ಕಾವೇರಿ ವಿಷಯದಲ್ಲಿ ಬದ್ಧತೆ ಸಾಬೀತುಪಡಿಸಬೇಕಾಗಿದೆ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

BJP-01

ಬೆಂಗಳೂರು, ಸೆ.24- ಕಾವೇರಿ ನದಿ ನೀರು ವಿವಾದದಲ್ಲಿ ಸಾರ್ವಜನಿಕರಿಂದ ಟೀಕೆಗೊಳಗಾಗಿರುವ ಬಿಜೆಪಿ ಇದೀಗ ನೆಲ, ಜಲದ ವಿಷಯದಲ್ಲಿ ತನಗಿರುವ ಬದ್ಧತೆಯನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ನಿನ್ನೆ ವಿಧಾನಮಂಡಲದ ಉಭಯ ಸದನಗಳಲ್ಲಿ ಕಾವೇರಿ ಕೊಳ್ಳದ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕೆಂಬ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿತ್ತು. ಅಂದರೆ ಪರೋಕ್ಷವಾಗಿ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂಬುದೇ ಇದರ ಅರ್ಥ-ಉದ್ದೇಶ.
ರಾಜ್ಯಸರ್ಕಾರವೇನೋ ಸಾರ್ವಜನಿಕರ ಒತತಿಡಕ್ಕೆ ಮಣಿದು ತಮಿಳುನಾಡಿಗೆ ನೀರು ಹರಿಸದಿರಲು ತೀರ್ಮಾನಿಸಿದೆ. ಈಗ ಪ್ರತಿಪಕ್ಷ ಬಿಜೆಪಿಗೆ ತನ್ನ ರಾಜ್ಯದ ಜನತೆಯ ಋಣ ತೀರಿಸುವ ಹೊಣೆಗಾರಿಕೆ ಅದರ ಹೆಗಲ ಮೇಲಿದೆ.

ಅಂದರೆ ಕಳೆದ ಸೋಮವಾರ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ಉದಯ್‍ಲಲಿತ್ ಮತ್ತು ದೀಪಕ್ ಮಿಶ್ರ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದರು. ನಾಲ್ಕು ವಾರದೊಳಗೆ ಮಂಡಳಿ ರಚಿಸಿ ಅಧಿಸೂಚನೆ ಹೊರಡಿಸುವಂತೆ ವಿಭಾಗೀಯ ಪೀಠ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈಗ ಬಿಜೆಪಿಯ ಹೊಣೆಗಾರಿಕೆ ಹೆಚ್ಚಾಗಿದೆ ಎಂಬುದಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾದ ಅನಿವಾರ್ಯತೆ ಬಂದಿದೆ. ಏಕೆಂದರೆ, ತಮಿಳುನಾಡು ಸರ್ಕಾರವಾಗಲಿ ಇಲ್ಲವೆ ಕರ್ನಾಟಕ ಸರ್ಕಾರವಾಗಲಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದೆಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿಲ್ಲ. ನ್ಯಾಯಾಲಯ ತನಗೆ ಸಂಬಂಧಪಡದ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ನ್ಯಾಯಾಂಗ ವ್ಯಾಪ್ತಿಯನ್ನೂ ಮೀರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆದೇಶ ನೀಡಿದೆ.

ಮೊದಲಿನಿಂದಲೂ ಕರ್ನಾಟಕ ನಿರ್ವಹಣಾ ಮಂಡಳಿ ರಚನೆಗೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಮುಂದಿನ ತಿಂಗಳ 18ರಂದು ನ್ಯಾಯಾಧಿಕರಣ ನೀಡಿರುವ ತೀರ್ಪು ಪ್ರಶ್ನಿಸಿ ರಾಜ್ಯಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯ ಅಂತಿಮ ತೀರ್ಪು ಹೊರಬೀಳಲಿದೆ. ಅಷ್ಟರೊಳಗೆ ರಾಜ್ಯ ಬಿಜೆಪಿಯ ಎಲ್ಲ ನಾಯಕರು ವೈಮನಸ್ಯ ಮತ್ತು ಭಿನ್ನಾಭಿಪ್ರಾಯ ಮರೆತು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಪ್ರಧಾನಿಗೆ ಒತ್ತಡ ಹಾಕಲೇಬೇಕು. ಈಗಾಗಲೇ ಆದೇಶ ಹೊರಬಿದ್ದು ಒಂದು ವಾರವಾಗಿರುವುದರಿಂದ ಉಳಿದ ಮೂರು ವಾರಗಳ ಅವಧಿಯೊಳಗೆ ಅಧಿಸೂಚನೆ ಹೊರಡಿಸುವುದನ್ನು ತಡೆಯಬೇಕಾಗುತ್ತದೆ. ಇದು ಅತ್ಯಂತ ಜರೂರಿನ ಕೆಲಸವೂ ಆಗಿದೆ.

ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ನಿರ್ಮಲಾ ಸೀತಾರಾಮನ್ ಹಾಗೂ ಸಂಸದರು, ರಾಜ್ಯಸಭಾ ಸದಸ್ಯರು ಪ್ರಧಾನಿ ಮೇಲೆ ಒತ್ತಡ ತಂತ್ರ ಅನುಸರಿಸಿ ಮಂಡಳಿ ರಚನೆ ತಡೆಯುವ ಸರ್ವ ಪ್ರಯತ್ನ ಮಾಡಲೇಬೇಕು.  ಈಗಾಗಲೇ ಕಾವೇರಿ ನದಿ ನೀರು ವಿವಾದದಲ್ಲಿ ಬಿಜೆಪಿ ನಡೆ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ನಿನ್ನೆ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಸರ್ಕಾರದ ಬೆಂಬಲಕ್ಕೆ ನಿಲ್ಲುವ ಮೂಲಕ ಉಂಟಾಗಬಹುದಾದ ಮುಜುಗರದಿಂದ ತುಸು ಪಾರಾಗಿದೆ.

ವಿರೋಧ ಏಕೆ..?
ಮೇಲುಸ್ತುವಾರಿ ಸಮಿತಿ 30 ಸಾವಿರ ಕ್ಯೂಸೆಕ್ ಬಿಡಲು ಹೇಳಿತ್ತು. ಆದರೆ, ಸುಪ್ರೀಂಕೋರ್ಟ್ ಆದೇಶದಿಂದಾಗಿ ಸೆ.27ರವರೆಗೆ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಬಿಡಬೇಕು. ಹೊಸ ಆದೇಶದಿಂದ 12 ಸಾವಿರ ಕ್ಯೂಸೆಕ್ ಹೆಚ್ಚು ನೀರು ನೀಡಬೇಕಿದೆ. ಇದರಿಂದಾಗಿ ಏಳು ದಿನದಲ್ಲಿ ಇನ್ನೂ 4 ಟಿಎಂಸಿ ನೀರು ತಮಿಳುನಾಡು ಪಾಲಾಗಲಿದೆ. ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಯಾಗಲಿದ್ದು, ಕಾವೇರಿ ಕೊಳ್ಳದ ಎಲ್ಲ ಡ್ಯಾಂಗಳು ಮಂಡಳಿ ವ್ಯಾಪ್ತಿಗೆ ಬರಲಿದೆ. ನಮ್ಮ ನಾಲೆಗೆ ನೀರು ಬಿಡುವ ನಿರ್ಧಾರವನ್ನೂ ಮಂಡಳಿಯೇ ಮಾಡಲಿದೆ.
ಹೆಸರಿಗೆ ಮಾತ್ರ ಡ್ಯಾಂಗಳು ನಮ್ಮದಾಗಿದ್ದರೂ ಆಡಳಿತವು ಮಂಡಳಿಯ ಕೈಯಲ್ಲಿ ಇರಲಿದೆ. ಮಂಡಳಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು, ತಮಿಳು ಅಧಿಕಾರಿಗಳು ಇರುತ್ತಾರೆ. ನಮ್ಮ ಡ್ಯಾಂಗಳಲ್ಲೂ ತಮಿಳುನಾಡಿನ ಅಧಿಕಾರಿಗಳು ಕುಳಿತು ಕೆಲಸ ಮಾಡುವರು. ಆಗ ಉದ್ಭವಿಸುವ ಪರಿಸ್ಥಿತಿಯನ್ನು ಊಹಿಸಬಹುದು.

ನಿರ್ವಹಣಾ ಮಂಡಳಿಯಲ್ಲಿ ಯಾರು ಇರುತ್ತಾರೆ..?
ಕಾವೇರಿ ನೀರು ನಿರ್ವಹಣಾ ಮಂಡಳಿ ಎಂದರೆ 10 ಜನರ ತಂಡ. ಒಬ್ಬ ಅಧ್ಯಕ್ಷರಿದ್ದು, ಅವರೇ ಮಂಡಳಿಯನ್ನು ಮುನ್ನಡೆಸಲಿದ್ದಾರೆ. ಜಲಸಂಪನ್ಮೂಲ ನಿರ್ವಹಣೆಯಲ್ಲಿ ಕನಿಷ್ಠ 20 ವರ್ಷ ಅನುಭವ ಇರುವ ಮುಖ್ಯ ಎಂಜಿನಿಯರ್ ದರ್ಜೆಯ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಇಬ್ಬರು ಸದಸ್ಯರು (ಓರ್ವ ಜಲಾಶಯ ನಿರ್ವಹಣೆಯ ಮುಖ್ಯ ಎಂಜಿನಿಯರ್ ದರ್ಜೆ, ಮತ್ತೊಬ್ಬ ಮಣ್ಣು ಮತ್ತು ಬೆಳೆ ತಜ್ಞ), ಕೇಂದ್ರ ಸರ್ಕಾರದ ಇಬ್ಬರು ಪ್ರತಿನಿಧಿಗಳು (ಮುಖ್ಯ ಎಂಜಿನಿಯರ್ ಅಥವಾ ಕಮಿಷನರ್ ದರ್ಜೆಯ ಅಧಿಕಾರಿಗಳು), 4 ರಾಜ್ಯಗಳ ತಲಾ ಓರ್ವ ಪ್ರತಿನಿಧಿ (ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಪ್ರತಿನಿಧಿಗಳು) ಹಾಗೂ ಓರ್ವ ಕಾರ್ಯದರ್ಶಿ ಇರುತ್ತಾರೆ.

ವಿಚಾರಣೆ ವೇಳೆ ಮಂಡಳಿ ಸ್ಥಾಪನೆ:
ಐತೀರ್ಪಿನ ವಿರುದ್ಧ ಕರ್ನಾಟಕ ವಿಶೇಷ ಮೇಲ್ಮನವಿ ಸಲ್ಲಿಸಿದ್ದು, ನಿರ್ವಹಣಾ ಮಂಡಳಿ ರಚಿಸಬಾರದು ಎಂಬುದೇ ಪ್ರಮುಖ ಅಂಶವಾಗಿದೆ. ಇದರ ವಿಚಾರಣೆಯು ಅ.18ರಂದು ಸುಪ್ರೀಂಕೋರ್ಟ್‍ನಲ್ಲಿ ನಿಗದಿಯಾಗಿದೆ.

Facebook Comments

Sri Raghav

Admin