ಕಾವೇರಿ ಸಂಕಷ್ಟ : ಪಕ್ಷಭೇದವಿಲ್ಲದೆ ಎಲ್ಲರೂ ಒಗ್ಗೂಡಲು ಮಾಜಿ ಪ್ರಧಾನಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

devegowda

ಚಿಕ್ಕಮಗಳೂರು, ಸೆ.7- ಕರ್ನಾಟಕದಲ್ಲಿ ಕಾವೇರಿ ಜಲ ವಿವಾದ ಮತ್ತು ಇಲ್ಲಿನ ಸಂಕಷ್ಟಗಳ ನೈಜ ಪರಿಸ್ಥಿತಿಯನ್ನು ಸಮಗ್ರವಾಗಿ ಅರಿತುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಕನ್ನಡ ಪರ ಸಂಘಟನೆಗಳು ಮತ್ತು ಇವರ ಸಂಘ-ಸಂಸ್ಥೆಗಳು ಒಂದೇ ಧ್ವನಿಯಾಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕರೆ ನೀಡಿದರು.ಚಿಕ್ಕಮಗಳೂರಿಗೆ ಆಗಮಿಸಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿ, ತಮಿಳುನಾಡು ರಾಜ್ಯದಲ್ಲಿ ಹಲವು ಪಕ್ಷಗಳಿವೆ. ಅವುಗಳ ಧೋರಣೆಗಳು ಬೇರೆ ಬೇರೆ ಆದರೆ ಕಾವೇರಿ ವಿಷಯ ಬಂದಾಗ ಈ ಎಲ್ಲಾ ಪಕ್ಷಗಳು ಒಂದಾಗುತ್ತವೆ. ಆದರೆ ಕರ್ನಾಟಕದಲ್ಲಿ ಅಂತಹ ವಾತಾವರಣವಿಲ್ಲ. ಕರ್ನಾಟಕದಲ್ಲಿ ಐಕ್ಯತೆಯ ರಾಜಕೀಯ ಬೆಳವಣಿಗೆ ಇಲ್ಲ. ಒಂದೇ ನಿರ್ಣಯಕ್ಕೆ ಬರುವ ಮನೋಭಾವನೆಯನ್ನು ಹೊಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ಪರ ಸಂಘಟನೆಗಳು ಅವರವರ ಭಾವನೆಗೆ ತಕ್ಕಂತೆ ಕೆಲಸ ಮಾಡಿಕೊಂಡು ಹೋಗುತ್ತಿವೆ. ರೈತ ಸಂಘಟನೆಗಳು ಕೂಡ ಇದೇ ಹಾದಿ ಹಿಡಿದಿವೆ. ಆದರೆ ತಮಿಳುನಾಡಿನ ರಾಜಕೀಯ ಪಕ್ಷದಲ್ಲಿ ಒಡಕಿನ ಧ್ವನಿ ಇಲ್ಲ. ರಾಜ್ಯದ ಹಿತ ದೃಷ್ಟಿಯಿಂದ ರಾಜಕೀಯವನ್ನು ಹೊರಗೆ ಇಟ್ಟು ಕೆಲಸ ಮಾಡುತ್ತಾರೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದೇ ಪ್ರತಿಕೂಲ ಪರಿಣಾಮ ಎದುರಿಸುವಂತಾಗಿದೆ ಎಂದರು.ತಮಿಳುನಾಡಿಗೆ ಸಾಂಬಾ ಬೆಳೆ ಬೆಳೆಯಲು ನೀರಿನ ಅಗತ್ಯವಿದೆ. ಹಾಗಾಗಿ ಪ್ರತಿ ದಿನ 10 ಕ್ಯೂಸೆಕ್ಸ್‍ನಂತೆ 10 ದಿನ ನೀರು ಬಿಡಲು ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಸೂಚನೆ ನೀಡಿದೆ ಎಂದು ಕೋರ್ಟ್‍ನ ಆದೇಶವನ್ನು ಮಾಧ್ಯಮದವರ ಮುಂದೆ ಓದಿ ಹೇಳಿದರು.
ನ್ಯಾಯಾಲಯ ಹೇಳಿರುವ ಪ್ರಕಾರ ಕರ್ನಾಟಕ ನೀರು ಬಿಡಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ ಈ ವರ್ಷ ವಾಡಿಕೆ ಮಳೆಯಾಗಿಲ್ಲ. ಮುಂದಿನ ದಿನಗಳಲ್ಲಿ ಮಳೆಯನ್ನು ನಿರೀಕ್ಷಿಸಲಾಗದು. ನಮ್ಮಲ್ಲಿ ಕೂಡ ಬೆಳೆದಿರುವ ಬೆಳೆಗಳಿಗೆ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ಕಾವೇರಿ ನೀರನ್ನೇ ನಂಬಿರುವ 5 ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಎದುರಾಗಲಿದೆ.ಈ ಎಲ್ಲದಕ್ಕೂ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ಷ್ಮವಾಗಿ ರಾಜ್ಯ ಸರ್ಕಾರ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.ಶಾಸಕ ಬಿ.ಬಿ.ನಿಂಗಯ್ಯ, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಜತೆಯಲ್ಲಿದ್ದರು.

 

Follow us on –  Facebook / Twitter  / Google+

Facebook Comments

Sri Raghav

Admin