ಕಾವೇರಿ ಬಿಕ್ಕಟ್ಟು : ನಾಳೆ ವಿಶೇಷ ಅಧಿವೇಶನ, ಉಭಯ ಸದನಗಳಲ್ಲಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Kaveri

ಬೆಂಗಳೂರು, ಸೆ.22– ಸುಪ್ರೀಂಕೋರ್ಟ್‍ನ ಮಾರಕ ತೀರ್ಪಿನ ಹಿನ್ನೆಲೆಯಲ್ಲಿ ನಾಳೆ ನಡೆಯುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನದಲ್ಲಿ ಕಾವೇರಿ ಕಾವು ಕಂಡುಬರಲಿದೆ.  ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕಿರುವ ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿರುವ ಬಗ್ಗೆ ಇದುವರೆಗೂ ಸದನದ ಹೊರಗೆ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ದವು. ನಾಳೆ ನಡೆಯುವ ವಿಶೇಷ ಅಧಿವೇಶನದಲ್ಲಿ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಕಾವೇರಿ ವಿಚಾರದಲ್ಲಿ ಚರ್ಚೆ ಮಾಡುವುದರ ಜತೆಗೆ ಒಗ್ಗಟ್ಟಿನ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.

ಸುಪ್ರೀಂಕೋರ್ಟ್ ತೀರ್ಪಿನಿಂದ ರಾಜ್ಯಕ್ಕೆ ನಿರಂತರವಾಗಿ ಹಿನ್ನಡೆಯಾಗುತ್ತಿದೆ. ಇದರಿಂದ ರಾಜ್ಯದ ಜಲಾಶಯಗಳು ಖಾಲಿಯಾಗುತ್ತಿದ್ದು, ಕುಡಿಯುವ ನೀರಿಗೂ ತೊಂದರೆಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು, ಜನಪ್ರತಿನಿಧಿಗಳು, ವಿವಿಧ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ನಿನ್ನೆ ಸಂಜೆ ನಡೆದ ಸರ್ವಪಕ್ಷಗಳ ಸಭೆಗೆ ಗೈರು ಹಾಜರಾಗಿದ್ದ ಪ್ರತಿಪಕ್ಷ ಬಿಜೆಪಿ ನಾಳಿನ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ಘೋಷಿಸಿದೆ.

ಹೀಗಾಗಿ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ, ವಾಕ್ಸಮರ ನಡೆದರೂ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸಬೇಕಿದೆ.  ಕೇಂದ್ರ ಸರ್ಕಾರಕ್ಕೆ ರಾಜ್ಯದ ಒಗ್ಗಟ್ಟಿನ ಸಂದೇಶ ರವಾನಿಸುವ ಉದ್ದೇಶದಿಂದಲೇ ತುರ್ತಾಗಿ ವಿಶೇಷ ಅಧಿವೇಶನವನ್ನು ಸರ್ಕಾರ ಕರೆದಿದೆ. ಅಧಿವೇಶನದಲ್ಲಿ ಇದುವರೆಗೂ ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆ ಪರಾಮರ್ಶೆ ಮಾಡುವುದರ ಜತೆಗೆ ಮುಂದೆ ಯಾವ ನಿಲುವು ತಳೆಯಬೇಕೆಂಬ ಬಗ್ಗೆಯೂ ನಿರ್ಧಾರವಾಗಲಿದೆ.
ಅಲ್ಲದೆ, ಸುಪ್ರೀಂಕೋರ್ಟ್ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿರುವುದರ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಜತೆಗೆ ನಿರ್ವಹಣಾ ಮಂಡಳಿ ರಚನೆ ಮಾಡದಂತೆ ಕೇಂದ್ರದ ಮೇಲೆ ಒತ್ತಡ ತರಲು ನಾಳಿನ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದುವರೆಗೂ ಸದನದ ಹೊರಗೆ ಕಾವೇರಿದ ಕಾವೇರಿ ವಿವಾದ ನಾಳೆ ಅಧಿವೇಶನದಲ್ಲೂ ಕೂಡ ಪ್ರಮುಖವಾಗಿ ಪ್ರತಿಧ್ವನಿಸಿ ಕಾವೇರಿದ ವಾತಾವರಣ ಉಂಟುಮಾಡಿದರೂ ಅಚ್ಚರಿ ಪಡಬೇಕಿಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೂ ಕಾವೇರಿ ವಿಚಾರದಲ್ಲಿ ಕರ್ನಾಟಕ ಒಂದು ಎಂಬ ಸಂದೇಶವನ್ನು ನಾಳಿನ ಅಧಿವೇಶನದ ಮೂಲಕ ಸಾರಲು ಉದ್ದೇಶಿಸಲಾಗಿದೆ.  ಕಾವೇರಿ ವಿವಾದದ ವಿಚಾರದಲ್ಲಿ ರಾಜ್ಯ ಕೈಗೊಳ್ಳಬೇಕಾಗಿರುವ ಕಾನೂನು ಹೋರಾಟ, ರಾಜಕೀಯ ನಿಲುವು ಹಾಗೂ ಆಡಳಿತಾತ್ಮಕ ನಿರ್ಧಾರಗಳ ಬಗ್ಗೆಯೂ ಉಭಯ ಸದನಗಳಲ್ಲಿ ಚರ್ಚೆ ನಡೆದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin