ಕಾವೇರಿ-ಮಹದಾಯಿ ವಿವಾದ : ನಾಳೆ ಸರ್ವಪಕ್ಷ ಸಭೆ ಕರೆದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ
All-Party-Meeting
ಸಾಂಧರ್ಭಿಕ ಚಿತ್ರ

ಬೆಂಗಳೂರು, ಆ.13-ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ಪದೇ ಪದೇ ತೆಗೆಯುತ್ತಿರುವ ತಗಾದೆ ಹಾಗೂ ಮಹದಾಯಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶವಾಗದ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಪರಿಸ್ಥಿತಿಯಲ್ಲಿ ಈ ಎರಡು ಗಂಭೀರ ವಿಷಯಗಳ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸರ್ವಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಶೇ.50ಕ್ಕಿಂತ ಕಡಿಮೆ ಮಳೆಯಾಗಿ ಬರಗಾಲದ ಛಾಯೆ ಆವರಿಸಿದೆ. ಕೆಆರ್‍ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ನೀರು ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ. ಜಲಾನಯನ ಪ್ರದೇಶದ ರೈತರ ಬೆಳೆಗಳಿಗೆ ನೀರಿಲ್ಲ. ಪ್ರಸ್ತುತ ಜಲಾಶಯದಲ್ಲಿರುವ ನೀರನ್ನು ಕೆರೆಕಟ್ಟೆಗಳಿಗೆ ಬಿಡಲಾಗುತ್ತಿದ್ದು, ಇದಕ್ಕೂ ತಮಿಳುನಾಡು ತಗಾದೆ ತೆಗೆಯುವ ಸಾಧ್ಯತೆ ಇದೆ.   ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಕೊರತೆ ಇದ್ದರೂ ತಮಿಳುನಾಡು ಬೆಳೆಗಳಿಗೆ ನೀರು ಕೇಳುತ್ತಿದೆ. ಈ ಸಂದರ್ಭದಲ್ಲಿ ಕಾನೂನು ಹೋರಾಟ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸರ್ವಪಕ್ಷಗಳ ಮುಖಂಡರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಲಿದ್ದಾರೆ. ಕಾವೇರಿ ನದಿ ಪಾತ್ರದ ಜನಪ್ರತಿನಿಧಿಗಳ ಸಭೆಯನ್ನೂ ಕೂಡ ನಡೆಸಲಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರೊದಗಿಸಲು ಪ್ರಮುಖವಾದ ಮಹದಾಯಿ ಯೋಜನೆಗೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಈ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯಪ್ರವೇಶದ ಅಗತ್ಯವಿದೆ ಎಂಬ ಆಗ್ರಹವಿದೆ.   ಗೋವಾ ಚುನಾವಣೆಯ ನಂತರ ಅಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಸಿದ್ದರಾಮಯ್ಯನವರು ಮೂರು ಬಾರಿ ಮಹದಾಯಿ ಕುರಿತು ಮಾತುಕತೆ ನಡೆಸಲು ಪತ್ರ ಬರೆದಿದ್ದಾರೆ. ಗೋವಾ ಜಲಸಂಪನ್ಮೂಲ ಸಚಿವ ಕನ್ನಡಿಗರ ಸ್ವಾಭಿಮಾನ ಕೆರಳಿಸುವ ಮಾತುಗಳನ್ನಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಹದಾಯಿ ವಿಷಯ ಸಂಬಂಧ ಸರ್ವಪಕ್ಷಗಳ ಸಭೆ ನಡೆಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಪಕ್ಷದ ಮುಖಂಡರು ಈ ವಿವಾದ ಸಂಬಂಧ ಯಾವ ನಿಲುವು ತಳೆಯಲಿದ್ದಾರೆ. ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯಿಸಿ, ಈ ಸಮಸ್ಯೆಯನ್ನು ಬಗೆಹರಿಸಿ ಉತ್ತರಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವರೇ ಎಂಬುದನ್ನು ಕಾದುನೋಡಬೇಕು.

ಮಹದಾಯಿ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಲು ಇದು ಸೂಕ್ತ ಸಮಯವಾಗಿದೆ. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರು ಇಲ್ಲಿರುವ ಸಂದರ್ಭದಲ್ಲಿ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಮುಖಂಡರು ದನಿ ಎತ್ತಿದರೆ , ಗೋವಾ ಬಿಜೆಪಿ ಮುಖಂಡರೊಂದಿಗೆ ಅಮಿತ್‍ಷಾ ಮಾತನಾಡಿ ಸಮಸ್ಯೆ ಬಗೆಹರಿಸುವ ಸಾಧ್ಯತೆ ಇದೆ. ಆದರೆ ರಾಜಕೀಯ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಈ ಸಮಸ್ಯೆ ಬಗೆಹರಿಯುವುದೇ ಎಂಬುದನ್ನು ಕಾದುನೋಡಬೇಕು.

Facebook Comments

Sri Raghav

Admin