖಲೆಗಳಿದ್ದರೆ ಬಹಿರಂಗಪಡಿಸಿ ಎಂದು ನೇರ ಸವಾಲೆಸೆದಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛತಾ ಅಭಿಯಾನ, ಅವರ ಕನಸ್ಸನ್ನು ನನಸು ಮಾಡಲು ದೇಶದಾದ್ಯಂತ ಎಲ್ಲರು ಪ್ರಯತ್ನಿಸುತ್ತಿದ್ದಾರೆ, ನಾವು ಇಂದು ವಿವಿಧೆಡೆ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದೇವೆ, ಅಲ್ಲದೆ ಅಶಕ್ತರಿಗೆ ನೆರವಾಗುವ ಕೆಲಸ ಮಾಡಲಿದ್ದೇವೆ ಎಂದರು.

ಒಂದು ಜವಾಬ್ಧಾರಿಯುತ ಸ್ಥಾನದಲ್ಲಿರುವವರು ತಮ್ಮ ಸ್ಥಾನದ ಜವಾಬ್ದಾರಿ ಅರಿತು ಮಾತನಾಡಬೇಕು.ರಾಜ್ಯಸಕಾ9ರ ಕಾವೇರಿ ನೀರಿನ ವಿಚಾರದಲ್ಲಿ ನಡೆದ ಗಲಭೈಗಲಾಟೆಗಳನ್ನು ತಡೆಯುವಲ್ಲಿ ವಿಫಲವಾಗಿದೆ. ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು, ಆರ್.ಎಸ್.ಎಸ್ ಹಾಗೂ ಬಿಜೆಪಿಯವರ ಮೇಲೆ ಕಾಂಗ್ರೆಸ್ ನವರು ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಗೃಹ ಸಚಿವ ಪರಮೇಶ್ವರ್ ಆರ್.ಎಸ್.ಎಸ್ ಕೈವಾಡವಿರುವ ಬಗ್ಗೆ ಸ್ಪಷ್ಟ ಮಾಹಿತಿ ದಾಖಲೆಗಳೊಂದಿಗೆ ಮಾತನಾಡಲಿ ಎಂದು ಸವಾಲೆಸೆದ ಸದಾನಂದಗೌಡ, ಇಂದೊಂದು ಅತ್ಯಂತ ನಿಷ್ಕೃಷ್ಟ ರಾಜಕಾರಣ. ಇಂಥಹ ರಾಜಕಾರಣವನ್ನೂ ಎಂದೂ ನೋಡಿಲ್ಲ ಎಂದರು. ಇತ್ತೀಚೆಗೆ ಡಾ.ಜಿ ಪರಮೇಶ್ವರ್ ಗೃಹ ಸಚಿವ ಸ್ಥಾನದಲ್ಲಿ ಕೂರುವ ಅಹ9ತೆ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆಯಿತ್ತಿರುವ ವಿದ್ಯಮಾನಗಳೇ ನಿದರ್ಶನ, ಕಾನೂನು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸುವಲ್ಲಿ ಸಾಕಷ್ಟು ಬಾರಿ ಅವರು ವೈಫಲ್ಯ ಕಂಡಿದ್ದಾರೆ ಎಂದು ಗೃಹ ಸಚಿವರ ವಿರುದ್ದ ಸದಾನಂದಗೌಡರು ಹರಿಹಾಯ್ದರು.

ಜವಾಬಾರಿ ಸ್ಥಾನದಲ್ಲಿರುವ ಗೃಹಸಚಿವರು ಬಾಲಿಶ ಹೇಳಿಕೆ ನೀಡಿದ್ದಾರೆ. ಕಾವೇರಿ ವಿಚಾರದಲ್ಲಿ ಸರಕಾರ ತಪ್ಪು ಮಾದಿದ್ದು ಅದನ್ನು ಮುಚ್ಚಿ ಹಾಕಲು ಪ್ರಧಾನಿ ಮತ್ತು ಆರ್‍ಎಸ್‍ಎಸ್ ವಿರುದ್ಧ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ.ಸಾಕ್ಷ್ಯವಿದ್ದರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಿ. ಇಂತಹ ಆರೋಪ ಮಾಡಿ ರಾಜಕಾರಣ ಮಾಡುವುದನ್ನು ರಾಜ್ಯದ ಜನತೆ ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಇನ್ನು ಪರಮೇಶ್ವರ್ ಹೇಳಿಕೆಗೆ ಕೇಂದ್ರ ಸಚಿವ ಅನಂತ್‍ಕುಮಾರ್, ಸಿ.ಟಿ.ರವಿ ಸೇರಿದಂತೆ ಅನೇಕರು ಕಿಡಿಕಾರಿದ್ದು, ಕ್ಷಮಾಪಣೆ ಕೇಳುವಂತೆ ಒತ್ತಾಯಿಸಿದ್ದಾರೆ.

Facebook Comments

Sri Raghav

Admin