‘ಕಾವೇರಿ ವಿಚಾರದಲ್ಲಿ ಪ್ರಧಾನಿಯಿಂದ ಕರ್ತವ್ಯಲೋಪವಾಗಿದೆ’

ಈ ಸುದ್ದಿಯನ್ನು ಶೇರ್ ಮಾಡಿ

VICH

ಬೆಂಗಳೂರು, ಸೆ.24- ಕಾವೇರಿ ನೀರಿನ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕಾಗಿತ್ತು. ಅವರಿಂದ ಗಂಭೀರವಾದ ಕರ್ತವ್ಯ ಲೋಪವಾಗಿದೆ ಎಂದು ಹಿರಿಯ ಕಾನೂನು ತಜ್ಞ ಪ್ರೋ.ರವಿವರ್ಮಕುಮಾರ್ ಹೇಳಿದರು.  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದಲ್ಲಿಂದು ಕಾವೇರಿ ಜಲವಿವಾದ ಕುರಿತು ಸುಪ್ರೀಂಕೋರ್ಟ್ ತೀರ್ಮಾನ ಎಷ್ಟು ಅವೈಜ್ಞಾನಿಕ ಮತ್ತು ಕರ್ನಾಟಕ ವಿಧಾನಸಭೆ ಕೈಗೊಂಡ ನಿರ್ಣಯ ಎಷ್ಟು ಅವಶ್ಯಕ ಎಂಬ ಕುರಿತು ಹಮ್ಮಿಕೊಂಡಿದ್ದ ತಜ್ಞರ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ವಸ್ತುಸ್ಥಿತಿ ಅವಲೋಕಿಸಿ ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕಿತ್ತು. ಮನ್‍ಕಿಬಾತ್ ಹೇಳುವ ಮೋದಿ ಅವರ ಬಾಯಲ್ಲಿ ಈ ಕುರಿತು ಚಕಾರ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲಕಾಲಕ್ಕೆ ಉಭಯ ರಾಷ್ಟ್ರಗಳು ಒಪ್ಪಂದದ ಮೂಲಕ ನೀರು ಹಂಚಿಕೆಯಲ್ಲಿ ಮಾರ್ಪಾಡು ಮಾಡಿಕೊಳ್ಳಬಹುದು ಎಂದು ಕಾವೇರಿ ನ್ಯಾಯಾಧಿಕರಣದ ತೀರ್ಪಿನಲ್ಲೇ ಉಲ್ಲೇಖವಿದೆ. ನಮ್ಮಲ್ಲಿ ಕೆರೆಗಳೆಲ್ಲ ಖಾಲಿಯಾಗಿವೆ, ಅಂತರ್ಜಲ ಭತ್ತಿ ಹೋಗಿದೆ. ನಮ್ಮ ಸಂಕಷ್ಟದ ಪರಿಸ್ಥಿತಿ ತಮಿಳುನಾಡಿನಲ್ಲಿ ಉಂಟಾಗಿದ್ದರೆ ಅವರು ಸುಮ್ಮನಿರುತ್ತಿದ್ದರೇ ಎಂದು ಪ್ರಶ್ನಿಸಿದರು.
ಈ ಹಿಂದೆ ತಮಿಳುನಾಡು ಭಾರತದಲ್ಲೇ ನಾವು ಇರುವುದಿಲ್ಲ ಎಂದು ಸಂವಿಧಾನದ ಪ್ರತಿಯನ್ನೇ ಸುಟ್ಟಿದ್ದರು. ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಆಗಲು ಬಿಡಬಾರದು. ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಪ್ರತಿನಿಧಿಸು ತ್ತಾರೆ. ಕಾವೇರಿ ವಿವಾದ ಕೋರ್ಟ್‍ನಲ್ಲಿ ರುವುದರಿಂದ ಪ್ರಧಾನಿಗಳು ಮಧ್ಯಪ್ರವೇ ಶಿಸಲಾಗುವುದಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ತಿಳಿಸಿದರು.

ನಾವೀಗಾಗಲೇ ತಮಿಳುನಾಡಿಗೆ ಹೆಚ್ಚಾಗೇ ನೀರು ಬಿಟ್ಟಿದ್ದೇವೆ. ಇನ್ನೂ ಒಂಭತ್ತು ತಿಂಗಳವರೆಗೆ ಕುಡಿಯಲು ನೀರು ಕಾಯ್ದಿರಿಸಬೇಕು. ಪರಸ್ಪರ ಸಹಬಾಳ್ವೆ ಅತ್ಯಗತ್ಯ. ಪ್ರಧಾನಿ ಇದನ್ನು ಗಮನಿಸ ಬೇಕು ಎಂದು ಸಲಹೆ ನೀಡಿದರು. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ಮುಂದೇನು ಎಂಬ ಆತಂಕ ಎದುರಾಗಿದೆ. ಪ್ರತಿ ಹನಿಯೂ ರಾಜ್ಯದ್ದು. ಕೇಂದ್ರ ಸರ್ಕಾರವಾಗಲಿ, ಮತ್ತ್ಯಾರೇ ಆಗಲಿ ಇದರ ಬಗ್ಗೆ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ರವಿವರ್ಮ ಕುಮಾರ್ ಅಭಿಪ್ರಾಯಪಟ್ಟರು.

