ಕಾವೇರಿ ಮುಷ್ಕರದ ಎಫೆಕ್ಟ್, 23 ದಿನದಲ್ಲಿ 20,000 ಕೋಟಿ ನಷ್ಟ, ಕೈಗಾರಿಕಾ ಬೆಳವಣಿಗೆ ಕೊಡಲಿ ಪೆಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Kaveir

ಬೆಂಗಳೂರು, ಅ.6- ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆಯಂತೆ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಉಂಟಾದ ವಿವಾದದಿಂದ 25,000 ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ್ದು ಕೈಗಾರಿಕಾ ಬೆಳವಣಿಗೆ ಕೊಡಲಿ ಪೆಟ್ಟು ಬಿದ್ದಿದೆ.ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರವೊಂದರಲ್ಲೇ 23 ದಿನದಲ್ಲಿ ಸರಿ ಸುಮಾರು 18ರಿಂದ 20,000 ಕೋಟಿ ನಷ್ಟವಾಗಿದ್ದರೆ, ಇತರ ಭಾಗಗಳಲ್ಲಿ 5,000 ಕೋಟಿ ರೂ.ಗಳಿಗೂ ಅಧಿಕ ಲುಕ್ಸಾನು ಉಂಟಾಗಿದೆ.

ಹೂಡಿಕೆದಾರರ ಹಾಗೂ ಉದ್ದಿಮೆದಾರರ ಸ್ವರ್ಗವೆಂದೇ ಖ್ಯಾತಿ ಪಡೆದಿದ್ದ ಬೆಂಗಳೂರಿನಲ್ಲಿ ಈಗ ಪದೇ ಪದೇ ಬಂದ್, ಮುಷ್ಕರ , ಚಳವಳಿ ನಡೆಯುತ್ತಿರುವುದರ ಪರಿಣಾಮ ಈ ಮಹಾನಗರಿಗೆ ದೇಶ-ವಿದೇಶಗಳ ಖ್ಯಾತ ಉದ್ಯಮಿಗಳು , ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಮೀನಾಮೇಷ ಎಣಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೈಗಾರಿಕೋದ್ಯಮದಲ್ಲಿ ಭಾರೀ ಪರಿಣಾಮ ಎದುರಾಗುವುದು ಕಟ್ಟಿಟ್ಟ ಬುತ್ತಿ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‍ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ವೇಳೆಯೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಇಂತಹ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗುತ್ತಿರಲಿಲ್ಲ.

ಕಾನೂನು ಸಮರದಲ್ಲಿ ನಮಗೆ ಪದೇ ಪದೇ ಹಿನ್ನಡೆಯಾಗಿದ್ದರಿಂದ ಕುಪಿತಗೊಂಡ ಕನ್ನಡ ಪರ ಸಂಘಟನೆಗಳು ಬಂದ್‍ಗೆ ಕರೆ ನೀಡಿದವು. ಸೆಪ್ಟೆಂಬರ್ 13ರಿಂದ ಆರಂಭಗೊಂಡ ಕಾವೇರಿ ಕಿಚ್ಚು ತುಸು ಆರಿದ್ದು, ಅ.4ರ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ. ಅವಿನಾಭಾವ ಸಂಬಂಧ: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಏನೇ ವಿವಾದವಿದ್ದರೂ ವ್ಯಾಪಾರ ವಹಿವಾಟಿನಲ್ಲಿ ಉಭಯ ರಾಜ್ಯಗಳ ನಡುವೆ ಅನ್ಯೋನ್ಯ ಸಂಬಂಧವಿದೆ.ಚೆನ್ನೈನಲ್ಲಿ ಬಂದರು ಇರುವ ಕಾರಣ ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲೇ ಉತ್ಪಾದನೆಗೊಳ್ಳುವ ಬಹುಪಯೋಗಿ ವಸ್ತುಗಳು ದೇಶ ಮತ್ತು ವಿದೇಶಕ್ಕೆ ಇಲ್ಲಿಂದಲೇ ರಫ್ತಾಗುತ್ತವೆ.

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಗಡಿ ಕೇಂದ್ರ ಹೊಸೂರು ಮೂಲಕವೇ ರಾಜ್ಯದಿಂದ ಉತ್ಪಾದನೆಯಾಗುವ ವಸ್ತುಗಳು, ವಿದೇಶದಿಂದ ಬರುವ ಕಚ್ಚಾ ವಸ್ತುಗಳು ಚೆನ್ನೈಗೆ ಬಂದು ನಂತರವೇ ಬೆಂಗಳೂರಿಗೆ ತಲುಪುತ್ತದೆ.ಒಟ್ಟು 23 ದಿನಗಳ ಕಾಲ ನಾನಾ ರೀತಿ ಮುಷ್ಕರ, ಚಳವಳಿ, ಬಂದ್ ನಡೆದ ಪರಿಣಾಮ ಉದ್ಯಮಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಕರ್ನಾಟಕ ಕೈಗಾರಿಕೆ ವಾಣಿಜ್ಯ ಒಕ್ಕೂಟಗಳ ಅಧ್ಯಕ್ಷ ದಿನೇಶ್ ಅವರು ಹೇಳುವಂತೆ 23 ದಿನಗಳ ಕಾಲ ನಾವು ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರು ನಗರವೊಂದರಲ್ಲೇ ದಿನಕ್ಕೆ ಸಾವಿರ ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ ಎಂಬ ಅಂಕಿ ಅಂಶ ನೀಡಿದರು.
ಅದರಲ್ಲೂ ಸತತವಾಗಿ ಬಂದ್ ನಡೆದರೆ ಕೈಗಾರಿಕಾ ವಲಯವಂತೂ ತತ್ತರಿಸಿ ಹೋಗುತ್ತದೆ. ಸಾರಿಗೆ ವಹಿವಾಟು , ಕಾರ್ಮಿಕರು, ಕಚ್ಚಾ ವಸ್ತು ಸೇರಿದಂತೆ ಪ್ರತಿಯೊಂದರ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತಾರೆ ದಿನೇಶ್.ದೇಶದಲ್ಲೇ ಕರ್ನಾಟಕ ಕೈಗಾರಿಕೋದ್ಯಮದಲ್ಲಿ ಸಾಕಷ್ಟು ಉನ್ನತಿ ಹೊಂದಿದೆ. ಜಿಡಿಪಿ ಬೆಳವಣಿಗೆಗೆ ನಮ್ಮ ರಾಜ್ಯ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಅತಿ ಹೆಚ್ಚು ಬಂಡವಾಳ ಹೂಡುವ ಹೆಗ್ಗಳಿಕೆಗೂ ರಾಜ್ಯವು ಪಾತ್ರವಾಗಿದೆ. ಆದರೆ ಬಂದ್, ಮುಷ್ಕರ, ಚಳವಳಿಗಳು ನಡೆದರೆ ಕೈಗಾರಿಕೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಪ್ರತಿನಿತ್ಯ 15 ಸಾವಿರಕ್ಕೂ ಹೆಚ್ಚು ಲಾರಿಗಳು ಸಂಚರಿಸುತ್ತವೆ. 23 ದಿನಗಳ ಕಾಲ ಬಂದ್ ಆದ ಪರಿಣಾಮ ನಿರೀಕ್ಷೆಗೂ ಮೀರಿ ನಷ್ಟ ಸಂಭವಿಸಿದೆ. ಹಾಗಾಗಿ ಸರ್ಕಾರ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಕಳಕಳಿಯನ್ನು ದಿನೇಶ್ ಹೊರ ಹಾಕಿದರು.ಕೈಗಾರಿಕೆಗಳಷ್ಟೇ ಅಲ್ಲದೆ ಸಾರಿಗೆಗೂ ಕಾವೇರಿ ಮುಷ್ಕರದ ಬಿಸಿ ತಟ್ಟಿದೆ. ಪ್ರತಿದಿನ ಉಭಯ ರಾಜ್ಯಗಳ ನಡುವೆ 300ಕ್ಕೂ ಹೆಚ್ಚು ಬಸ್‍ಗಳು ಸಂಚರಿಸುತ್ತವೆ. ಈವರೆಗೆ ಸಿಕ್ಕಿರುವ ಮಾಹಿತಿಯಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕನಿಷ್ಠ 100 ಕೋಟಿ ನಷ್ಟವಾಗಿದ್ದರೆ, ಲಾರಿ ಸಂಚಾರ ಸ್ಥಗಿತಗೊಂಡಿದ್ದರಿಂದ 500 ಕೋಟಿ ರೂ. ನಷ್ಟ ಉಂಟಾಗಿದೆ.ನಮಗೆ ಅನ್ಯಾಯವಾದ ವೇಳೆ ಪ್ರತಿಭಟನೆ ನಡೆಸುವುದು ಕಾನೂನು ಪ್ರಕಾರ ಸರಿ. ಆದರೆ ಕೈಗಾರಿಕೋದ್ಯಮಗಳಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರು, ಉದ್ಯಮಿಗಳಿಗೆ ತೊಂದರೆ ಕೊಟ್ಟು ಮುಷ್ಕರ ನಡೆಸುವುದು ಎಷ್ಟು ಸಮಂಜಸವೆಂಬ ನೈತಿಕ ಪ್ರಶ್ನೆಯೂ ಉದ್ಭವಿಸುತ್ತದೆ.

* ಕಾವೇರಿ ಮುಷ್ಕರ ಪರಿಣಾಮ 22 ರಿಂದ 25 ಸಾವಿರ ಕೋಟಿ ರೂ.ನಷ್ಟ .
* ಆಟೋಮೊಬೈಲ್ ಹಾಗೂ ಬಿಡಿ ಭಾಗಗಳ ಉತ್ಪಾದನೆ ಸ್ಥಗಿತ.
* ಉಭಯ ರಾಜ್ಯಗಳ ನಡುವೆ ಪ್ರತಿನಿತ್ಯ 1 ಸಾವಿರ ಕೋಟಿ ವಹಿವಾಟು.
* ರಾಜ್ಯದಲ್ಲಿ ಬಂಡವಾಳ ಹೂಡಲು ಹಿಂಜರಿಕೆ.

                                                                                                          – ರವೀಂದ್ರ ವೈ.ಎಸ್.

 

► Follow us on –  Facebook / Twitter  / Google+

Facebook Comments

Sri Raghav

Admin