ಕಾವೇರಿ ಬಿಕ್ಕಟ್ಟು : ಮತ್ತೆ ಪ್ರಧಾನಿಗೆ ದೇವೇಗೌಡರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Nagaraj-01
ಬೆಂಗಳೂರು, ಅ.7- ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟನ್ನು ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಭೇಟಿಯಾಗಿ ಮನವಿ ಮಾಡುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿಯನ್ನು ಸುಪ್ರೀಂಕೋರ್ಟ್‍ನ ವಕೀಲ ವಿಜಯ್‍ಕುಮಾರ್ ಅವರಿಂದ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸ್ವೀಕರಿಸಿದ ಸಂದರ್ಭದಲ್ಲಿ ಗೌಡರು ಈ ವಿಷಯ ತಿಳಿಸಿದರು. ನಾಡಹಬ್ಬ ದಸರಾ ಮುಗಿದ ಬಳಿಕ ನವದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನರ್ಮದಾ ನದಿ ವಿವಾದದ ವಿಚಾರದಲ್ಲಿ ಕೈಗೊಂಡ ತೀರ್ಮಾನದಂತೆ ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟಿನಲ್ಲೂ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸುವುದಾಗಿ ಗೌಡರು ತಿಳಿಸಿದರು.

ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ನಡುವಿನ ಬಿಕ್ಕಟ್ಟಿನ ವಿಚಾರದಲ್ಲಿ ನಾನು ಪ್ರಧಾನಿಯಾಗಿದ್ದಾಗ ಸೂಕ್ತ ತೀರ್ಮಾನ ಕೈಗೊಂಡಿರುವುದಾಗಿ ಅವರು ಹೇಳಿದರು.ಅದೇ ರೀತಿ ಮೋದಿಯವರು ಕೂಡ ಕಾವೇರಿ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕು. ತಮಿಳುನಾಡಿನ ರಾಜಕೀಯ ಒತ್ತಡಕ್ಕೆ ಮಣಿಯುವ ಅಗತ್ಯವಿಲ್ಲ ಎಂದು ಗೌಡರು ಹೇಳಿದರು.ಕಾವೇರಿ ಜಲವಿವಾದದ ವಿಚಾರಣೆಯನ್ನು ಸುಪ್ರೀಂಕೋರ್ಟ್‍ನ ವಿಸ್ತೃತ ಪೀಠದಲ್ಲಿ ನಡೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋರಬೇಕು. ಈ ಎರಡೂ ಸರ್ಕಾರಗಳಲ್ಲಿ ಯಾವುದೇ ಒಂದು ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ವಿಸ್ತೃತ ಪೀಠಕ್ಕೆ ಕೋರಿಕೆ ಸಲ್ಲಿಸಿದರೆ ಅದು ಸಾಧ್ಯವಾಗಬಹುದು ಎಂದು ಮಾಜಿ ಪ್ರಧಾನಿ ಸಲಹೆ ಮಾಡಿದರು.

ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿಗೆ ಸಂಬಂಧಿಸಿದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ಅ.18ಕ್ಕೆ ಸುಪ್ರೀಂಕೋರ್ಟ್‍ನಲ್ಲಿ ನಡೆಯಲಿದೆ.ಅದಕ್ಕೆ ಯಾವ ರೀತಿ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂಬುದು ಗೊತ್ತಿಲ್ಲ ಎಂದರು.ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ 1924ರಲ್ಲಿ ಕಾವೇರಿ ನದಿ ನೀರು ಹಂಚಿಕೆ ಒಪ್ಪಂದ ಇನ್ನೂ ರದ್ದಾಗಿಲ್ಲ. ರದ್ಧತಿಗೆ ಎರಡು ಅವಕಾಶಗಳು ರಾಜ್ಯಕ್ಕೆ ದೊರೆತಿದ್ದವು. ಒಂದು ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 1924ರ ಒಪ್ಪಂದ ರದ್ಧತಿಯನ್ನು ಕೋರಬಹುದಿತ್ತು. ಮತ್ತೊಂದು ರಾಜ್ಯ ಪುನರ್‍ವಿಂಗಡಣೆ ಸಂದರ್ಭದಲ್ಲಿ ಒಪ್ಪಂದ ಬದಲಾವಣೆಗೆ ಕೋರುವ ಅವಕಾಶವಿತ್ತು. ಆದರೆ ಆಗಿನ ಸರ್ಕಾರಗಳು ಗಮನ ಹರಿಸಲಿಲ್ಲ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೋ.ಶ್ರೀನಿವಾಸಯ್ಯಅವರ ಗಾಂಧಿ ಸಾಹಿತ್ಯ ಸಂಘದ ಮೂಲಕ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಸಂಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಧರ್ಮಸಿಂಗ್ ಅವರು ಆಡಳಿತ ನಡೆಸುತ್ತಿದ್ದರು.ಮಲ್ಲಿಕಾರ್ಜುನ ಖರ್ಗೆ ಅವರು ನೀರಾವರಿ ಸಚಿವರಾಗಿದ್ದರು. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದರು. ಗಾಂಧಿ ಸಾಹಿತ್ಯ ಸಂಘ ಸಲ್ಲಿಸಿರುವ ಅರ್ಜಿಗೆ ಬೆಂಬಲವಾಗಿ ಸರ್ಕಾರ ಸುಪ್ರೀಂಕೋರ್ಟ್‍ನ ಪ್ರಮಾಣಪತ್ರ ಸಲ್ಲಿಸುವಂತೆ ನಾನು ಮಾಡಿದ ಸಲಹೆಯನ್ನು ಸಮ್ಮಿಶ್ರ ಸರ್ಕಾರ ಪರಿಗಣಿಸಲಿಲ್ಲ. ಪರಿಣಾಮ ಗಾಂಧಿ ಸಾಹಿತ್ಯ ಸಂಘದ ಅರ್ಜಿ ವಜಾ ಆಯಿತು ಎಂದು ಅವರು ಹೇಳಿದರು.ನನಗೆ ಅರಿವಿರುವಂತೆ ಪ್ರಪಂಚದಲ್ಲಿ ಅಂತರ್‍ರಾಜ್ಯ ವಿವಾದದಲ್ಲಿ ಮಧ್ಯಂತರ ತೀರ್ಪು ನೀಡಿರುವ ನಿದರ್ಶನಗಳಿಲ್ಲ. ಆದರೆ ನಮ್ಮ ಪಾಲಿಗೆ ಮಧ್ಯಂತರ ತೀರ್ಪುಗಳು ಬಂದು ಸಂಕಷ್ಟ ಎದುರಿಸುವಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್‍ಕುಮಾರ್ ಅವರು, ಕಾವೇರಿ ಜಲಾನಯನ ಭಾಗದ ಜಿಲ್ಲೆಗಳಲ್ಲಿ 2.20 ಕೋಟಿ ಜನಸಂಖ್ಯೆ ಇದೆ. ಪ್ರತಿಯೊಬ್ಬರಿಗೆ ವಾರ್ಷಿಕ 70 ಸಾವಿರ ಲೀಟರ್ ನೀರು ಬೇಕು. ಜೊತೆಗೆ ಪ್ರಾಣಿ ಪಕ್ಷಗಳಿಗೂ ಕುಡಿಯುವ ನೀರು ಬೇಕು. ಜಾಗತಿಕ ತಾಪಮಾನ ಏರಿಕೆ, ಅಂತರ್ಜಲ ಕುಸಿತ, ಮಳೆ ಪ್ರಮಾಣದಲ್ಲಿ ಇಳಿಕೆ ಈ ಎಲ್ಲಾ ವಿಚಾರಗಳು ನ್ಯಾಯಾಧಿಕರಣದ ತೀರ್ಪಿನಲ್ಲಿ ಪರಿಗಣಿತವಾಗಿಲ್ಲ. ಈ ಎಲ್ಲಾ ವಿಚಾರಗಳು ವಿಸ್ತೃತ ಪೀಠದಲ್ಲಿ ವಿಚಾರಣೆಯಾಗಬೇಕು ಎಂದು ಹೇಳಿದರು.ಅಲ್ಲದೆ ದೆಹಲಿಗೆ ಕುಡಿಯುವ ನೀರಿನ ಬಳಕೆಗಾಗಿ ಯಮುನಾ ನದಿ ನೀರು ಬಳಕೆ ಮಾಡಿಕೊಂಡಿರುವ ಒಪ್ಪಂದದಂತೆ ಕಾವೇರಿ ನದಿಯಿಂದ ಬೆಂಗಳೂರು ಸೇರಿದಂತೆ ಜಲಾನಯನ ಭಾಗದ ಜಿಲ್ಲೆಗಳ ಕುಡಿಯುವ ನೀರು ಹಂಚಿಕೆಯಾಗಬೇಕು ಎಂದು ಹೇಳಿದರು.

► Follow us on –  Facebook / Twitter  / Google+

 

Facebook Comments

Sri Raghav

Admin