ನಿರ್ಣಯ ಸರಿಯಾಗಿದೆ:

ಮತ್ತೊಬ್ಬ ಹಿರಿಯ ಕಾನೂನು ತಜ್ಞ ಅಶೋಕ್ ಹಾರ್ನಳ್ಳಿ ಮಾತನಾಡಿ, ರಾಜ್ಯ ಸರ್ಕಾರ ನಿನ್ನೆ ಅಧಿವೇಶನದಲ್ಲಿ ಕೈಗೊಂಡಿರುವ ಕುಡಿಯುವ ಬಳಕೆಗಷ್ಟೇ ನೀರು ಎಂಬ ನಿರ್ಣಯ ಸರಿಯಾಗಿದೆ ಇದರಿಂದ ಸಂವಿಧಾನದ ಬಿಕ್ಕಟ್ಟು ಉದ್ಭವವಾಗುವುದಿಲ್ಲ. ಈ ಬಗ್ಗೆ ಹೆದರಬೇಕಿಲ್ಲ ಎಂದು ತಿಳಿಸಿದರು. ಒಂದು ವೇಳೆ ಸಂವಿಧಾನಿಕ ಬಿಕ್ಕಟ್ಟು ಎದುರಾದರೆ ಇಡೀ ರಾಜ್ಯವನ್ನೇ ಎದುರು ಹಾಕಿಕೊಳ್ಳಬೇಕಾಗುತ್ತದೆ. ಸುಪ್ರೀಂಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿಲ್ಲ. ಬುದ್ಧಿವಂತಿಕೆಯಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಿದೆ ಎಂದು ಹೇಳಿದರು. ತಮಿಳುನಾಡು ಕೋರ್ಟ್ ಮೊರೆ ಹೋಗುವ ಮುನ್ನ ನಾವು ಕೋರ್ಟ್ ಮೊರೆ ಹೋಗಬೇಕು. ಅಧಿವೇಶನಕ್ಕೆ ಮೊದಲು ಸುಪ್ರೀಂಕೋರ್ಟ್‍ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಈಗ ಸುಪ್ರೀಂಕೋರ್ಟ್ ಮುಖ್ಯಮಂತ್ರಿಗಳ ಮೇಲೆ ನ್ಯಾಯಾಂಗ ನಿಂದನೆಯಡಿ ಕ್ರಮತೆಗೆದುಕೊಳ್ಳುವ ಸಂಭವ ಇರುತ್ತದೆ. ಆದರೂ ಕುಡಿಯುವ ನೀರಿನ ರಕ್ಷಣೆ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ. ನ್ಯಾಯಮೂರ್ತಿಗಳನ್ನು ತೆಗಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಸುಪ್ರೀಂಕೋರ್ಟ್ ಆದೇಶವನ್ನು ಮೊದಲಿನಿಂದ ಪಾಲಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಬಿ.ವಿ.ಆಚಾರ್ಯ ಮಾತನಾಡಿ, ನಾವು ಧೈರ್ಯವಾಗಿ ನ್ಯಾಯಾಂಗ ನಿಂದನೆ ಎದುರಿಸಬಹುದು. ನಿನ್ನೆ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯ ಸರಿಯಾಗಿದೆ ಎಂದು ತಿಳಿಸಿದರು. ಸುಪ್ರೀಂಕೋರ್ಟ್‍ನನ್ನಾಗಲಿ, ಕಾನೂನು ತಜ್ಞರನ್ನಾಗಲಿ ತೆಗಳುವುದು ಸರಿಯಲ್ಲ. ಅ.18ರಂದು ಬರುವ ವಿಚಾರಣೆ ವೇಳೆ ಬೆಂಗಳೂರಿನ ಕುಡಿಯುವ ನೀರಿನ ವಿಚಾರವನ್ನು ಪ್ರಸ್ತಾಪಿಸಬೇಕಿದೆ ಎಂದರು. ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಾವೇರಿ ನೀರಾವರಿ ನಿಗಮದ ಮಾಜಿ ಅಧ್ಯಕ್ಷ ಡಾ.ತಿಮ್ಮೇಗೌಡ ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin