ಕಾವೇರಿ ಹರಿಬಿಟ್ಟ ಸರ್ಕಾರದ ಕ್ರಮ ವಿರೋಧಿಸಿ ಗೊರೂರಿನಿಂದ ಬೆಂಗಳೂರುವರೆಗೆ ಜೆಡಿಎಸ್ ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

Revanna

ಹಾಸನ, ಸೆ.11- ತಮಿಳುನಾಡಿಗೆ ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡಲು ತೀರ್ಮಾನಿಸಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಹಾಸನ ಜೆಡಿಎಸ್ ಹೋರಾಟ ಕೈಗೊಂಡಿದ್ದು, ಗೊರೂರಿನ ಹೇಮಾವತಿ ಜಲಾಶಯದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಸೆ.16ರಿಂದ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ಬೆಳೆನಷ್ಟಕ್ಕೆ ಎಕರೆಗೆ 50 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಶಾಶ್ವತ ನೀರು ಒದಗಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಹಾಸನ ಜೆಡಿಎಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ ಧೋರಣೆ, ರೈತರ ಬಗೆಗಿನ ನಿಷ್ಕಾಳಜಿಯಿಂದ ತಮಿಳುನಾಡಿಗೆ ನೀರು ಹರಿಯುತ್ತಿದೆ. ನಮ್ಮಲ್ಲಿ ಬೆಳೆದು ನಿಂತಿರುವ ಬೆಳೆಗೆ ನೀರಿಲ್ಲ, ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿ ನಿರ್ಮಾಣಕ್ಕೆ ಸರ್ಕಾರವೇ ನೇರ ಹೊಣೆ. ಸರ್ಕಾರದ ಈ ಧೋರಣೆಯಿಂದ ರೈತರ ಬೆಳೆ ನಷ್ಟವಾಗಿದ್ದು, ಪ್ರತಿ ಎಕರೆಗೂ 50 ಸಾವಿರ ನೀಡಬೇಕೆಂದು ಆಗ್ರಹಿಸಿದರು. 16ರಿಂದ ಹಾಸನದಿಂದ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಂಡು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಲಾಗುವುದು. ಭಂಡ ಸರ್ಕಾರದ ಕಣ್ಣು ತೆರೆಸಲಾಗುವುದು ಎಂದು ಹೇಳಿದರು.

ಹೇಮಾವತಿ ಇಳಿಮುಖ: ಕಾವೇರಿ ನೀರು ಬಿಡುಗಡೆಗೆ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಹೇಮಾವತಿ ಡ್ಯಾಮ್‍ನಿಂದ ದಿನನಿತ್ಯ ಎಂಟೂವರೆ ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಯಾಗುತ್ತಿದ್ದು, ಜಿಲ್ಲೆಯ ಅನ್ನದಾತರಲ್ಲಿ ಆತಂಕ ಹೆಚ್ಚಾಗಿದೆ. ಹೇಮಾವತಿ ಜಲಾಶಯದ ಒಟ್ಟು ಹೊರ ಹರಿವು ಒಟ್ಟು 12,880 ಕ್ಯೂಸೆಕ್ಸ್. ಜಲಾಶಯದ ಒಳ ಹರಿವು ಕೇವಲ 703 ಕ್ಯೂಸೆಕ್ಸ್. ದಿನೇ ದಿನೇ ಒಂದು ಟಿಎಂಸಿಗಿಂತ ಹೆಚ್ಚು ನೀರು ಇಳಿಮುಖವಾಗುತ್ತಿದೆ. ಇಂದಿನ ಗರಿಷ್ಠ ಮಟ್ಟ 2886 ಅಡಿ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin