ಕಾವೇರಿ ವಿಚಾರ : ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟ ಬಿಜೆಪಿ ನಡೆ

ಈ ಸುದ್ದಿಯನ್ನು ಶೇರ್ ಮಾಡಿ

BJP

ಬೆಂಗಳೂರು, ಸೆ.16– ಕಾವೇರಿ ನದಿ ನೀರು ಹಂಚಿಕೆ ವಿವಾದ ಕರ್ನಾಟಕದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿದ್ದರೂ ಕೇಂದ್ರದ ಪ್ರಭಾವಿ ಸಚಿವರಾಗಿರುವ ಅನಂತ್‍ಕುಮಾರ್ ಮತ್ತು ಸದಾನಂದಗೌಡ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೇಂದ್ರದಲ್ಲಿ ಅತ್ಯಂತ ಪ್ರಭಾವಿ ಮತ್ತು ಪ್ರಧಾನಿ ನರೇಂದ್ರಮೋದಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈ ಇಬ್ಬರೂ ಸಚಿವರು ಕನಿಷ್ಟ ಪಕ್ಷ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗದಿರುವುದು ಪಕ್ಷದ ವಲಯದಲ್ಲಿ ಅಸಮಾಧಾನ ಸೃಷ್ಟಿಸಿದೆ.  ವಿಶೇಷವಾಗಿ ಅನಂತ್‍ಕುಮಾರ್ ಮತ್ತು ಸದಾನಂದಗೌಡ ಬೆಂಗಳೂರು ಪ್ರತಿನಿಧಿಸುವ ಬಿಜೆಪಿಯ ಪ್ರಭಾವಿಗಳು. ಬೆಂಗಳೂರು ದಕ್ಷಿಣ ಹಾಗೂ ಉತ್ತರ ಲೋಕಸಭಾ ಕ್ಷೇತ್ರ ಬಹುತೇಕ ಕಾವೇರಿ ನದಿ ನೀರು ಪೂರೈಕೆ ಪ್ರದೇಶಕ್ಕೆ ಒಳಪಡುತ್ತದೆ.

ಸೌಜನ್ಯಕ್ಕಾದರೂ ಪ್ರಧಾನಿ ಬಳಿ ಬಿಜೆಪಿ ನಿಯೋಗವನ್ನು ಕೊಂಡೊಯ್ದು ಮಾತುಕತೆ ನಡೆಸಬಹುದಿತ್ತೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.  ಪಕ್ಕದ ತಮಿಳುನಾಡಿನಲ್ಲಿ ನೆಲ-ಜಲ-ಭಾಷೆ ವಿಷಯದಲ್ಲಿ ಒಂದಿಷ್ಟೂ ಅನ್ಯಾಯವಾಗದೆ ಪಕ್ಷಭೇದ ಮರೆತು ರಾಜಕಾರಣಿಗಳೆಲ್ಲರೂ ಒಗ್ಗಟ್ಟಾಗುತ್ತಾರೆ. ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಜುಟ್ಟು ಹಿಡಿದು ತಮ್ಮ ರಾಜ್ಯಕ್ಕೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ. ಆದರೆ, ಕರ್ನಾಟಕದ ರಾಜಕಾರಣಿಗಳು ಮಾತ್ರ ಪ್ರತಿಯೊಂದನ್ನೂ ಲಾಭ-ನಷ್ಟದಲ್ಲೇ ಏಕೆ ನೋಡುತ್ತಾರೆಂಬ ಯಕ್ಷಪ್ರಶ್ನೆ ಎದುರಾಗಿದೆ.
ಡಿ.ವಿ.ಸದಾನಂದಗೌಡ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವಿ ರಾಜಕಾರಣಿ. ಅವರು ರಾಜ್ಯದ ನೆಲ-ಜಲದ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡಿರುವ ಬಿಜೆಪಿಯ ಹಿರಿಯ ನಾಯಕರಲ್ಲೊಬ್ಬರು.

ಇದೇ ರೀತಿ ಅನಂತ್‍ಕುಮಾರ್ ಕೂಡ ನರೇಂದ್ರಮೋದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಮತ್ತೋರ್ವ ಪ್ರಭಾವಶಾಲಿ ನಾಯಕ.  ಆರಂಭದಲ್ಲಿ ಮೋದಿ ಅವರನ್ನು ಕೆಲ ಕಾರಣಗಳಿಂದ ದೂರ ಇಟ್ಟಿದ್ದರಾದರೂ ಬಿಹಾರ ಉಸ್ತುವಾರಿ ವಹಿಸಿಕೊಂಡ ಬಳಿಕ ಅವರಿಗೆ ಅತ್ಯಂತ ಪ್ರಭಾವಿ ಎನಿಸಿದ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಖಾತೆ ನೀಡಲಾಯಿತು. ಎಂತಹ ಸಂದರ್ಭದಲ್ಲೂ ನೇರವಾಗಿ ಪ್ರಧಾನಿಯನ್ನು ಭೇಟಿ ಮಾಡುವ ಕೆಲವೇ ಕೆಲವು ಬಿಜೆಪಿ ನಾಯಕರಲ್ಲಿ ಅನಂತ್‍ಕುಮಾರ್ ಕೂಡ ಒಬ್ಬರು. ಈ ಮೊದಲು ರಾಜ್ಯದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ನೇರವಾಗಿ ಯಡಿಯೂರಪ್ಪನವರ ಜತೆ ಮಾತುಕತೆ ನಡೆಸುತ್ತಿದ್ದರು. ಇದೀಗ ಅನಂತ್‍ಕುಮಾರ್ ಕೂಡ ಪ್ರಭಾವಿ ನಾಯಕರಾಗಿಯೇ ಮೋದಿಗೆ ಆಪ್ತರಾಗಿದ್ದಾರೆ.

ಹಿಂದೇಟೇಕೆ..?

ಕಾವೇರಿ ನದಿ ನೀರು ವಿಷಯಕ್ಕೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರು ಎರಡು ದಿನಗಳಿಂದ ಹೊತ್ತಿ ಉರಿಯಿತು. ಅದರಲ್ಲೂ ಅನಂತ್‍ಕುಮಾರ್ ಪ್ರತಿನಿಧಿಸುವ ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ವಿಜಯನಗರ, ಗೋವಿಂದರಾಜನಗರ, ಬೊಮ್ಮನಹಳ್ಳಿ, ಇದೇ ರೀತಿ ಸದಾನಂದಗೌಡ ಪ್ರತಿನಿಧಿಸುವ ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾವೇರಿ ಕಿಚ್ಚು ಹಿಂದೆಂದಿಗಿಂತಲೂ ಜೋರಿತ್ತು. ಈ ಇಬ್ಬರೂ ನಾಯಕರು ಮನಸ್ಸು ಮಾಡಿದ್ದರೆ ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ತಕ್ಷಣವೇ ಪ್ರಧಾನಿಯವರನ್ನು ಭೇಟಿ ಮಾಡಿ ಮಧ್ಯ ಪ್ರವೇಶಿಸಿ ಎರಡೂ ರಾಜ್ಯಗಳ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಬೇಕಿತ್ತು.

ಆದರೆ, ಕೇವಲ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತ ತಮ್ಮ ಜವಾಬ್ದಾರಿ ಏನೆಂಬುದನ್ನು ಮರೆತೇಬಿಟ್ಟರು. ಅದರಲ್ಲೂ ಅನಂತ್‍ಕುಮಾರ್ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರು ಕಾವೇರಿ ವಿಷಯಕ್ಕೆ ಪ್ರಶ್ನಿಸಲು ಮುಂದಾದಾಗ ಏನನ್ನೂ ಮಾತನಾಡದೆ ನುಣುಚಿಕೊಂಡಿದ್ದು ಅವರ ರಾಜಕೀಯ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಂತಿತ್ತು.
ಸಾಮಾನ್ಯವಾಗಿ ದೆಹಲಿ ಮಟ್ಟದಲ್ಲಿ ಅನಂತ್‍ಕುಮಾರ್ ಮಾತಿಗೆ ಹೆಚ್ಚು ತೂಕವಿದೆ. ಪ್ರಧಾನಿ ಸೇರಿದಂತೆ ಯಾವುದೇ ಸಚಿವರನ್ನು ಮಧ್ಯರಾತ್ರಿ ವೇಳೆಯೂ ಭೇಟಿ ಮಾಡುವ ಪ್ರಭಾವಿ ನಾಯಕ. ಆದರೆ, ಕಾವೇರಿ ವಿಷಯದಲ್ಲಿ ಅವರು ಮುತುವರ್ಜಿ ವಹಿಸದಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.

ರಾಜ್ಯಸಭೆಯಲ್ಲಿ ಯಾವುದೇ ಪ್ರಮುಖ ಮಸೂದೆಗಳು ಅಂಗೀಕಾರವಾಗಬೇಕಾದರೆ ಎಐಎಡಿಎಂಕೆ ಬೆಂಬಲ ಅತ್ಯಗತ್ಯ. ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ರಾಜ್ಯಸಭೆಯಲ್ಲಿ ಅನ್ಯ ಪಕ್ಷಗಳಿಗೆ ಶರಣಾಗಲೇಬೇಕು.  ಇಂತಹ ವೇಳೆ ಅನಗತ್ಯವಾಗಿ ಎಐಎಡಿಎಂಕೆ ವಿರುದ್ಧ ಮಾತನಾಡುವುದಾಗಲಿ ಇಲ್ಲವೆ ಅಮ್ಮನ ಕೋಪಕ್ಕೆ ತುತ್ತಾದರೆ ತಮ್ಮ ಭವಿಷ್ಯಕ್ಕೆ ಸಂಚಕಾರ ಬರಬಹುದೆಂಬ ದೂರದೃಷ್ಟಿಯೂ ಅಡಗಿರಬಹುದು. ಬಿಜೆಪಿ ಜತೆ ಭವಿಷ್ಯದಲ್ಲಿ ಹೊಂದಾಣಿಕೆ, ಮೋದಿ ಮತ್ತು ಜಯಲಲಿತಾ ಆತ್ಮೀಯವಾಗಿರುವುದು ಕರ್ನಾಟಕದ ಬಹುತೇಕ ಬಿಜೆಪಿ ನಾಯಕರಿಗೆ ಬಾಯಿ ಬಿಡಲು ಮೀನಾಮೇಷ ಎಣಿಸುತ್ತಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ನಾಡು-ನುಡಿ, ನೆಲ-ಜಲ-ಭಾಷೆ ವಿಷಯದಲ್ಲಿ ಅಧಿಕಾರಕ್ಕಿಂತ ನಾಡಿನ ಹಿತರಕ್ಷಣೆ ಮುಖ್ಯ ಎಂಬುದನ್ನು ಮನಗಾಣಬೇಕು.

► Follow us on –  Facebook / Twitter  / Google+

Facebook Comments

Sri Raghav

Admin