ಕಾವೇರಿ ವಿವಾದ : ಬಿಬಿಎಂಪಿಯಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಕೆಸರೆರಚಾಟ

ಈ ಸುದ್ದಿಯನ್ನು ಶೇರ್ ಮಾಡಿ

BBMNP-01

ಬೆಂಗಳೂರು,ಸೆ.23-ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ವಿರುದ್ದ ಬಿಬಿಎಂಪಿಯಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಕೆಸರೆರಚಾಟ ಮಾಡಿಕೊಂಡಿವೆ. ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ಕಾಂಗ್ರೆಸ್ ಪಕ್ಷ ಕರೆದಿದ್ದ ಸರ್ವಪಕ್ಷ ಸಭೆಗೆ ಬಿಜೆಪಿ ಪಾಲ್ಗೊಳ್ಳದೆ ಹೋದದ್ದು ಹಾಗೂ ಕಾವೇರಿ ವಿವಾದದಲ್ಲಿ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸದೆ ಇರುವುದನ್ನು ಖಂಡಿಸಿ ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಪಾಲಿಕೆಯ ಕೌನ್ಸಿಲ್ ಕಟ್ಟಡದ ಮುಂಭಾಗ ಮೇಯರ್ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.  ಈ ವೇಳೆ ಮೇಯರ್ ಮಂಜುನಾಥ್ ರೆಡ್ಡಿ ಮಾತನಾಡಿ, ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹುದು. ಇಂತಹ ಸೂಕ್ಷ್ಮ ವಿಚಾರದಲ್ಲಿ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕಾಗಿತ್ತು. ಈ ಹಿಂದೆ ಮಾಜಿ ಪ್ರಧಾನಿಗಳಾದ ವಾಜಪೇಯಿ, ಎಚ್.ಡಿ.ದೇವೇಗೌಡ, ಮನಮೋಹನ್ ಸಿಂಗ್ ಮತ್ತಿತರರು ಮಧ್ಯಸ್ಥಿಕೆ ವಹಿಸಿ ಎಲ್ಲ ರಾಜ್ಯಗಳ ಸಭೆ ಕರೆದಿದ್ದರು. ಆದರೆ ಮೋದಿಯವರು ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ಮೌನ ವಹಿಸಿರುವುದು ಆ ಪಕ್ಷದ ಧೋರಣೆಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.

ಕಾವೇರಿ ನೀರು ಅಲಭ್ಯವಾದರೆ ಬೆಂಗಳೂರಿಗರಿಗೂ ಕುಡಿಯಲು ನೀರು ಇರುವುದಿಲ್ಲ. ಆದರೆ ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ಮೂವರು ಬಿಜೆಪಿ ಸಂಸದರು ಪ್ರಧಾನಿಗಳ ಮನವೊಲಿಸುವಲ್ಲಿ ವಿಫಲವಾಗಿರುವುದು ಅಕ್ಷಮ್ಯ. ಇಂಥವರಿಗೆ ಮುಂದಿನ ದಿನಗಳಲ್ಲಿ ಜನರು ಪಾಠ ಕಲಿಸುತ್ತಾರೆ ಎಂದರು.

ತಿರುಗೇಟು:

ಬಿಜೆಪಿ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಗೆ ತಿರುಗೇಟು ನೀಡಿರುವ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ನಮ್ಮ ಪಕ್ಷದ ಹೋರಾಟ ಅಖಂಡ ಕರ್ನಾಟಕದ ಹಿತಕ್ಕಾಗಿ, ಕಾಂಗ್ರೆಸ್ ಪಕ್ಷ ಕೇವಲ ತನ್ನ ಖುರ್ಚಿಗಾಗಿ ಹೋರಾಟ ಮಾಡುತ್ತಿದೆ ಎಂದು ಟೀಕಿಸಿದರು.  ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಲು ಸ್ವತಃ ಕರ್ನಾಟಕ ಸರ್ಕಾರವೆ ಕಾರಣ. ಅದು ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುತ್ತೇವೆ ಎಂದಿರುವುದೇ ಕಾರಣ. ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬ ಗಾದೆಯಂತೆ ನೀರೆಲ್ಲ ಹರಿಸಿದ ಮೇಲೆ ಕಾಂಗ್ರೆಸ್‍ನವರು ಹೋರಾಟ ಮಾಡಲು ಮುಂದಾಗಿದ್ದಾರೆ ಎಂದು ಛೇಡಿಸಿದರು.  ನಾಡಿನ ನೆಲ-ಜಲ, ಭಾಷೆ ವಿಷಯದಲ್ಲಿ ಬಿಜೆಪಿ ಎಲ್ಲ ತ್ಯಾಗಕ್ಕೂ ಸಿದ್ಧವಿರುತ್ತದೆ. ಇದರ ಬಗ್ಗೆ ಕಾಂಗ್ರೆಸ್‍ನವರಿಂದ ಪಾಠ ಕಲಿಯಬೇಕಿಲ್ಲ ಎಂದು ಪದ್ಮನಾಭ ರೆಡ್ಡಿ ತಿರುಗೇಟು ನೀಡಿದರು.

► Follow us on –  Facebook / Twitter  / Google+

Facebook Comments

Sri Raghav

Admin