ಕಾವೇರಿ ನೀರಿಗಾಗಿ ಸುಪ್ರೀಂಗೆ ತಮಿಳುನಾಡು ಅರ್ಜಿ, ಸಿಎಂ ಬೇಸರ, ರಾಜ್ಯದ ವಕೀಲರಿಂದ ತಕ್ಕ ಉತ್ತರ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಜು.5-ಕಾವೇರಿ ವಿವಾದದಲ್ಲಿ ತಮಿಳುನಾಡು ಮತ್ತೆ ತೆಗೆದಿರುವ ಪ್ರಸ್ತಾವನೆಗೆ ರಾಜ್ಯದ ಪರ ವಕೀಲರು ಉತ್ತರ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ನಮ್ಮ ರಾಜ್ಯದ ವಕೀಲರು ಕಾಳಜಿ ವಹಿಸಿದ್ದಾರೆ. ತಮಿಳುನಾಡಿನ ತಕರಾರು ಅರ್ಜಿಗೆ ನಮ್ಮ ವಕೀಲರು ಕಾನೂನಾತ್ಮಕವಾಗಿ ಉತ್ತರ ನೀಡಲಿದ್ದಾರೆ ಎಂದಷ್ಟೇ ಹೇಳಿದರು.  ಕಳೆದ ವರ್ಷ ಭೀಕರ ಬರಪರಿಸ್ಥಿತಿ ಇದ್ದುದ್ದರಿಂದ ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರು ಬಿಡಲಾಗಲಿಲ್ಲ. ಕರ್ನಾಟಕದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಆದಾಗ್ಯೂ ಕಾವೇರಿ ನೀರು ಬಿಡುವಂತೆ ತಮಿಳುನಾಡು ತಗಾಧೆ ತೆಗೆದಿತ್ತು. ಸುಪ್ರೀಂಕೋರ್ಟ್ ಸಹ ಪದೇ ಪದೇ ನೀರು ಬಿಡುವಂತೆ ಆದೇಶ ನೀಡಿದ್ದರಿಂದ ರಾಜ್ಯದಲ್ಲಿ ಸಾಕಷ್ಟು ಹೋರಾಟಗಳು, ಗಲಭೆಗಳು ನಡೆದಿದ್ದವು.

ಸ್ವಲ್ಪ ದಿನಗಳ ವಿರಾಮದ ನಂತರ ತಮಿಳುನಾಡು ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕಳೆದ ವರ್ಷ ಬಿಡಬೇಕಿದ್ದ ನೀರಿನ ಬಾಕಿ ಮತ್ತು ಈ ವರ್ಷದಲ್ಲಿ ಜುಲೈವರೆಗೂ ಹರಿಸಬೇಕಿದ್ದ ನೀರನ್ನು ಕರ್ನಾಟಕ ಹರಿಸಿಲ್ಲ ಎಂದು ತಕರಾರು ಸಲ್ಲಿಸಿದೆ. ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ ಕಾನೂನು ಸಂಕಷ್ಟಕ್ಕೆ ಹೆದರಿ ಕರ್ನಾಟಕ ಸ್ವಲ್ಪ ಸ್ವಲ್ಪ ನೀರನ್ನು ಹರಿಸುತ್ತಲೇ ಬಂದಿದೆ. ಈ ಬಾರಿಯೂ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕಳೆದ ವರ್ಷಕ್ಕಿಂತಲೂ ಕೆಆರ್‍ಎಸ್‍ನಲ್ಲಿ 10 ಅಡಿಯಷ್ಟು ಕಡಿಮೆ ನೀರಿದೆ. ಆದರೂ ತಮಿಳುನಾಡು ಕಾವೇರಿ ನೀರಿಗಾಗಿ ತಕರಾರು ಸಲ್ಲಿಸಿ ಆತಂಕ ಮತ್ತು ಸಂಕಷ್ಟದ ಪರಿಸ್ಥಿತಿ ನಿರ್ಮಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ವಕೀಲರು ಉತ್ತರ ಹೇಳಲಿದ್ದಾರೆ ಎಂದು ಹೇಳಿದ್ದಾರೆ.

ತಮಿಳುನಾಡು ಅರ್ಜಿ: ಕರ್ನಾಟಕ ಸರಿಯಾಗಿ ಕಾವೇರಿ ನೀರನ್ನು ಹರಿಸುತ್ತಿಲ್ಲ. ಕಳೆದ 2016ರಿಂದ ನಮಗೆ ನೀಡಬೇಕಾಗಿರುವ ನೀರಿನ ಪ್ರಮಾಣದಲ್ಲಿ 5 ಟಿಎಂಸಿ ನೀರು ಬಿಟ್ಟಿಲ್ಲ ತಕ್ಷಣ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕು ಎಂದು ತಮಿಳುನಾಡು ಸರ್ಕಾರ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.  ಈಗಾಗಲೇ ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ಕರ್ನಾಟಕಕ್ಕೆ ತಮಿಳುನಾಡಿನ ಈ ಕ್ಯಾತೆಯಿಂದ ಮತ್ತೊಮ್ಮೆ ಸಂಕಷ್ಟ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಮಿಳುನಾಡು ಸಲ್ಲಿಸಿರುವ ಈ ಅರ್ಜಿ ಜುಲೈ 11ರಂದು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ. ಹಾಗಾಗಿ ಸುಪ್ರೀಂಕೋರ್ಟ್‍ನ ತೂಗುಗತ್ತಿ ಕರ್ನಾಟಕ ಸರ್ಕಾರದ ಮೇಲೆ ತೂಗಾಡುತ್ತಿದೆ. ಮುಂಗಾರು ಆರಂಭವಾಗಿ ತಿಂಗಳುಗಳೇ ಕಳೆದರೂ ಕರ್ನಾಟಕದ ಯಾವುದೇ ಜಲಾಶಯಗಳಿಗೆ ಭರ್ತಿಯಾಗಿಲ್ಲ. ಇನ್ನು ಕೆಲವು ದಿನ ಮಳೆ ಈ ರೀತಿ ಮುಗಿಲು ಸೇರಿದರೆ ಕರ್ನಾಟಕದಲ್ಲೂ ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ. ಪ್ರತಿ ವರ್ಷ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬರುತ್ತಿದ್ದ ವಾಡಿಕೆ ಮಳೆ ಈ ವರ್ಷ ಬರದೆ ಇರುವುದು ತೀವ್ರ ಆತಂಕ ಸೃಷ್ಟಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin